ಶಿರೂರು ಶ್ರೀಗೆ ಇತ್ತು ಹೆಂಗಸರ ಸಹವಾಸ : ಪೇಜಾವರ ಶ್ರೀ

By Kannadaprabha NewsFirst Published Jul 21, 2018, 8:51 AM IST
Highlights

ವಿಷ ಪ್ರಾಶನದಿಂದ ಮೃತಪಟ್ಟಿದ್ದಾರೆ ಎನ್ನಲಾದ ಶಿರೂರು ಶ್ರೀಗಳ ಬಗ್ಗೆ ಇದೀಗ ಪೇಜಾವರಶ್ರೀಗಳು ಹೇಳಿಕೆ ನೀಡಿದ್ದು, ಅವರಿಗೆ ಹಂಗಸರ ಸಹವಾಸ ಇತ್ತು ಎಂದು ಹೇಳಿದ್ದಾರೆ. ಅಲ್ಲದೇ ಈ ಪ್ರಕರಣ ಸಂಬಂಧ ತಾವು ತನಿಖೆಗೂ ಸಿದ್ಧ ಎಂದಿದ್ದಾರೆ. 

ಬೆಂಗಳೂರು : ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರಿಗೆ ಮೊದಲಿನಿಂದಲೂ ಅನಾರೋಗ್ಯ ಇತ್ತು. ಅವರು ವಿಪರೀತ ಮದ್ಯಪಾನ ಮಾಡುತ್ತಿದ್ದರು. ಅವರಿಗೆ ಮೊದಲೇ ಒಬ್ಬರು ಮಹಿಳೆಯೊಂದಿಗೆ ಸಂಬಂಧ ಇತ್ತು. ಇತ್ತೀಚೆಗೆ ಇನ್ನೊಬ್ಬ ಮಹಿಳೆಯೊಂದಿಗೂ ಸಂಬಂಧ ಬೆಳೆದಿತ್ತು. ಈ ಇಬ್ಬರು ಮಹಿಳೆ ಯರ ಮಧ್ಯೆ ಜಗಳವಾಗಿದ್ದು, ಇವೆಲ್ಲವೂ ಸ್ವಾಮೀಜಿ ಸಾವಿಗೆ ಕಾರಣವಾಗಿರಬಹುದು ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರೂರು ಸ್ವಾಮೀಜಿ ಅವರಿಗೆ ವಿಷಪ್ರಾಶನವಾಗಿದ್ದರೆ ಯಾರು ಮಾಡಿದ್ದಾರೆ? ಅಥವಾ ಸೇವಿಸಿದ ಆಹಾರವೇ ದೋಷವಾಯಿತೇ ಎಂಬ ಬಗ್ಗೆಯೂ ತನಿಖೆಯಾಗಲಿ ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ, ‘ಉಡುಪಿಯ ಇತರ ಮಠಾಧೀಶರಿಗೂ ಮಹಿಳೆಯರ ಸಂಬಂಧ ಇದೆ, ಮಕ್ಕಳಿದ್ದಾರೆ’ ಎಂಬ ಶಿರೂರು ಸ್ವಾಮೀಜಿ ಆರೋಪವನ್ನು ಪೇಜಾವರ ಶ್ರೀಗಳು ತಳ್ಳಿ ಹಾಕಿದರು.  ನನಗೆ ತಿಳಿದಂತೆ ಉಡುಪಿಯ ಇತರ ಮಠಾಧೀಶರು ಬ್ರಹ್ಮಚರ್ಯವನ್ನು  ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಶಿರೂರು ಸ್ವಾಮೀಜಿ ಆರೋಪವನ್ನು ಸಾಬೀತು ಮಾಡಿದರೆ, ಅಂತಹ ಸ್ವಾಮೀಜಿಗಳ  ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಸವಾಲು ಹಾಕಿದರು. ನಮ್ಮ ಮೇಲೂ ಸ್ತ್ರೀ ಸಂಬಂಧ ಮತ್ತು ಮಕ್ಕಳಿರುವ ಬಗ್ಗೆ ಒಬ್ಬರು ಆರೋಪ ಮಾಡಿದ್ದರು, ಆದರೆ ಯಾಕೆ ಸಾಬೀತು ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಬ್ರಹ್ಮಚರ್ಯ ಪಾಲಿಸುತ್ತಿಲ್ಲ ಎಂದಿದ್ದರು: ಶಿರೂರು ಶ್ರೀಗಳ ಮೇಲೆ ನನಗೆ ಪ್ರೀತಿ ಇತ್ತು. ಅವರ ಕಷ್ಟಗಳ ಸಂದರ್ಭದಲ್ಲಿ ಸಹಾಯ ಮಾಡಿದ್ದೆ, ದಾರಿ ತಪ್ಪಿದಾಗ ಕರೆದು ಹಿತವಚನ ಹೇಳಿದ್ದೆ. ಆದರೆ ಅವರು ಬ್ರಹ್ಮಚರ್ಯ ಪಾಲಿಸುತ್ತಿಲ್ಲ ಎಂದು ಅವರೇ ತಮ್ಮ ಬಳಿ ಒಪ್ಪಿಕೊಂಡಿದ್ದರು.ಅದು ಬಹಳ ದೊಡ್ಡ ಅಪರಾಧ. ಬ್ರಹ್ಮಚಾರಿಯಲ್ಲದವನಿಗೆ ಕೃಷ್ಣನ ಮತ್ತು ಪಟ್ಟದ ದೇವರ ಪೂಜೆ ಅಧಿಕಾರ ಇಲ್ಲ. ಆದ್ದರಿಂದ ನಮ್ಮ ಪರ್ಯಾಯದ ಸಂದರ್ಭದಲ್ಲಿ ಅವರಿಗೆ ಕೃಷ್ಣನ ಪೂಜೆ ಅವಕಾಶ ನೀಡಿರಲಿಲ್ಲ, ಅದಕ್ಕೆ ಅವರಿಗೆ ನನ್ನ ಮೇಲೆ ಸಿಟ್ಟಿತ್ತು ಎಂದರು. 

ಪೊಲೀಸರು ನನ್ನ ನ್ನೂ ವಿಚಾರಣೆ ಮಾಡಲಿ

ಶಿರೂರು ಶ್ರೀಗಳ ಸಾವು ಕೊಲೆ ಎಂಬುದನ್ನು ನಾನು ಒಪ್ಪುವುದಿಲ್ಲ. ಇನ್ನು ಅಷ್ಟಮಠಾಧೀಶರು ವಿಷಪ್ರಾಶಾನ ಮಾಡಿಸಿದ್ದಾರೆ ಎಂಬ ಆರೋಪವೇ ಬಹಳ ದೊಡ್ಡ ಅಪರಾಧ. ಅಷ್ಟ ಮಠಾಧೀಶರು ಈ ಕೆಲಸ ಮಾಡುವುದಕ್ಕೆ ಸಾಧ್ಯವೇ ಇಲ್ಲ, ಮಠಾಧೀಶರಲ್ಲಿ ಯಾರೂ ಅಂತಹವರಿಲ್ಲ ಎಂದು ಪೇಜಾವರ ಶ್ರೀಗಳು ದೃಢವಾಗಿ ಹೇಳಿದರು. ಆದರೂ ಯಾವುದೇ ರೀತಿಯ ತನಿಖೆಗೆ ತಾವು ಮತ್ತು ಅಷ್ಟಮಠಗಳು ಮುಕ್ತವಾಗಿದ್ದೇವೆ. ಅಗತ್ಯವಿದ್ದರೆ ಪೊಲೀಸರು ನನ್ನನ್ನು ವಿಚಾರಣೆ ಮಾಡಲಿ, ನಾನು ಸಿದ್ಧನಿದ್ದೇನೆ ಎಂದರು.

ಶ್ರೀಗಳು ಪುಂಡಾಟಿಕೆ ಮಾಡುತ್ತಿದ್ದರು 

ಶಿರೂರು ಶ್ರೀಗಳಿಗೆ ಎಲ್ಲಾ ಜಾತಿ ಜನರ ಬಗ್ಗೆ ಪ್ರೀತಿ ಇತ್ತು. ರೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದರು, ಇದೆಲ್ಲವೂ ಒಳ್ಳೆಯ ಕೆಲಸಗಳೇ. ಆದರೆ ಸಂಗೀತ ಮತ್ತು ನೃತ್ಯದಲ್ಲಿ ಸ್ವಲ್ಪ ಅತಿರೇಕ ಆಸಕ್ತಿ ಇತ್ತು. ಆದರೂ ನಾವು  ಅಕ್ಷೇಪಿಸಿರಲಿಲ್ಲ. ಆದರೆ ಪುಂಡಾಟಿಕೆ ಮಾಡುತ್ತಿದ್ದರು, ಬೆದರಿಕೆ ಒಡ್ಡಿದ ದೂರುಗಳಿದ್ದವು. ದುರ್ವ್ಯಸನ, ಸ್ತ್ರೀಯರ ಜೊತೆ ಸಹವಾಸ ಇತ್ಯಾದಿಗಳ ಬಗ್ಗೆ ಎಚ್ಚರಿಕೆ ನೀಡಿದ್ದೆವು,ಸುಧಾರಿಸಿಕೊಳ್ಳುವುದಕ್ಕೆ ಅವಕಾಶ ನೀಡಿದ್ದೆವು. ಅವರೂ ಒಪ್ಪಿದ್ದರು. ಆದರೆ ಸುಧಾರಿಸಿಕೊಳ್ಳಲಿಲ್ಲ. ಆದ್ದರಿಂದ ಅವರು ಅಷ್ಟಮಠದ ಇತರ ಯುವ ಸ್ವಾಮೀಜಿಗಳಿಗೆ ಮಾದರಿಯಾಗಬಾರದು ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಬ್ರಹ್ಮಚರ್ಯ ಪಾಲಿಸುತ್ತಿಲ್ಲ ವಾದ್ದರಿಂದ ಪೀಠದಲ್ಲಿ ಮುಂದುವರಿಯಬಾರದು, ಉತ್ತ ರಾಧಿಕಾರಿಯನ್ನು ನೇಮಿಸಿ, ಅವರಿಗೆ ಕೃಷ್ಣನ ಪೂಜೆ ಮತ್ತು ಪಟ್ಟದ ದೇವರನ್ನು ಹಿಂದಕ್ಕೆ ನೀಡುವುದಾಗಿ ಹೇಳಿದ್ದೆವು. ಆದರೆ ಅದಕ್ಕೆಲ್ಲಾ ಅವರು ಒಪ್ಪಿರಲಿಲ್ಲ. ಆದ್ದರಿಂದ ಅವರನ್ನು ಅಷ್ಟ ಮಠಾಧೀಶರಿಂದ ಹೊರಗಿಡಲು ತೀರ್ಮಾನಿಸಲಾಗಿತ್ತು ಎಂದು ಪೇಜಾವರ ಶ್ರೀ ಸ್ಪಷ್ಟಪಡಿಸಿದರು. 

click me!