ಮೊಟ್ಟೆ ಪ್ರಿಯರೇ ನಿಮಗೊಂದು ಸಿಹಿ ಸುದ್ದಿ..!

By Suvarna Web DeskFirst Published Dec 25, 2017, 8:05 AM IST
Highlights

ಮೊಟ್ಟೆ ದರದಲ್ಲಿ ಇನ್ನಷ್ಟು ಇಳಿಕೆಯಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ನೂರಕ್ಕೆ 355 ರು. ನಿಗದಿಯಾಗಿದೆ.

ಬೆಂಗಳೂರು(ಡಿ.25): ಮೊಟ್ಟೆ ದರದಲ್ಲಿ ಇನ್ನಷ್ಟು ಇಳಿಕೆಯಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ನೂರಕ್ಕೆ 355 ರು. ನಿಗದಿಯಾಗಿದೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ 435ಕ್ಕೆ ಮಾರಾಟವಾಗುತ್ತಿತ್ತು. ರಾಜ್ಯದಲ್ಲಿ ಮೊಟ್ಟೆಯ ಉತ್ಪಾದನೆಯಲ್ಲಿ ಕುಂಠಿತವಾಗಿಲ್ಲ.

ದಿನವೊಂದಕ್ಕೆ ಬರೋಬ್ಬರಿ 1.50 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತಿದೆ. ಕೆಲ ದಿನಗಳ ಹಿಂದೆ ತರಕಾರಿಗಳ ಬೆಲೆ ಏರಿಕೆ ಮೊಟ್ಟೆಗೆ ಭಾರಿ ಬೇಡಿಕೆ ಕುದುರಿಸಿತ್ತು. ಆದರೆ, ಈಗ ತರಕಾರಿಗಳ ಬೆಲೆ ಗಣನೀಯವಾಗಿ ಇಳಿಕೆಯಾಗಿರುವುದು ಮೊಟ್ಟೆ ದರ ಕುಸಿಯಲು ಕಾರಣವಾಗಿದೆ. ತರಕಾರಿಗಳ ಬೆಲೆ ಇಳಿಕೆಯಾಗಿದ್ದರಿಂದ ಮೊಟ್ಟೆ ಖರೀದಿಸುವವರ ಸಂಖ್ಯೆಯೂ ಇಳಿಮುಖವಾಗಿತ್ತು. ಇದರಿಂದ ಮಾರುಕಟ್ಟೆಗೆ ಸರಬರಾಜಾದ ಮೊಟ್ಟೆ ಖರೀದಿಯಾಗದೆ ದಾಸ್ತಾನು ಉಳಿದಿತ್ತು.

ಇದು ಮೊಟ್ಟೆ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಈ ದೃಷ್ಟಿಯಿಂದ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ ಬೇಡಿಕೆ ಮತ್ತು ಉತ್ಪಾದನೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಮೊಟ್ಟೆ ಬೆಲೆ ಇಳಿಸಿದೆ. ಸಗಟು ಮಾರುಕಟ್ಟೆಯಲ್ಲೊ ಮೊಟ್ಟೆಯೊಂದರ ಬೆಲೆ 3.55 ರು.ಗೆ ತಲುಪಿದ್ದು, ಚಿಲ್ಲರೆ ಮಾರಾಟಗಾರರು 5.50 ರು.ರಿಂದ 6 ರು. ವರೆಗೆ ಮಾರಾಟ ಮಾಡುತ್ತಿದ್ದಾರೆ. ಚಿಲ್ಲರೆ ಮಾರುಕಟ್ಟೆ ದರ ಒಂದು ಡಜನ್ ಮೊಟ್ಟೆಗೆ 70 ರು.ರಿಂದ 72 ರು. ವರೆಗಿದೆ.

ಹಾಪ್‌ಕಾಮ್ಸ್‌ನಲ್ಲಿ 4.90 ರು. ಮಾರಾಟ ಮಾಡಲಾಗುತ್ತಿದೆ. ಇದು ಬೆಂಗಳೂರಿನ ಸ್ಥಿತಿ ಮಾತ್ರವಲ್ಲ, ದೆಹಲಿ, ಹೈದರಾಬಾದ್, ಮುಂಬಯಿ ಸೇರಿದಂತೆ ದೇಶಾದ್ಯಂತ ಮೊಟ್ಟೆ ದರ ಕುಸಿತ ಕಂಡಿದೆ.

65 ಲಕ್ಷ ಮೊಟ್ಟೆ ಸರಬರಾಜು: ರಾಜಧಾನಿ ಬೆಂಗಳೂರಿಗೆ ಪ್ರತಿ ದಿನ ಸರಿಸುಮಾರು 60ರಿಂದ 65 ಲಕ್ಷ ಮೊಟ್ಟೆ ಸರಬರಾಜಾಗುತ್ತದೆ. ಪ್ರತಿ ದಿನ ತಮಿಳು ನಾಡಿನಿಂದ ಬೆಂಗಳೂರು ಮಾರುಕಟ್ಟೆಗೆ 30ರಿಂದ 40 ಲಕ್ಷ ಮೊಟ್ಟೆ ಬರುತ್ತದೆ. ಮತ್ತೊಂದು ಪ್ರಮುಖ ಮೊಟ್ಟೆ ಮಾರಾಟ ಕೇಂದ್ರವಾದ ಹೊಸಪೇಟೆಯಿಂದ 10-15 ಲಕ್ಷ, ಮೈಸೂರಿನಿಂದ 10 ಲಕ್ಷ ಸರಬರಾಜಾಗುತ್ತಿದೆ.

ಈಗ ಶೀತ ವಾತಾವರಣ ಸ್ವಲ್ಪಮಟ್ಟಿಗೆ ಮೊಟ್ಟೆ ಸೇವನೆ ಮೇಲೆ ಪರಿಣಾಮ ಬೀರಿದೆ. ಜತೆಗೆ ಹಳೆಯ ಕೋಳಿಗಳ ಮಾರಾಟ ನಡೆಯುತ್ತಿದೆ. ಆದರೆ, ಮೊಟ್ಟೆ ಉತ್ಪಾದನೆ ಕುಂಠಿತಗೊಂಡಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ನೂರು ಮೊಟ್ಟೆ 550ರಿಂದ 600ಕ್ಕೆ ಮಾರಾಟವಾಗುತ್ತಿದೆ. ಇನ್ನೊಂದೆರಡು ವಾರಗಳಲ್ಲಿ ಮತ್ತೆ ಮೊಟ್ಟೆ ಬೆಲೆ ಹಿಂದಿನಂತೆ ಏರಿಕೆಯಾಗಲಿದೆ ಎಂದು ಎನ್‌ಇಸಿಸಿ ಬೆಂಗಳೂರು ವಲಯದ ಅಧ್ಯಕ್ಷ ಜಿ.ಅರ್. ಸಾಯಿನಾಥ್ ತಿಳಿಸಿದರು.

click me!