ಬ್ಯಾಂಕಿಂಗ್ ವಲಯಕ್ಕೆ ಎಲ್ ಐಸಿ ಪ್ರವೇಶ

First Published Jul 17, 2018, 10:58 AM IST
Highlights

-ಎಲ್‌ಐಸಿ ಬ್ಯಾಂಕ್ ಕನಸಿಗೆ ಮತ್ತಷ್ಟು ಬಲ

-ಐಡಿಬಿಐನ ಶೇ.51 ರಷ್ಟು ಷೇರು ಖರೀದಿಗೆ ಎಲ್‌ಐಸಿ ಆಡಳಿತ ಮಂಡಳಿ ಸಮ್ಮತಿ

ನವದೆಹಲಿ (ಜು. 17): ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್‌ನ ಶೇ.51 ರಷ್ಟು ಷೇರು ಖರೀದಿಸಲು ಎಲ್ ಐಸಿಯ ಆಡಳಿತ ಮಂಡಳಿ ತನ್ನ ಅನುಮೋದನೆ ನೀಡಿದೆ.

ಇದರೊಂದಿಗೆ ಬ್ಯಾಂಕಿಂಗ್ ವಲಯಕ್ಕೆ ಪ್ರವೇಶಿಸುವ ಎಲ್ಐಸಿ ಕನಸು ನನಸಾಗುವ ಕ್ಷಣ ಮತ್ತಷ್ಟು ಸನ್ನಿಹಿತವಾಗಿದೆ. ಈ ಖರೀದಿ ವ್ಯವಹಾರಕ್ಕೆ ಈಗಾಗಲೇ ವಿಮಾ ನಿಯಂತ್ರಣ ಪ್ರಾಧಿಕಾರ ತನ್ನ ಅನುಮೋದನೆ ನೀಡಿದೆ. ಹೀಗಾಗಿ ಎಲ್‌ಐಸಿ ಖರೀದಿ ಪ್ರಕ್ರಿಯೆಯ ಮುಂದಿನ ಭಾಗವಾಗಿ ಶೀಘ್ರವೇ ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆಯಾದ ಸೆಬಿಯ ಅನುಮತಿ ಕೋರಲಿದೆ.

ಈ ನಡುವೆ ಬ್ಯಾಂಕ್‌ನಲ್ಲಿ ಸಾರ್ವಜನಿಕರ ಪಾಲು ತೀರಾ ಕಡಿಮೆ ಇರುವ ಕಾರಣ, ಸಾರ್ವಜನಿಕರಿಂದ ಷೇರು ಖರೀದಿಗೆ ಎಲ್‌ಐಸಿ ಓಪನ್ ಆಫರ್ ನೀಡುವ ಸಾಧ್ಯತೆ ತೀರಾ ಕಡಿಮೆ. ನಷ್ಟದಲ್ಲಿರುವ ಐಡಿಬಿಐ ಹೆಚ್ಚಿನ ಬಂಡವಾಳ ಹೂಡಿಕೆಯ ನಿರೀಕ್ಷೆಯಲ್ಲಿರುವ ಕಾರಣ, ಇಂಥ ಸಂದರ್ಭಗಳಲ್ಲಿನ ಸಾಮಾನ್ಯ ಪ್ರಕ್ರಿಯೆಯಂತೆ ಬ್ಯಾಂಕ್‌ನ ಆದ್ಯತಾ ಷೇರುಗಳು ಎಲ್‌ಐಸಿಗೆ ಸಿಗಲಿದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಎಸ್.ಸಿ.ಗರ್ಗ್ ತಿಳಿಸಿದ್ದಾರೆ.

ಸದ್ಯ ಐಡಿಬಿಐನಲ್ಲಿ ಎಲ್‌ಐಸಿ ಶೇ.7.5 ರಷ್ಟು ಷೇರುಪಾಲು ಹೊಂದಿದೆ. ಮತ್ತೊಂದೆಡೆ ಎಲ್‌ಐಸಿಗೆ ಷೇರು ಮಾರಲು ಈಗಾಗಲೇ ಐಡಿಬಿಐ ಬ್ಯಾಂಕ್‌ನ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಬ್ಯಾಂಕ್ 55,600 ಕೋಟಿ ರು.ನಷ್ಟು ಅನುತ್ಪಾದಕ ಹೊಂದಿದೆ.

click me!