ವ್ಯಕ್ತಿಯೊಬ್ಬನನ್ನು ಕೊಂದಿದ್ದಕ್ಕೆ 300 ಮೊಸಳೆಗಳ ದಾರುಣ ಹತ್ಯೆ

By Web DeskFirst Published Jul 17, 2018, 11:12 AM IST
Highlights

- ಇಂಡೋನೇಷ್ಯಾದ ಸೊರೊಂಗ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ  

- ಗ್ರಾಮಸ್ಥರ ಕಿಚ್ಚಿಗೆ ಮೊಸಳೆಗಳು ಬಲಿ

-300 ಮೊಸಳೆಗಳ ದಾರುಣ ಹತ್ಯೆ 

ಸೊರೊಂಗ್ (ಜು. 17): ವ್ಯಕ್ತಿಯೊಬ್ಬನನ್ನು ಮೊಸಳೆಯೊಂದು ಕೊಂದಿದ್ದರಿಂದ ರೊಚ್ಚಿಗೆದ್ದ ಆತನ ಬಂಧುಗಳು ಹಾಗೂ ಗ್ರಾಮಸ್ಥರು ಸುಮಾರು 300 ಮೊಸಳೆಗಳನ್ನು ಕೊಚ್ಚಿ ಹಾಕಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಪಪುವಾ ಪ್ರಾಂತ್ಯದ ಸೊರೊಂಗ್ ಜಿಲ್ಲೆಯಲ್ಲಿ ಶನಿವಾರ 48 ವರ್ಷದ ಸುಗಿಟೋ ಎಂಬಾತ ತನ್ನ ದನಕರುಗಳಿಗೆ ಮೇವು ತರಲು ಮೊಸಳೆ ಸಂರಕ್ಷಣಾ ಧಾಮಕ್ಕೆ ಹೋಗಿದ್ದ. ಆ ವೇಳೆ, ಆಯತಪ್ಪಿ ಮೊಸಳೆ ಇರುವ ಜಾಗಕ್ಕೆ ಬಿದ್ದಿದ್ದ. ಆಗ ಮೊಸಳೆಯೊಂದು ಆತನ ಕಾಲಿಗೆ ಬಾಯಿ ಹಾಕಿತ್ತು. ಬಳಿಕ ಆತ ಸಾವನ್ನಪ್ಪಿದ್ದ. ಸುಗಿಟೋ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ಜನರ ಕೋಪ ನೆತ್ತಿಗೇರಿತು. ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಜನವಸತಿ ಪ್ರದೇಶದಲ್ಲಿ ಮೊಸಳೆ ಧಾಮ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ, ಮೊಸಳೆ ಧಾಮದವರು ಸುಗಿಟೋ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದರು. ಆದರೆ ನೂರಾರು ಮಂದಿಯಷ್ಟಿದ್ದ ಜನರು ಅದನ್ನು ಕೇಳದೇ, ಸೀದಾ ಮೊಸಳೆ ಧಾಮಕ್ಕೆ ಹೋಗಿ ಕತ್ತಿ, ಮಚ್ಚು ಹಾಗೂ ಸಲಿಕೆ ಹಿಡಿದು ಸಿಕ್ಕ ಸಿಕ್ಕ ಮೊಸಳೆಗಳನ್ನು ಕತ್ತರಿಸಿ ಬಿಸಾಕಿದ್ದಾರೆ. ಈ ದಾಂಧಲೆ ವೇಳೆ 4 ಇಂಚು ಉದ್ದದ ಮೊಸಳೆ ಮರಿಗಳಿಂದ ಹಿಡಿದು ಎರಡು ಮೀಟರ್ ಉದ್ದದ ದೊಡ್ಡ ಮೊಸಳೆವರೆಗೆ 292 ಪ್ರಾಣಿಗಳು ಸಾವನ್ನಪ್ಪಿವೆ.  ಮಾರಣಹೋಮ ತಡೆಯಲು ಪೊಲೀಸರು, ಮೊಸಳೆಧಾಮ ಸಿಬ್ಬಂದಿ ಯತ್ನಿಸಿದರಾದರೂ ಸಾಧ್ಯವಾಗಿಲ್ಲ.

click me!