ಭಾಸ್ಕರ್ ಶೆಟ್ಟಿ ಹೋಮಕುಂಡ ಹತ್ಯೆ ಕೇಸ್`ನಲ್ಲಿ ಟ್ವಿಸ್ಟ್..

By venugopala -  |  First Published Sep 1, 2016, 1:34 PM IST

ಯಾವ ಆಸ್ತಿಗೆ ಬಯಸಿ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ ಕೊಲೆ ನಡೆಸಿದ್ದರೋ ಆ ಆಸ್ತಿ ಮೊದಲೇ ಪರರ ಸ್ವತ್ತಾಗಿತ್ತು


ಉಡುಪಿ(ಸೆ.01): ಉಡುಪಿಯ ಉದ್ಯಮಿ ಭಾಸ್ಕರ್​ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಭಾಸ್ಕರ ಶೆಟ್ಟಿ ಕೊಲೆಗೆ ಮೂಲ ಕಾರಣ ಅವರು ದೇಶ ವಿದೇಶದಲ್ಲಿ ಹೊಂದಿದ್ದ ಅಪಾರ ಆಸ್ತಿ. ಪತ್ನಿಯ ಅನೈತಿಕ ಸಂಬಂಧದಿಂದ ಮನನೊಂದು ಭಾಸ್ಕರ ಶೆಟ್ಟಿ, ಆಸ್ತಿಯನ್ನು ತನ್ನ ತಾಯಿಯ ಹೆಸರಿಗೆ ಮಾಡಲು ಮುಂದಾದಾಗ ಕೊಲೆ ನಡೆದಿತ್ತು.

ಆದರೆ, ಕೊಲೆಗೂ ಮುನ್ನವೇ ಅವರು ವಿಲ್ ಮಾಡಿದ್ದರು ಎನ್ನುವ ಸಂಗತಿ ಸಿಐಡಿ ತನಿಖೆಯ ವೇಳೆ ಬಹಿರಂಗವಾಗಿದೆ.  ವಿದೇಶದ ಆಸ್ತಿಯನ್ನು ತನ್ನ ಸಹೋದರರಿಗೂ ಉಡುಪಿಯಲ್ಲಿರುವ ಆಸ್ತಿಯನ್ನು ತಾಯಿಯ ಹೆಸರಿಗೆ ಬರೆದಿದ್ದರು. ಯಾವ ಆಸ್ತಿಗೆ ಬಯಸಿ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ ಕೊಲೆ ನಡೆಸಿದ್ದರೋ ಆ ಆಸ್ತಿ ಮೊದಲೇ ಪರರ ಸ್ವತ್ತಾಗಿತ್ತು ಎನ್ನುವುದು ಸದ್ಯದ ವದಂತಿ.

Tap to resize

Latest Videos

ಭಾಸ್ಕರ್​ ಶೆಟ್ಟಿ ಕೊಲೆಯಲ್ಲಿ ಮೂವರು ಪ್ರಮುಖ ಆರೋಪಿಗಳಾದರೂ, ಇನ್ನೂ ಹಲವರ ಸಹಾಯವಿತ್ತು ಅನ್ನೋದು ಸಾರ್ವತ್ರಿಕ ಸಂಶಯ. ಸುಪಾರಿ ಕೊಲೆಗಡುಕರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನುವ ನೆಲೆಯಲ್ಲೂ ಸಿಐಡಿ ತನಿಖೆ ಆರಂಭಿಸಿದೆ. ಇನ್ನೂ, ಡಿವೈಎಸ್ಪಿ ಶ್ರೇಣಿಯ ಓರ್ವ ಅಧಿಕಾರಿಯೊಂದಿಗೆ ಕೊಲೆಗಾರ್ತಿ ರಾಜೇಶ್ವರಿ ನಿರಂತರ ಸಂಪರ್ಕದಲ್ಲಿದ್ದರು ಎಂಬ ವದಂತಿ ರೆಕ್ಕೆಪುಕ್ಕ ಪಡೆದಿದೆ. ಈ ಹಿಂದೆ ಉಡುಪಿ ನಗರದಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಈ ಅಧಿಕಾರಿ ಇತ್ತೀಚೆಗೆ ಡಿವೈಎಸ್ಪಿ ಆಗಿ ಪದೋನ್ನತಿ ಹೊಂದಿದ್ದರು. ರಾಜೇಶ್ವರಿ ಮತ್ತು ಇವರ ನಡುವೆ ನಡೆದ ಸಂಭಾಷಣೆ ಏನು ಅನ್ನೋದು ಕುತೂಹಲದ ಸಂಗತಿಯಾಗಿದೆ. ಇವರದ್ದು ಸಾಮಾನ್ಯ ಒಡನಾಟವೋ ಅಥವಾ ಇವರ ಪರಿಣಿತ ಸಲಹೆಗಳು ಈ ಕೃತ್ಯಕ್ಕೆ ಇಂಬು ನೀಡಿತ್ತೇ ಅನ್ನೋ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ.

 

ತನಿಖೆಯ ಯಾವುದೇ ಅಂಶವನ್ನು ಸಿಐಡಿ ಹೊರಬಿಟ್ಟಿಲ್ಲ. ಅತ್ಯಂತ ಗೌಪ್ಯತೆ ಕಾಪಾಡಿಕೊಂಡಿದೆ. ಸೆ. 6 ರಂದು ಪ್ರಮುಖ ಆರೋಪಿಗಳಾದ ರಾಜೇಶ್ವರಿ, ನವನೀತ ಹಾಗೂ ನಿರಂಜನ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ. ಈ ಸಂದರ್ಭ ಸಿಐಡಿ ಇವರನ್ನು ತನ್ನ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಆ ಬಳಿಕ ಇನ್ನಷ್ಟು ರೋಚಕ ಸತ್ಯಗಳು ಬಯಲಾಗಬಹುದು.

 

ಉಡುಪಿಯಿಂದ ಶಶಿಧರ್​ ಮಾಸ್ತಿಬೈಲು ಸುವರ್ಣನ್ಯೂಸ್​

 

click me!