
ಬೆಂಗಳೂರು (ಡಿ.15): ನೂತನ ವರ್ಷಾಚರಣೆ ಪ್ರಯುಕ್ತ ಹೊಸ ವರ್ಷದ ಮುನ್ನಾದಿನ (ಡಿ.31) ಹಾಗೂ ಹೊಸ ವರ್ಷದ ಮೊದಲ ದಿನ (ಜ.1) ಎರಡು ದಿನ ಮದ್ಯ ಮಾರಾಟ ನಿಷೇಧಿಸುವುದಿಲ್ಲ. ಬದಲಾಗಿ, ನಗರ ದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯಕ್ಕೆ ತಿಳಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ.
ಹೊಸ ವರ್ಷಾಚರಣೆ ನೆಪದಲ್ಲಿ ಕಳೆದ ವರ್ಷ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ವರದಿಯಾಗಿತ್ತು. ಇದಕ್ಕೆಲ್ಲ ಮದ್ಯಪಾನವೇ ಮೂಲ ಕಾರಣವಾಗಿದ್ದು, ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಬೇಕು ಎಂದು ಎನ್. ನಾಗೇಶ್ ಎಂಬ ವ್ಯಕ್ತಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕ ಪ್ರದೇಶ ಗಳಲ್ಲಿ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳ ಕುರಿತು ವಿವರಣೆ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ. ಸರ್ಕಾರವು ಇಂದು ತನ್ನ ಅಭಿಪ್ರಾಯ ನ್ಯಾಯಾಲಯದ ಮುಂದೆ ತಿಳಿಸಲಿದ್ದು, ಡಿ.15 ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ ಯಾವುದೇ ಕಾರಣಕ್ಕೂ ಮದ್ಯಪಾನ ಹಾಗೂ ಮಾರಾಟ ನಿಷೇಧಿಸುವುದಿಲ್ಲ. ಬದಲಿಗೆ ರಾಜ್ಯ ಸರ್ಕಾರ ಕೈಗೊಳ್ಳಲಿರುವ ಭದ್ರತಾ ಕ್ರಮಗಳ ಬಗ್ಗೆ ವಿವರಣೆ ನೀಡಲು ಗೃಹ ಇಲಾಖೆ ನಿರ್ಧರಿಸಿದೆ. ಹೊಸ ವರ್ಷಾಚರಣೆಯ ಸಂಭ್ರಮವನ್ನು ಒಂದಷ್ಟು ಮೊಟಕುಗೊಳಿಸಲು ಸರ್ಕಾರ ಈ ಬಾರಿ ಮುಂದಾಗಬಹುದು ಎನ್ನಲಾಗುತ್ತಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು. ಕಳೆದ ವರ್ಷ ಟ್ಯಾನರಿ ರಸ್ತೆಯಲ್ಲಿ ಮುಂಜಾನೆ 3.30 ರ ವೇಳೆಯಲ್ಲಿ ಅಹಿತಕರ ಘಟನೆ ವರದಿಯಾಗಿತ್ತು. ಹೀಗಾಗಿ ಅಗತ್ಯ ಬಿದ್ದರೆ ತಡರಾತ್ರಿ 1 ಗಂಟೆ ವರೆಗೆ ಮಾತ್ರ ವರ್ಷಾಚರಣೆಗೆ ಅವಕಾಶ ನೀಡಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಭದ್ರತಾ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗುವುದು. ಇದು ಗೃಹ ಇಲಾಖೆಯ ವಿಶ್ವಾಸದ ಪ್ರಶ್ನೆ ಎಂದು ಗೃಹ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕಾನೂನು ಸುವ್ಯಸ್ಥೆ ವಿಫಲವಾಗಿಲ್ಲ: ಕಳೆದ ವರ್ಷದ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿರಲಿಲ್ಲ. ಏಕೆಂದರೆ, ಈ ದೌರ್ಜನ್ಯ ನಡೆದಿದ್ದು ದೌರ್ಜನ್ಯಕ್ಕೆ ಒಳಗಾದವರ ಸಂಬಂಧಿಕರಿಂದಲೇ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಎಂಜಿ ರಸ್ತೆ, ಬ್ರಿಗೇಡ್ ಜಂಕ್ಷನ್ ಬಳಿ ನಡೆದಿದೆ ಎನ್ನಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿರುವುದಕ್ಕೆ ಯಾವುದೇ ಆಧಾರಗಳೇ ಇಲ್ಲ. 25 ಸಿಸಿ ಕ್ಯಾಮೆರಾ ಅಳವಡಿಕೆಯಾಗಿದ್ದರೂ ಯಾವುದೇ ಅಹಿತಕರ ಘಟನೆ ಸಂಬಂಧಪಟ್ಟ ಜಾಗದಲ್ಲಿ ದಾಖಲಾಗಿರಲಿಲ್ಲ. ಜತೆಗೆ ಪ್ರಕರಣ ಮುಂದುವರೆಸಲೂ ಯಾರೊಬ್ಬರೂ ಮುಂದೆ ಬಂದಿಲ್ಲ. ಇದೊಂದು ವದಂತಿಯಾಗಿದ್ದು ಕಳೆದ ವರ್ಷ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೀಗಾಗಿ ಈ ವರ್ಷವೂ ಸೂಕ್ತ ಶಾಂತಿ ವ್ಯವಸ್ಥೆ ಕಾಪಾಡುವ ಭರವಸೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.