ಕೇರಳ: ಮನೆ ಮೇಲೆ ಹೆಲಿಕಾಪ್ಟರ್ ಇಳಿಸಿದ ಪೈಲಟ್‌ ಬಿಚ್ಚಿಟ್ಟ ಸತ್ಯವಿದು

By Web DeskFirst Published Aug 21, 2018, 10:59 AM IST
Highlights

ಪ್ರವಾಹಕ್ಕೆ ಸಿಲುಕಿದ್ದ ಕೇರಳದ ಮನೆಯೊಂದರ ಮೇಲ್ಚಾವಣಿಯ ಮೇಲೆ ಹೆಲಿಕಾಪ್ಟರ್‌ ಇಳಿಸಿ ಸಂತ್ರಸ್ತರನ್ನು ರಕ್ಷಿಸಿದ ಫೈಲಟ್ ಇದೀಗ ಈ ಬಗ್ಗೆ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. 

ಮುಂಬೈ: ಪ್ರವಾಹಕ್ಕೆ ಸಿಲುಕಿದ್ದ ಕೇರಳದ ಮನೆಯೊಂದರ ಮೇಲ್ಚಾವಣಿಯ ಮೇಲೆ ಹೆಲಿಕಾಪ್ಟರ್‌ ಇಳಿಸಿ ಸಂತ್ರಸ್ತರನ್ನು ರಕ್ಷಿಸುವಾಗ ಸಣ್ಣ ತಪ್ಪಾಗಿದ್ದರೂ ಮೂರು ಸೆಕೆಂಡ್‌ಗಳಲ್ಲಿ ಹೆಲಿಕಾಪ್ಟರ್‌ ಪುಡಿಪುಡಿಯಾಗುತ್ತಿತ್ತು! ಹೌದು, ಕೇರಳದ ಚಾಲಕುಡಿ ಪಟ್ಟಣದಲ್ಲಿ ಮನೆಯ ಟೆರೇಸ್‌ ಮೇಲೆ ಹೆಲಿಕಾಪ್ಟರ್‌ ಇಳಿಸಿ 26 ಜನರನ್ನು ರಕ್ಷಿಸಿದ ಘಟನೆಯನ್ನು ಪೈಲಟ್‌ ಹೀಗೆ ವಿವರಿಸಿದ್ದಾರೆ. ‘ಮನೆಯ ಮೇಲೆ ಸಂಪೂರ್ಣ ಭಾರ ಹಾಕದೇ ಬಹುತೇಕ ಭಾರ ಗಾಳಿಯಲ್ಲಿ ಇರುವಂತೆ ನೊಡಿಕೊಳ್ಳಲಾಯಿತು. ತಾಂತ್ರಿಕವಾಗಿ ಇದನ್ನು ‘ಲೈಟ್‌ ಆನ್‌ ವೀಲ್‌ ಎಂದು ಕರೆಯಲಾಗುತ್ತದೆ.

ಈ ಪ್ರಕ್ರಿಯೆಯ ಮೂಲಕ ಹೆಲಿಕಾಪ್ಟರ್‌ ಅನ್ನು ಟೆರೇಸ್‌ ಮೇಲೆ ಇಳಿಸುವ ನಿರ್ಧಾರ ಕೈಗೊಂಡೆ ಎಂದು ಲೆ.ಕಮಾಂಡರ್‌ ಅಭಿಜಿತ್‌ ಗರುಡ್‌ ಹೇಳಿದ್ದಾರೆ. ‘ನಾಲ್ವರನ್ನು ಹಗ್ಗದ ಮೂಲಕ ಹೆಲಿಕಾಪ್ಟರ್‌ಗೆ ಹತ್ತಿಸಿಕೊಂಡ ಬಳಿಕ ಉಳಿದ 22 ಮಂದಿಯನ್ನು ಒಳಕ್ಕೆ ಕರೆದುಕೊಳ್ಳುವುದು ಸವಾಲಿನ ವಿಷಯವಾಗಿತ್ತು. ಹೆಲಿಕಾಪ್ಟರ್‌ ಸಿಬ್ಬಂದಿ ಕೆಳಗಿಳಿದು ಎಲ್ಲರನ್ನೂ ಹೆಲಿಕಾಪ್ಟರ್‌ಗೆ ಹತ್ತಿಸಿದರು.

ಸಿಬ್ಬಂದಿಯ ಸಹಕಾರ ಇಲ್ಲದೇ ಇದ್ದಿದ್ದರೆ ಇದು ಸಾಧ್ಯವಾಗುತ್ತಲೇ ಇರಲಿಲ್ಲ. ಲೆ.ರಜನೀಶ್‌ (ಸಹ ಪೈಲಟ್‌), ಲೆ. ಸತ್ಯಾಥ್‌ (ನಾವಿಕ) ಅಜಿತ್‌ (ಹಗ್ಗದ ಮೂಲಕ ಮೇಲೆ ಎತ್ತುವ ಸಿಬ್ಬಂದಿ) ಮತ್ತು ರಾಜನ್‌ (ಡೈವರ್‌) ಅವರ ಸಹಕಾರದಿಂದ ಈ ರಕ್ಷಣಾ ಕಾರ್ಯ ಸಾಧ್ಯವಾಯಿತು. ಒಂದು ವೇಳೆ ಸ್ವಲ್ಪವೇ ಪ್ರಮಾದವಾಗಿದ್ದರೂ ಮೂರು ಸೆಕೆಂಡ್‌ಗಳಲ್ಲಿ ಹೆಲಿಕಾಪ್ಟರ್‌ ಪುಡಿ ಪುಡಿಯಾಗುತ್ತಿತ್ತು. ಸರಿಯಾದ ನಿರ್ಧಾರ ಕೈಗೊಂಡಿದ್ದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಪೈಲಟ್‌ ಹೇಳಿದ್ದಾರೆ.

click me!