ಆಧಾರ್‌-ಮೊಬೈಲ್‌ ಲಿಂಕ್‌ ಮಾಡಲು ನಾವು ಹೇಳಿಲ್ಲ: ಸುಪ್ರೀಂ

First Published Apr 27, 2018, 8:00 AM IST
Highlights

ಮೊಬೈಲ್‌ ಸಂಖ್ಯೆಗೆ ಆಧಾರ್‌ ಕಡ್ಡಾಯ ಮಾಡಲು ಸುಪ್ರೀಂಕೋರ್ಟ್‌ ಆದೇಶ ನೀಡಿದೆ ಎಂಬ ನೆಪ ಹೇಳಿ ಮೊಬೈಲ್‌ ನಂಬರ್‌-ಆಧಾರ್‌ ಲಿಂಕ್‌ ಮಾಡಿಸುವುದು ಕಡ್ಡಾಯ ಎಂಬ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ.

ನವದೆಹಲಿ :  ಮೊಬೈಲ್‌ ಸಿಮ್‌ ಹಾಗೂ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆಯನ್ನು ಕಡ್ಡಾಯ ಮಾಡಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ನಲ್ಲಿ ದೊಡ್ಡ ಮುಜುಗರವಾಗಿದೆ. ಈ ಹಿಂದೆ, ಮಾರ್ಚ್ 31ರೊಳಗೆ ಮೊಬೈಲ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಾಯ ಎಂಬ ಕೇಂದ್ರ ಸರ್ಕಾರದ ಆದೇಶವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದ ಸುಪ್ರೀಂಕೋರ್ಟ್‌, ಇದೀಗ ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಿಸುವುದು ಕಡ್ಡಾಯ ಎಂದು ತಾನು ಯಾವತ್ತೂ ಹೇಳಿಯೇ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಅದರೊಂದಿಗೆ, ಮೊಬೈಲ್‌ ಸಂಖ್ಯೆಗೆ ಆಧಾರ್‌ ಕಡ್ಡಾಯ ಮಾಡಲು ಸುಪ್ರೀಂಕೋರ್ಟ್‌ ಆದೇಶ ನೀಡಿದೆ ಎಂಬ ನೆಪ ಹೇಳಿ ಮೊಬೈಲ್‌ ನಂಬರ್‌-ಆಧಾರ್‌ ಲಿಂಕ್‌ ಮಾಡಿಸುವುದು ಕಡ್ಡಾಯ ಎಂಬ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ.

2017ರ ಫೆಬ್ರವರಿ 6ರಂದು ನಾವು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡಿದೆ. ಮೊಬೈಲ್‌ ಸಿಮ್‌ಗೆ ಆಧಾರ್‌ ಜೋಡಿಸುವಂತೆ ಸುಪ್ರೀಂಕೋರ್ಟ್‌ ಯಾವತ್ತೂ ನಿರ್ದೇಶನ ನೀಡಿರಲಿಲ್ಲ. ಆದರೆ, ನಾವು ನಿರ್ದೇಶನ ನೀಡಿದ್ದೇವೆ ಎಂದು ಕೇಂದ್ರ ಸರ್ಕಾರದ ಸುತ್ತೋಲೆ ಹೇಳುತ್ತಿದೆ. ಅದು ತಪ್ಪು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ಪೀಠ ಬುಧವಾರ ಸ್ಪಷ್ಟನೆ ನೀಡಿತು.

ಫೆ.6ರಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಂದಿನ ಅಟಾರ್ನಿ ಜನರಲ್‌ ಮುಕುಲ್‌ ರೋಹಟ್ಗಿ ಅವರು, ಗ್ರಾಹಕರ ಗುರುತು ತಪಾಸಣೆಗೆ ಆಧಾರ್‌ ಕೂಡ ಒಂದು ದಾಖಲೆ. ಮೊಬೈಲ್‌ ಗ್ರಾಹಕರ ಗುರುತು ತಪಾಸಣೆಗೆ ಆದಷ್ಟುಬೇಗ ಒಂದು ಪರಿಣಾಮಕಾರಿ ಯೋಜನೆ ಪ್ರಕಟಿಸಲಾಗುವುದು ಮತ್ತು ತಪಾಸಣೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದರು. ಅದನ್ನು ನಾವು ದಾಖಲಿಸಿಕೊಂಡಿದ್ದೆವು ಅಷ್ಟೆ. ಅದನ್ನು ಕೇಂದ್ರ ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡು ಆಧಾರ್‌ ಜೋಡಣೆ ಕಡ್ಡಾಯ ಎಂಬ ಆದೇಶ ಹೊರಡಿಸಿದೆ ಎಂದು ಪೀಠ ಹೇಳಿತು.

ಈ ವರ್ಷದ ಮಾಚ್‌ರ್‍ 31ರೊಳಗೆ ಮೊಬೈಲ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಾಯ ಎಂದು ಕಳೆದ ವರ್ಷ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಮಾಚ್‌ರ್‍ 13ರಂದು ಸುಪ್ರೀಂಕೋರ್ಟ್‌ ಬ್ಯಾಂಕ್‌ ಖಾತೆ ಹಾಗೂ ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆಯ ಗಡುವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಇದಕ್ಕೂ ಮುನ್ನ ಬ್ಯಾಂಕು ಹಾಗೂ ಮೊಬೈಲ್‌ ಸೇವಾ ಕೇಂದ್ರಗಳಲ್ಲಿ ಆಧಾರ್‌ ಜೋಡಣೆ ಮಾಡಿಸಲು ಗ್ರಾಹಕರ ನೂಕುನುಗ್ಗಲು ಉಂಟಾಗಿತ್ತು.

click me!