ಕಬ್ಬನ್ ಪಾರ್ಕ್'ನಲ್ಲಿ ಇನ್ನುಮುಂದೆ ಹೊಸ ಆಕರ್ಷಣೆ

By Suvarna Web DeskFirst Published Dec 25, 2017, 8:12 AM IST
Highlights

ಉದ್ಯಾನ ನಗರಿಯ ಆಕರ್ಷಕ ತಾಣಗಳಲ್ಲಿ ಒಂದಾದ ಕಬ್ಬನ್ ಪಾರ್ಕ್‌ನಲ್ಲಿ ಮರದ ದಿಮ್ಮಿಗಳಿಂದ ನಿರ್ಮಿಸಿರುವ ಕಲಾಕೃತಿಗಳು ಕೈಬೀಸಿ ಕರೆಯುತ್ತಿರುವ ಬೆನ್ನಲ್ಲೇ ಮತ್ತಷ್ಟು ಕಲಾಕೃತಿಗಳ ನಿರ್ಮಾಣಕ್ಕೆ ಪ್ರಸ್ತಾವವಿದ್ದು, ಬೃಹದಾಕಾರದ ಮೂರು ಕಲ್ಲಿನ ಪರಿಸರ ಸ್ನೇಹಿ ಕಲಾಕೃತಿಗಳು ತಲೆ ಎತ್ತಲಿವೆ.

ಬೆಂಗಳೂರು (ಡಿ.25): ಉದ್ಯಾನ ನಗರಿಯ ಆಕರ್ಷಕ ತಾಣಗಳಲ್ಲಿ ಒಂದಾದ ಕಬ್ಬನ್ ಪಾರ್ಕ್‌ನಲ್ಲಿ ಮರದ ದಿಮ್ಮಿಗಳಿಂದ ನಿರ್ಮಿಸಿರುವ ಕಲಾಕೃತಿಗಳು ಕೈಬೀಸಿ ಕರೆಯುತ್ತಿರುವ ಬೆನ್ನಲ್ಲೇ ಮತ್ತಷ್ಟು ಕಲಾಕೃತಿಗಳ ನಿರ್ಮಾಣಕ್ಕೆ ಪ್ರಸ್ತಾವವಿದ್ದು, ಬೃಹದಾಕಾರದ ಮೂರು ಕಲ್ಲಿನ ಪರಿಸರ ಸ್ನೇಹಿ ಕಲಾಕೃತಿಗಳು ತಲೆ ಎತ್ತಲಿವೆ.

ಕಬ್ಬನ್‌ಪಾರ್ಕ್‌ಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಜನಪ್ರಿಯಗೊಳಿಸುವ ಸಲುವಾಗಿ ಪಾರ್ಕ್‌ನ ಮೂರು ಕಡೆಗಳಲ್ಲಿ ‘ಮಹಿಳಾ ಸ್ವಾತಂತ್ರ್ಯ ಬಿಂಬಿಸುವುದು, ಪುಸ್ತಕ ಓದುತ್ತಿರುವ ಮಹಿಳೆ ಹಾಗೂ ಸೋರೆಕಾಯಿ’ಯ ಬೃಹತ್ ಕಲಾಕೃತಿಗಳ ನಿರ್ಮಾಣಕ್ಕೆ ತೋಟಗಾ ರಿಕೆ ಇಲಾಖೆ ಚಿಂತನೆ ನಡೆಸಿದೆ. ಬೆಂಗಳೂರು ನಗರದಲ್ಲಿನ ಪರಿಸರ ಬಿಂಬಿಸುವ ಉದ್ಯಾನದ ಜತೆಗೆ ಶಿಲ್ಪಕಲೆಯನ್ನೂ ಪರಿಚಯಿಸುವ ಉದ್ದೇಶದಿಂದ ಕಲ್ಲಿನ ಕಲಾಕೃತಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಈ ಕುರಿತು ಕಬ್ಬನ್‌ಪಾರ್ಕ್ ಹಾಗೂ ಲಾಲ್‌ಬಾಗ್‌ನ ಸಲಹಾ ಸಮಿತಿಯೊಂದಿಗೆ ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆದಿದ್ದು, ಭಾಗಶಃ ಒಪ್ಪಿಗೆ ಸಿಕ್ಕಿದೆ. ಅಲ್ಲದೆ, ಕಲಾಕೃತಿ ರಚನೆಗೆ ಸಂಬಂಧಿಸಿದಂತೆ ಕಲಾವಿದರಿಂದ ಸಲಹೆಗಳನ್ನು ಕೇಳಲಾಗಿದೆ. ಕಬ್ಬನ್‌ಪಾರ್ಕ್‌ನಲ್ಲಿ ನಿರ್ಮಾಣ ವಾಗಲಿರುವ ಕಲಾಕೃತಿ ಗಳು ಕನಿಷ್ಠ ನೂರು ವರ್ಷಗಳ ಕಾಲ ಉಳಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಹೆಚ್ಚು ಕಾಲ ಉಳಿಯುವ ಕಲ್ಲುಗಳನ್ನು ಗುರುತಿಸುವ ಸಲುವಾಗಿ ಗಣಿ ಮತ್ತು ಭೂ ಗರ್ಭ ಇಲಾಖೆಯಿಂದ ಸಲಹೆ ಕೇಳಲಾಗಿದೆ. ಅಲ್ಲಿಂದ ಮಾಹಿತಿ ಬಂದ ತಕ್ಷಣ ಸಚಿವರ ಒಪ್ಪಿಗೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಸ್ಥಳ ಗುರುತು: ಕಬ್ಬನ್‌ಪಾರ್ಕ್‌ನಲ್ಲಿ ಅತಿ ಹೆಚ್ಚು ಪರಿಚಿತವಾಗಿರುವ ಹಾಗೂ ಜನ ಸಂಚಾರವಿರುವ ಶೇಷಾದ್ರಿ ಅಯ್ಯರ್ ಕೇಂದ್ರ ಗ್ರಂಥಾಲಯದ ಹಿಂಭಾಗದ ವೃತ್ತ, ಬ್ಯಾಂಡ್ ಸ್ಟ್ಯಾಂಡ್‌ನ ಮುಂಭಾಗದ ಖಾಲಿ ಪ್ರದೇಶ ಹಾಗೂ ಮೈಸೂರು ಮಹಾರಾಜರ ಪ್ರತಿಮೆ ಬಳಿ ಕಲಾಕೃತಿಗಳ ಅನಾವರಣಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಈ ಭಾಗದಲ್ಲಿ ನಿರ್ಮಿಸಿದಲ್ಲಿ ಮತ್ತಷ್ಟು ಆಕರ್ಷಣೆಯಾಗಲಿದೆ ಎಂದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ.

ಖಾಸಗಿ ಸಂಸ್ಥೆಗಳಿಂದ ಆಹ್ವಾನ: ನಗರದಲ್ಲಿ ನೂರಾರು ಖಾಸಗಿ ಸಾಫ್ಟ್‌ವೇರ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ನೆರವು ನೀಡಲಿವೆ. ಈ ನಿಟ್ಟಿನಲ್ಲಿ ಕಬ್ಬನ್‌ಪಾರ್ಕ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಲಾಕೃತಿಗಳಿಗೆ ಹಣಕಾಸಿನ ನೆರವು ಪಡೆಯಲು ಖಾಸಗಿ ಸಂಸ್ಥೆಗಳಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ಕಬ್ಬನ್ ಪಾರ್ಕ್‌ನಲ್ಲಿ ಶೌಚಾಲಯ ಹಾಗೂ ದ್ವಾರಗಳ ನಿರ್ಮಾಣಕ್ಕೆ ಖಾಸಗಿ ಕಂಪನಿಗಳು ಈಗಾಗಲೇ ಹಣಕಾಸಿನ ನೆರವು ನೀಡಿದ್ದು, ಕಲಾಕೃತಿಗಳ ನಿರ್ಮಾಣಕ್ಕೆ ಸಹಕರಿಸಲಿವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

click me!