
ನವದೆಹಲಿ(ಸೆ. 10): ತ್ರಿವಳಿ ತಲಾಖ್ ನಿಷೇಧದ ನಂತರ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರವ ಪ್ರಯತ್ನಗಳಾಗುತ್ತಿವೆ. ಭಾರತೀಯ ಮಹಿಳಾ ಮುಸ್ಲಿಮ್ ಸಂಘಟನೆಯೊಂದು ಮುಸ್ಲಿಂ ಕೌಟುಂಬಿಕ ಕಾನೂನಿನ ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಬಹುಪತ್ನಿತ್ವ, ನಿಕಾಹ್ ಹಲಾಲ ಮೊದಲಾದ ಆಚರಣೆ ಮತ್ತು ಸಂಪ್ರದಾಯಗಳಿಗೆ ತಿಲಾಂಜಲಿ ಹಾಡಬೇಕೆಂದು ಮನವಿ ಮಾಡಿಕೊಂಡಿದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ರೂಪಿಸಿರುವ ಮುಸ್ಲಿಮರ ಕೌಟುಂಬಿಕ ಕಾನೂನುಗಳು ಮಹಿಳೆಯರಿಗೆ ವಿರುದ್ಧವಾಗಿಯೇ ಇದ್ದಂತಿವೆ. ಪುರುಷಪ್ರಧಾನ ವ್ಯವಸ್ಥೆಗೆ ತಕ್ಕಂತೆ ಈ ಕಾನೂನುಗಳಿವೆ. ಇವುಗಳ ಸುಧಾರಣೆಯಾಗದಿದ್ದರೆ ಮುಸ್ಲಿಂ ಮಹಿಳೆಯರ ಶೋಷಣೆ ಎಗ್ಗಿಲ್ಲದೇ ಮುಂದುವರಿಯುತ್ತದೆ ಎಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಸಂಘಟನೆಯ(ಬಿಎಂಎಂಎ) ಸಹ-ಸಂಸ್ಥಾಪಕಿ ಜಾಕಿಯಾ ಸೋಮನ್ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ನ್ಯೂಸ್18 ವರದಿ ಮಾಡಿದೆ.
ಬಹುಪತ್ನಿತ್ವ, ನಿಕಾ ಹಲಾಲ, ಖುಲಾ, ಮುಟಾ ಮೊದಲಾದ ವಿವಾಹ ಸಂಬಂಧಿತ ಸಂಪ್ರದಾಯ ಅಥವಾ ಕಾನೂನುಗಳನ್ನು ನಿಷೇಧಿಸಬೇಕು ಎಂದು ಮುಸ್ಲಿಮ್ ಮಹಿಳೆಯರು ತಮ್ಮ ಪ್ರಸ್ತಾನವನೆಗಳಲ್ಲಿ ಕೋರಿದ್ದಾರೆ. ಮಹಿಳೆಯರ ವಿವಾಹಕ್ಕೆ ಕನಿಷ್ಠ ವಯಸ್ಸು 18 ವರ್ಷ ಮತ್ತು ಪುರುಷರ ವಿವಾಹಕ್ಕೆ 21 ವರ್ಷ ನಿಗದಿ ಮಾಡಬೇಕು; ವಿವಾಹವಾಗುವಾಗ ನೀಡಲಾಗುವ ವಧುದಕ್ಷಿಣೆಯ ಪ್ರಮಾಣದಲ್ಲಿ ಹೆಚ್ಚಳವಾಗಬೇಕು ಎಂಬಿತ್ಯಾದಿ ಸುಧಾರಣೆಗಳಿಗೂ ಕೋರಿಕೆ ಸಲ್ಲಿಸಲಾಗಿದೆ.
ಈ ಮೇಲಿನ ಬಹುತೇಕ ಸಂಪ್ರದಾಯಗಳು ಅನೇಕ ಮುಸ್ಲಿಂ ರಾಷ್ಟ್ರಗಳಲ್ಲೇ ನಿಷೇಧಿತವಾಗಿವೆ. ಭಾರತದಲ್ಲಿ ಎಲ್ಲಾ ಧರ್ಮಸ್ಥರ ಕೌಟುಂಬಿಕ ಕಾನೂನುಗಳಲ್ಲಿ ಸುಧಾರಣೆ ತರಲಾಗಿದ್ದರೂ ಮುಸ್ಲಿಮರ ಕಾನೂನಿನಲ್ಲಿ ಎಂದಿಗೂ ತಿದ್ದುಪಡಿಯಾಗಿಲ್ಲ. ಅಲ್ಲದೇ, ಮುಸ್ಲಿಮರಿಗೆ ವೈಯಕ್ತಿಕ ಕಾನೂನು ಮಂಡಳಿಯೊಂದು ಇರುವುದು ಭಾರತದಲ್ಲಿ ಮಾತ್ರವೇ ಎನ್ನಲಾಗಿದೆ.
ಹೋರಾಟ ಹೇಗೆ?
ದೇಶದ 15 ರಾಜ್ಯಗಳ ಮುಸ್ಲಿಮ್ ಮಹಿಳೆಯರು 9 ವರ್ಷ ನಿರಂತರವಾಗಿ ಕೆಲಸ ಮಾಡಿ "ಮುಸ್ಲಿಂ ಫ್ಯಾಮಿಲಿ ಲಾ 2017" ಕರಡು ಪ್ರತಿಯನ್ನು ರಚಿಸಿದ್ದಾರೆ. ಎಲ್ಲಾ ಪಕ್ಷಗಳಲ್ಲಿರುವ ಮಹಿಳಾ ಸಂಸದರ ಮೂಲಕ ಸಂಸತ್'ನಲ್ಲಿ ಈ ಕುರಿತು ಹೋರಾಟ ನಡೆಸಲು ಬಿಎಂಎಂಎ ಉದ್ದೇಶಿಸಿದೆ.
ಖುಲಾ ಎಂದರೇನು?
ಮುಸ್ಲಿಮ್ ಕೌಟುಂಬಿಕ ಕಾನೂನಾಗಿರುವ ಖುಲಾದ ಪ್ರಕಾರ ಪುರುಷನಿಂದ ತಲಾಖ್(ವಿಚ್ಛೇದನ) ಹೊಂದಿದ ಮಹಿಳೆಯು ಮಹರ್'ನ್ನು ವಾಪಸ್ ಕೊಡಬೇಕು. ಮದುವೆಯಾಗುವಾಗ ಹುಡುಗ ನೀಡುವ ವಧುದಕ್ಷಿಣೆಯನ್ನು ಮಹರ್ ಎಂದು ಕರೆಯುತ್ತಾರೆ. ತಲಾಖ್ ಆದ ಬಳಿಕ ಮಹಿಳೆಯು ಈ ವಧುದಕ್ಷಿಣೆಯ ಒಂದು ಪೈಸೆಯನ್ನೂ ಉಳಿಸಿಕೊಳ್ಳದೇ ವಾಪಸ್ ಕೊಡಬೇಕು ಎಂದಿದೆ. ಇದೀಗ, ಈ ಖುಲಾವನ್ನು ರದ್ದು ಮಾಡಬೇಕೆಂಬ ಪ್ರಸ್ತಾವನೆ ಇದೆ.
ನಿಕಾ ಹಲಾಲ ಎಂದರೇನು?
ಇದು ಪುನರ್ವಿವಾಹಕ್ಕೆ ಸಂಬಂಧಿಸಿದ ಕಾನೂನಾಗಿದೆ. ತಲಾಖ್ ಪಡೆದ ಮಹಿಳೆಯು ತನ್ನ ಮೊದಲ ಪತಿಯನ್ನು ಮತ್ತೆ ವಿವಾಹವಾಗಲು ಕೆಲ ನಿಯಮಗಳನ್ನು ರೂಪಿಸಲಾಗಿದೆ. ತಲಾಖ್ ಪಡೆದ ಬಳಿಕ ಇನ್ನೊಬ್ಬರೊಂದಿಗೆ ವಿವಾಹವಾಗಿ ದಾಂಪತ್ಯ ಅಂತ್ಯಗೊಳ್ಳಬೇಕು. ಅಂದರೆ, ಆ ಎರಡನೇ ಮದುವೆಯನ್ನು ಮುರಿದುಕೊಂಡಾಗ ಅಥವಾ ಎರಡನೇ ಪತಿ ಮೃತಪಟ್ಟಾಗ ಮಾತ್ರ ಮೊದಲ ಪತ್ನಿಯನ್ನು ಮಹಿಳೆಯು ಪುನರ್ವಿವಾಹವಾಗಬಹುದು. ಇದನ್ನೇ ನಿಕಾ ಹಲಾಲ ಎಂದು ಕರೆಯುತ್ತಾರೆ.
ಮುಟಾ ಮದುವೆ:
ನಿಕಾ ಅಲ್ ಮುಟಾ ಎಂಬುದು ತಾತ್ಕಾಲಿಕ ಮದುವೆ ವ್ಯವಸ್ಥೆಯಾಗಿದೆ. ಇಲ್ಲಿ ಬಾಯಿ ಮಾತಿನಲ್ಲೇ ಮದುವೆ ಒಪ್ಪಂದವಾಗಿಬಿಡುತ್ತದೆ. ಎಷ್ಟು ಅವಧಿಯವರೆಗೆ ಮದುವೆ ಮತ್ತು ಎಷ್ಟು ವಧುದಕ್ಷಿಣೆ ಇತ್ಯಾದಿಗಳನ್ನು ಪುರುಷನೇ ನಿಶ್ಚಯಿಸಬಹುದು. ಇಸ್ಲಾಂ ಧರ್ಮ ಅಸ್ತಿತ್ವಕ್ಕೆ ಬರುವ ಮುನ್ನವೇ ಅರಬ್ ನಾಡಿನಲ್ಲಿ ಇದು ಚಾಲ್ತಿಯಲ್ಲಿತ್ತು. ಇಸ್ಲಾಂ ಸ್ಥಾಪನೆಯಾದ ಬಳಿಕವೂ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗಿದೆ. ಶಿಯಾ ಮುಸ್ಲಿಮರ ಕಾನೂನಿನಲ್ಲಿ ಇದನ್ನು ಅಳವಡಿಸಲಾಗಿದೆ.
ಇವಷ್ಟೇ ಅಲ್ಲ, ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿರುವ ಅನೇಕ ಅಂಶಗಳನ್ನು ನಿಷೇಧಿಸುವ ಅಥವಾ ಸುಧಾರಣೆಗಳನ್ನು ತರುವ ಪ್ರಸ್ತಾವನೆಗಳು ಈ ಕರಡು ಪ್ರತಿಯಲ್ಲಿವೆ ಎಂದು ನ್ಯೂಸ್18 ಸುದ್ದಿ ವಾಹಿನಿ ಹೇಳಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.