ಕಚೇರಿಗೆ ಬರದಿದ್ದರೂ ಸಿಧುಗೆ ಸಲ್ಲುತ್ತೆ ಸಂಬಳ, ಗೂಟದ ಕಾರಿಗೂ ಮೋಸವಿಲ್ಲ!

By Web DeskFirst Published Jul 9, 2019, 7:01 PM IST
Highlights

ಕೆಲಸ ಮಾಡದೇ ಯಾವ ಇಲಾಖೆಯೂ ಸಂಬಳ ಕೊಡಲ್ಲ... ಖಾಸಗಿ ಸಂಸ್ಥೆಗಳೆಂತೂ ಕೇಳಲೇ ಬೇಡಿ...  ಆದರೆ ಜನಪ್ರತಿನಿಧಿಗಳ ವಿಚಾರಕ್ಕೆ ಬಂದರೆ ಎಲ್ಲವೂ ಉಲ್ಟಾ-ಪಲ್ಟಾ.. ಭಾರತ ಕಂಡ ಒಂದು ಕಾಲದ ಶ್ರೇಷ್ಠ ಕ್ರಿಕೆಟಿಗ, ಪಂಜಾಬಿನ ಸಚಿವ ನವಜೋತ್ ಸಿಂಗ್ ಸಿಧು ಮೇಲೆ ಬಿಜೆಪಿ ಮಾಡಿರುವ ಆರೋಪವನ್ನು ಕೇಳಲೇಬೇಕು.

ಚಂಡಿಗಢ[ಜು. 09]   ಕಚೇರಿಗೆ ತೆರಳದೆ ಸಂಬಳ ಮತ್ತು ಇತರೆ ಸೌಲಭ್ಯಗಳನ್ನು ಪಡೆಯುತ್ತಿರುವ ಪಂಜಾಬ್​ ಸರ್ಕಾರದ ಸಚಿವ ನವಜೋತ್​ ಸಿಂಗ್​ ಸಿಧು ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ನಾಯಕರು ಅಲ್ಲಿನ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಸಿಧುಗೆ ನೀಡಿದ್ದ ಖಾತೆ ಬದಲಿಸಿ ಅವರಿಗೆ ಇಂಧನ ಖಾತೆ ನೀಡಲಾಗಿತ್ತು. ಆದರೆ ಅವರು ಇದುವರೆಗೂ ಇಂಧನ ಖಾತೆಯನ್ನು ವಹಿಸಿಕೊಂಡಿಲ್ಲ ಮತ್ತು ಕಚೇರಿಗೆ ತೆರಳಿ ತಮ್ಮ ಖಾತೆಗೆ ಸಂಬಂಧಪಟ್ಟ ಕಾರ್ಯ ನಿರ್ವಹಿಸುತ್ತಿಲ್ಲ. ಇವರು ಯಾವ ಬಗೆಯ ಜನಪ್ರತಿನಿಧಿ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಸಚಿವ ಸಿಧು ರೆಕ್ಕೆ ಕತ್ತರಿಸಿದ ಸಿಎಂ ಅಮರೀಂದರ್ ಸಿಂಗ್!

ಬಿಜೆಪಿ ನಾಯಕ ತರುಣ್​ ಚೌಘ್​ ಅವರು ಪಂಜಾಬ್​ ರಾಜ್ಯಪಾಲ ವಿಪಿ ಸಿಂಗ್​ ಬದ್ನೋರೆ ಅವರಿಗೆ ಪತ್ರ ಬರೆದಿದ್ದು, ಸಿಧು ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ಜನರ ನಂಬಿಕೆಗೆ ದ್ರೋಹ ಬಗೆದಿದ್ದಾರೆ. ಅವರು ಕಚೇರಿಗೆ ಬಾರದಿದ್ದರೂ ಸಂಬಳ ಮತ್ತು ಭತ್ಯೆ ತೆಗೆದುಕೊಳ್ಳುತ್ತಿದ್ದು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಲೋಕಸಭೆ ಚುನಾವಣೆ ವೇಳೆ ನವಜೋತ್​ ಸಿಂಗ್​ ಸಿಧು ಮತ್ತು ಪಂಜಾಬ್​ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ವೇಳೆ ಸಿಧು ಅವರ ಖಾತೆಯನ್ನು ಬದಲಿಸಲಾಗಿತ್ತು.

click me!