
ನವದೆಹಲಿ: ಆನ್‌ಲೈನ್ ಸಾಮಾಜಿಕ ಜಾಲತಾಣಗಳು ಟೀಕೆಗೆ ಗುರಿಯಾಗುವುದೇ ಹೆಚ್ಚು. ಆದರೆ ತಂದೆಯನ್ನು ಕಳೆದುಕೊಂಡು, ನೋವಿನಲ್ಲಿದ್ದ ಬಾಲಕ ಮತ್ತು ಆತನ ಕುಟುಂಬಕ್ಕೆ ಇದೇ ಸಾಮಾಜಿಕ ಜಾಲ ತಾಣ ಮತ್ತು ನೆಟ್ಟಿಗರು ಕೇವಲ 5 ದಿನದಲ್ಲಿ ಭರ್ಜರಿ 50 ಲಕ್ಷ ರು. ನೆರವು ನೀಡಿ ಮಾನವೀಯತೆ ಮೆರೆದ ಅಚ್ಚರಿಯ ಘಟನೆ ದೆಹಲಿಯಲ್ಲಿ ನಡೆದಿದೆ.
ಕಳೆದ ಶುಕ್ರವಾರ ಅನಿಲ್ ಎಂಬ ಕಾರ್ಮಿಕ, ಶೌಚಗುಂಡಿ ಸ್ವಚ್ಛತೆಗೊಳಿಸಲು ಇಳಿದಿದ್ದ. ಆದರೆ ಕೆಲಸದ ವೇಳೆ ಆತ ಸೊಂಟಕ್ಕೆ ಕಟ್ಟಿಕೊಂಡಿದ್ದ ಹಗ್ಗ ತುಂಡರಿಸಿ, ಆತ ಗುಂಡಿಯೊಳಗೆ ಬಿದ್ದು ಸಾವನ್ನಪ್ಪಿದ್ದ. ಆತನ ಶವವನ್ನು ಮನೆಯ ಬಳಿ ಬಟ್ಟೆಹೊದಿಸಿ ಮಲಗಿಸಲಾಗಿತ್ತು.
ಈ ನಡುವೆ ತಂದೆಯ ಸಾವಿನ ಸುದ್ದಿ ಕೇಳಿ ಓಡಿಬಂದ ಪುಟ್ಟಮಗ, ಶವಕ್ಕೆ ಹೊದಿಸಿದ್ದ ಬಟ್ಟೆತೆಗೆದು ನೋವಿನಿಂದ ಅಪ್ಪಾ ಎಂದು ಕೂಗಿ ಕಣ್ಣೀರಿಟ್ಟಿದ್ದ. ಈ ನೋವಿನ ಕ್ಷಣವನ್ನು ದೆಹಲಿಯ ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯ ಛಾಯಾಗ್ರಾಹಕ ಶಿವ ಸನ್ನಿ ಸೆರೆಹಿಡಿದು, ಅದನ್ನು ಟ್ವೀಟರ್‌ನಲ್ಲಿ ಪ್ರಕಟಿಸಿದ್ದರು. ಈ ಮನಕಲಕುವ ಫೋಟೋ ಜೊತೆಗೆ, ಬಡ ಕುಟುಂಬ ಅಂತ್ಯ ಸಂಸ್ಕಾರ ನೆರವೇರಿಸಲೂ ಹಣ ಇಲ್ಲದೇ ಸಂಕಷ್ಟದಲ್ಲಿರುವ ಮಾಹಿತಿ ಹೊರಹಾಕಿದ್ದರು. ಅದಾದ ಕೆಲವೇ ನಿಮಿಷಗಳಲ್ಲಿ ಕೆಟ್ಟೋ ಎಂಬ ಆನ್‌ಲೈನ್ ಕ್ರೌಡ್‌ಫಂಡಿಗ್ ವೆಬ್‌ಸೈಟ್, ಬಡ ಕುಟುಂಬಕ್ಕೆ ನೆರವು ಕೋರಿತು. 15 ದಿನದಲ್ಲಿ 24 ಲಕ್ಷ ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು.
ಆದರೆ ಕೋರಿಕೆ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ಹಣ ಹರಿದುಬಂದಿತ್ತು. ಅದಾದ ನಾಲ್ಕು ದಿನಗಳಲ್ಲಿ ಅಂದರೆ ಮಂಗಳವಾರದ ವೇಳೆಗೆ ಬಡಕುಟುಂಬಕ್ಕೆ 2000ಕ್ಕೂ ಹೆಚ್ಚು ದಾನಿಗಳು 50 ಲಕ್ಷ ರು. ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.