ಆಸ್ಟ್ರೇಲಿಯಾದ ಶಿಕ್ಷಣ ತಜ್ಞ ಈಗ ಈ ರಾಜ್ಯದ ಶಾಸಕ!

By Web DeskFirst Published Dec 20, 2018, 4:02 PM IST
Highlights

ಆಸ್ಟ್ರೇಲಿಯಾದಲ್ಲಿ ಶಿಕ್ಷಣತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಯುವಕನೊಬ್ಬ, ತನ್ನ ನಾಡಿನ ಅಭಿವೃದ್ಧಿಗಾಗಿ, ತನ್ನ ಜನರ ಕಾಳಜಿಯಿಂದ ತವರು ನಾಡಿಗೆ ಮರಳಿದ್ದಾರೆ. ಅಲ್ಲದೇ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ನೀಡಿ ಜನರ ವಿಶ್ವಾಸ ಗಿಟ್ಟಿಸಿಕೊಂಡು ಸದ್ಯ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಷ್ಟಕ್ಕೂ ಆ ನಾಯಕ ಯಾರು? ಇಲ್ಲಿದೆ ವಿವರ

ಜೈಪುರ[ಡಿ.20]: ರಾಜಕೀಯ ನಾಯಕರು ಅಶಿಕ್ಷಿತರು ಅಥವಾ ಹೆಚ್ಚಿನ ಶಿಕ್ಷಣ ಪಡೆದಿಲ್ಲ ಒಳ್ಳೆಯ ಶಿಕ್ಷಣ ಪಡೆದರವರು ರಾಜಕೀಯಕ್ಕೆ ಅದರಲ್ಲೂ ಭಾರತದ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಇಚ್ಛಿಇಸುವುದಿಲ್ಲ ಎಂಬ ಮಾತುಗಳು ಸದ್ದು ಮಾಡುತ್ತಲೇ ಇರುತ್ತವೆ. ಆದರೆ ಕೆಲ ನಾಯಕರು ಈ ಮಾತುಗಳನ್ನು ಸುಳ್ಳಾಗಿಸಿದ್ದಾರೆ. ಸದ್ಯ ಈ ಕೆಲವೇ ಕೆಲವು ರಾಜಕೀಯ ನಾಯಕರ ಪಟ್ಟಿಗೆ ಮತ್ತೊಬ್ಬ ಶಾಸಕರ ಹೆಸರು ಸೇರ್ಪಡೆಗೊಂಡಿದೆ. ಆಸ್ಟ್ರೇಲಿಯಾದಲ್ಲಿ ಶಿಕ್ಷಣ ತಜ್ಞರಾಗಿ ಕೆಲಸ ಮಾಡುತ್ತಿದ್ದ ಅವರು, ತಾನು ಹುಟ್ಟಿ ಬೆಳೆದ ಊರಿನ ಅಭಿವೃದ್ಧಿಗಾಗಿ ತವರು ನಾಡಿಗೆ ಮರಳಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸಿ ಸದ್ಯ ಶಾಸಕರಾಗಿ ಜನರ ಸೇವೆ ಮಾಡಲು ಅಣಿಯಾಗಿದ್ದಾರೆ. ಅಷ್ಟಕ್ಕೂ ಆ ನಾಯಕನಾರು ಅಂತೀರಾ? ಇಲ್ಲಿದೆ ನೋಡಿ ವಿವರ

ರಾಜಕೀಯ ನಾಯಕರೆಲ್ಲಾ ಅಶಿಕ್ಷಿತರಲ್ಲಾ ಎಂದು ಮತ್ತೊಮ್ಮೆ ಸಾಬೀತುಪಡಿಸಿದ 36 ವರ್ಷದ ಯುವ ಶಾಸಕ ಬಿಎಸ್ ಪಿ ಪಕ್ಷದ ವಾಜಿಬ್ ಅಲಿ. ಕೆಲ ದಿನಗಳ ಹಿಂದಷ್ಟೇ ನಡೆದ ರಾಜಸ್ಥಾನ ಚುನಾವಣೆಯಲ್ಲಿ ನಗರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವನ್ನು ತನ್ನದಾಗಿಸಿಕೊಂಡಿದ್ದಾರೆ.   ನಗರ್ ಎಂಬ ಊರಿನಲ್ಲಿ ಜನಿಸಿದ ವಾಜಿಬ್ 2005ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಗೆ ತೆರಳಿದ್ದರು. ಶಿಕ್ಷಣ ಮುಗಿಸಿದ ಅವರು ಅಲ್ಲೇ ತಮ್ಮ ಕುಟುಂಬ ನಡೆಸಿಕೊಂಡು ಬಂದಿದ್ದ ಉದ್ಯಮವನ್ನು ಮುಂದುವರೆಸಿದ್ದಾರೆ. ಪ್ರಸ್ತುತ ವಾಜಿಬ್ ಅಲಿ ಆಸ್ಟ್ರೇಲಿಯಾದಲ್ಲಿ ಒಟ್ಟು 11 ಕಾಲೇಜುಗಳು ಹಾಗೂ 1 ಶಾಲೆಯನ್ನು ನಡೆಸುತ್ತಿದ್ದಾರೆ. 

ಆದರೆ 2013ರಲ್ಲಿ ತನ್ನ ತವರು ನಾಡನ್ನು ನೆನಪಿಸಿಕೊಂಡ ವಾಜಿಬ್, ತಾನು ಹುಟ್ಟಿ ಬೆಳೆದ ಊರನ್ನು ಅಲ್ಲಿನ ಜನರನ್ನು ಅಭಿವೃದ್ಧಿಪಡಿಸಬೇಕು ಎಂಬ ಕನಸಿನೊಂದಿಗೆ ಭಾರತಕ್ಕೆ ವಾಪಾಸಾಗುತ್ತಾರೆ. ಇಲ್ಲಿಗೆ ಬಂದ ಬಳಿಕ ತನ್ನ ಕನಸನ್ನು ಸಾಕಾಗೊಳಿಸಲು ರಾಜಕೀಯಕ್ಕೆ ಸೇರಿಕೊಳ್ಳುತ್ತಾರೆ. ಆದರೆ 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿತಾ ಸಿಂಗ್ ರಿಂದ ಸೋಲನುಭವಿಸುತ್ತಾರೆ. ಹೀಗಿದ್ದರೂ ತಮ್ಮ ಛಲ ಬಿಡದ ವಾಜಿಬ್ ತನ್ನೂರಿನ, ವಿಶೇಷವಾಗಿ ತನ್ನ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ.

ಇದೇ ಪರಿಶ್ರಮದ ಫಲ ಎಂಬಂತೆ 2018ರಲ್ಲಿ ನಡೆದ ರಾಜಸ್ಥಾನ ವಿಧಾನಸಭೆಯಲ್ಲಿ ತನ್ನ ಎದುರಾಳಿಯಾಗಿ ಬಿಜೆಪಿ ಅಭ್ಯರ್ಥಿ ಅನಿತಾರನ್ನು 26,786 ಮತಗಳಿಂದ ಸೋಲಿಸಿ ನಗರ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ತಮ್ಮ ರಾಜಕೀಯ ಎಂಟ್ರಿ ಕುರಿತಾಗಿ ಪ್ರತಿಕ್ರಿಯಿಸಿರುವ ವಾಜಿಬ್ 'ನನಗೆ ನನ್ನ ದೇಶ, ನನ್ನ ರಾಜ್ಯ ಅದರಲ್ಲೂ ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿರುವ ನನ್ನ ಕ್ಷೇತ್ರ ನಗರ್ ನ್ನು ಅಭಿವೃದ್ಧಿಪಡಿಸಬೇಕೆಂಬ ಕನಸಿತ್ತು. ಇದೇ ಕಾರಣದಿಂದ ರಾಜಕೀಯಕ್ಕೆ ಪ್ರವೇಶಿಸಿದೆ. ಈಗ ಜನರೂ ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಅವರ ಭರವಸೆಯಂತೆ ನಾನು ಅವರ ಸೇವೆ ಮಾಡುತ್ತೇನೆ ' ಎಂದಿದ್ದಾರೆ.

ಇತ್ತೀಚೆಗೆ ನಮ್ಮ ದೇಶದಲ್ಲಿ ಯುವಕರು ರಾಜಕೀಯದಿಂದ ದೂರ ಸರಿದು, ಇತರ ಉದ್ಯೋಗಗಳಿಗೆ ಸೇರುತ್ತಿರುವುದು ಸಾಮಾನ್ಯವಾಗಿದೆ. ಹೀಗಿರುವಾಗ ಆಸ್ಟ್ರೇಲಿಯಾದಲ್ಲಿ ಶಿಕ್ಷಣತಜ್ಞರಾಗಿದ್ದ ಯುವ ನಾಯಕ ತಮ್ಮ ಕೆಲಸ ಬಿಟ್ಟು ತನ್ನ ನಾಡಿನ ಜನರ ಸೇವೆಗೆಂದು ಮರಳಿದ್ದಾರೆ. ಇಂತಹವರು ಯುವಜನಕ್ಕೆ ನಿಜಕ್ಕೂ ಪ್ರೇರಣೆ.

click me!