
ನವದೆಹಲಿ: ಫ್ರಾನ್ಸ್‌ನ ಡಸಾಲ್ಟ್ ಕಂಪನಿಯಿಂದ 36 ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಎನ್‌ಡಿಎ ಸರ್ಕಾರ ಭಾರೀ ಅವ್ಯವಹಾರ ನಡೆಸಿದೆ. ಇದರಲ್ಲಿ ಸಾವಿರಾರು ಕೋಟಿ ರು. ಅವ್ಯವಹಾರ ನಡೆದಿದೆ ಎಂದು ಹಲವು ದಿನಗಳಿಂದ ಕಾಂಗ್ರೆಸ್ ನೇರಾನೇರ ಆರೋಪ ಮಾಡುತ್ತಲೇ ಇದೆ. ಆದರೆ ಹೊಸ ಅಂಕಿಅಂಶಗಳು ಮಾತ್ರ ಬೇರೆಯದ್ದೇ ಕಥೆ ಹೇಳುತ್ತಿವೆ. ವಾಸ್ತವವಾಗಿ ಈ ಹಿಂದೆ ಯುಪಿಎ ಸರ್ಕಾರ ಖರೀದಿಸಲು ಉದ್ದೇಶಿಸಿದ್ದ ವಿಮಾನಕ್ಕಿಂತಲೂ ಹೆಚ್ಚು ಅತ್ಯಾಧುನಿಕ ವಿಮಾನ ಮತ್ತು ಕ್ಷಿಪಣಿ ಒಳಗೊಂಡ ವ್ಯವಸ್ಥೆ ಖರೀದಿಗೆ ಮೋದಿ ಸರ್ಕಾರ ಫ್ರಾನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಇಷ್ಟಾದರೂ ಮೋದಿ ಸರ್ಕಾರ ನಡೆಸಿದ ಚೌಕಾಸಿ ಫಲವಾಗಿ, ಭಾರತಕ್ಕೆ ಕಡಿಮೆ ದರದಲ್ಲಿಯೇ ವಿಮಾನಗಳು ಲಭ್ಯವಾಗುತ್ತಿವೆ.
ಪರಿಣಾಮ ಪ್ರತಿ ವಿಮಾನಕ್ಕೆ 59 ಕೋಟಿ ರು.ನಂತೆ 36 ವಿಮಾನಗಳಿಗೆ ಅಂದಾಜು 2124 ಕೋಟಿ ರು. ಉಳಿಯಲಿದೆ ಎಂದು ಹೇಳಲಾಗಿದೆ. ಖರೀದಿ ಒಪ್ಪಂದದ ಕೆಲವು ಕರಾರು ಪತ್ರಗಳು ತನಗೆ ಸಿಕ್ಕಿದ್ದು, ಅದು ಕಾಂಗ್ರೆಸ್ ಆರೋಪ ಸುಳ್ಳು ಎಂದು ಸಾಬೀತುಪಡಿಸುತ್ತಿವೆ ಎಂದು ಮೈನೇಷನ್ ವೆಬ್‌ಸೈಟ್ ಮತ್ತು ರಿಪಬ್ಲಿಕ್ ಟಿವಿ ವರದಿ ಮಾಡಿದೆ.
ಭಾರೀ ಉಳಿತಾಯ: ಈ ಹಿಂದಿನ ಯುಪಿಎ ಸರ್ಕಾರ ಫ್ರಾನ್ಸ್ ಕಂಪನಿಯಿಂದ 126 ರಫೇಲ್ ಯುದ್ಧ ವಿಮಾನ ಖರೀದಿಗೆ ನಿರ್ಧರಿಸಿತ್ತು. ಒಂದು ವೇಳೆ ಈ ಒಪ್ಪಂದ ಜಾರಿಯಾಗಿದ್ದರೆ ಪ್ರತಿ ವಿಮಾನದ ವೆಚ್ಚ ಮತ್ತು ನಿರ್ವಹಣಾ ವೆಚ್ಚ, ಶಸ್ತ್ರಾಸ್ತ್ರಗಳು, ತಾಂತ್ರಿಕ ವೆಚ್ಚ ಹಾಗೂ ರಿಪೇರಿ ಎಲ್ಲಾ ಸೇರಿ ಪ್ರತಿ ವಿಮಾನಕ್ಕೆ 1366 ಕೋಟಿ ರು.ನಂತೆ 1.72 ಲಕ್ಷ ಕೋಟಿ ರು. ಆಗುತ್ತಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ, 126 ರ ಬದಲಿಗೆ 36 ಯುದ್ಧ ವಿಮಾನ ಖರೀದಿಗೆ ಮಾತ್ರ ನಿರ್ಧರಿಸಿದೆ.
ಇದಕ್ಕೆ ಪ್ರತಿ ವಿಮಾನಕ್ಕೆ 1646 ಕೋಟಿ ರು. ವೆಚ್ಚ ಪಾವತಿಸುತ್ತಿದೆ. ಅಂದರೆ ಯುಪಿಎ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಪ್ರತಿ ವಿಮಾನಕ್ಕೆ 280 ಕೋಟಿ ರು. ಹೆಚ್ಚು ಪಾವತಿಸುತ್ತಿದೆ. ಆದರೆ ಮೋದಿ ಸರ್ಕಾರ ಬಂದ ನಂತರ ಈ ವಿಮಾನಗಳಿಗೆ ಇನ್ನಷ್ಟು ವಿಶೇಷ ಸವಲತ್ತುಗಳನ್ನು ಅಳವಡಿಸಬೇಕೆಂದು ರಫೇಲ್ ಕಂಪನಿಯನ್ನು ಕೋರಿತ್ತು. ಪರಿಣಾಮ ಇದೀಗ ಮಾಡಿಕೊಂಡಿರುವ ಒಪ್ಪಂದದ ಅನ್ವಯ ಹೆಚ್ಚು ಅತ್ಯಾಧುನಿಕ ಯುದ್ಧ ವಿಮಾನ ಭಾರತಕ್ಕೆ ಬರಲಿದೆ.
ಜೊತೆಗೆ ಈ ಹಿಂದಿನ ಒಪ್ಪಂದದಲ್ಲಿ ಇರದೇ ಇದ್ದ ಮೆಟಿಯೋರ್ ಕ್ಷಿಪಣಿ ವ್ಯವಸ್ಥೆ ಕೂಡಾ ಲಭ್ಯವಾಗಲಿದೆ. ಅಲ್ಲದೆ ಸ್ಕಾಲ್ಪ್ ಕ್ಷಿಪಣಿ ಕೂಡಾ ಭಾರತಕ್ಕೆ ಲಭ್ಯವಾಗಲಿದೆ. ಹೀಗಾಗಿ ಈ ಎರಡೂ ಕ್ಷಿಪಣಿ ವ್ಯವಸ್ಥೆಗೆ ಆಗುವ ವೆಚ್ಚ ಮತ್ತು ಹಿಂದಿನ ಯುಪಿಎ ಸರ್ಕಾರ ಖರೀದಿಗೆ ನಿರ್ಧರಿಸಿದ್ದ ವ್ಯವಸ್ಥೆಯ ವೆಚ್ಚವನ್ನು ಲೆಕ್ಕ ಹಾಕಿದರೆ ಅದು ಮೋದಿ ಸರ್ಕಾರ ಮಾಡುತ್ತಿರುವ ವೆಚ್ಚಕ್ಕಿಂತ ಅಂದಾಜು 2124 ಕೋಟಿ ರು. ಹೆಚ್ಚು. ಅಂದರೆ ಪ್ರತಿ ವಿಮಾನಕ್ಕೆ 59 ಕೋಟಿ ರು.ಹಣ ಭಾರತಕ್ಕೆ ಉಳಿಯಲಿದೆ ಎಂದು ವೆಬ್ ಸೈಟ್ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.