ಆಮ್ ಆದ್ಮಿಗೆ ವೋಟ್ ನೀಡಿದರೆ ಅಕಾಲಿ ಗೂಂಡಾಗಳಿಗೆ ಸುಗ್ರೇಸು ಸಿಕ್ಕಂತೆ: ಸಿಧು ಪತ್ನಿ ಹೇಳಿಕೆ

By Suvarna Web DeskFirst Published Nov 29, 2016, 7:43 AM IST
Highlights

"ಪಂಜಾಬ್'ನಲ್ಲಿ ಅಧಿಕಾರಕ್ಕೆ ಬಂದರೆ ಬರೀ 25 ದಿನದಲ್ಲಿ ಡ್ರಗ್ ಸಮಸ್ಯೆ ನೀಗಿಸುವುದಾಗಿ ಆಮ್ ಆದ್ಮಿ ಪಕ್ಷ ಭರವಸೆ ನೀಡಿದೆ. ಆದರೆ, ರಾಜಧಾನಿಯಲ್ಲಿ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಆ ಪಕ್ಷವು ಅಲ್ಲಿಯ ಡ್ರಗ್ ಸಮಸ್ಯೆಯನ್ನು ನಿವಾರಿಸಲು ವಿಫಲವಾಗಿದೆ" ಎಂದು ಕೌರ್ ವಿಷಾದಿಸಿದ್ದಾರೆ.

ನವದೆಹಲಿ(ನ. 29): ಭಾರತೀಯ ಜನತಾ ಪಕ್ಷವನ್ನು ತೊರೆದು ನಿನ್ನೆ ಕಾಂಗ್ರೆಸ್ ಪಾಳಯದ ಕೈಹಿಡಿದ ನವಜ್ಯೋತ್ ಕೌರ್ ಸಿಧು ಅವರು ಪಂಜಾಬ್'ನಲ್ಲಿ ಕಾಂಗ್ರೆಸ್'ನಿಂದ ಮಾತ್ರವೇ ಸ್ಥಿರ ಸರಕಾರ ನೀಡಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ಪಂಜಾಬ್ ಜನತೆಗೆ ಒಳ್ಳೆಯ ಆಡಳಿತ ನೀಡಲು ಕಾಂಗ್ರೆಸ್ ಬಿಟ್ಟರೆ ಪರ್ಯಾಯ ದಾರಿಯಿಲ್ಲ. ಬಿಜೆಪಿ, ಆಮ್ ಆದ್ಮಿ ಪಕ್ಷಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೌರ್ ಅಭಿಪ್ರಾಯಪಟ್ಟಿದ್ದಾರೆ. ಆಮ್ ಆದ್ಮಿ ಪಕ್ಷದ ಭರವಸೆಗಳನ್ನು ನಂಬಿ ಜನರು ವೋಟು ಹಾಕಿದರೆ ಅಕಾಲಿ ಪಕ್ಷದ ಗೂಂಡಾಗಳ ಶಕ್ತಿ ಹೆಚ್ಚಾದಂತಾಗುತ್ತದೆ ಎಂದವರು ಟೀಕಿಸಿದ್ದಾರೆ.

ನಾಯಕತ್ವೇ ಇಲ್ಲದ ಆಪ್:
"ಪಂಜಾಬ್'ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ನಾಯಕತ್ವ ಎಲ್ಲಿದೆ? ಯಾರಿದ್ದಾರೆ ಸಿಎಂ ಅಭ್ಯರ್ಥಿ? ದಿಲ್ಲಿಯಲ್ಲಿ ಕೂತೇ ಪಕ್ಷದ ಟಿಕೆಟ್ ವಿತರಣೆ ಸೇರಿದಂತೆ ಎಲ್ಲವನ್ನೂ ನಿರ್ಧರಿಸಲಾಗುತ್ತಿದೆ. ವಾಸ್ತವವಾಗಿ, ಟಿಕೆಟ್'ಗಳನ್ನೂ ಮಾರಾಟ ಮಾಡುತ್ತಿದ್ದಾರೆ. ಈ ಸ್ಥಿತಿಯಲ್ಲಿ ಪಂಜಾಬ್ ರಾಜ್ಯವನ್ನು ಯಾರು ಉಳಿಸುತ್ತಾರೆ? ಸಂವಿಧಾನದ ಜ್ಞಾನವೇ ಇಲ್ಲದ ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. ಸರಕಾರ ನಡೆಸುವುದು ಇಷ್ಟು ಸರಳವೇ?" ಎಂದು ಮಾಜಿ ಕ್ರಿಕೆಟರ್ ನವಜ್ಯೋತ್ ಸಿಧು ಅವರ ಪತ್ನಿ ಕೌರ್ ಸಿಧು ಪ್ರಶ್ನಿಸುತ್ತಾರೆ.

ಪಂಜಾಬ್ ಬೆಳವಣಿಗೆಗೆ ಆಮ್ ಆದ್ಮಿ ಸರಿಯಾದ ವೇದಿಕೆ ಎಂದು ನಂಬಿಕೊಂಡಿದ್ದೆ. ಆದರೆ, ಅದು ಈಸ್ಟ್ ಇಂಡಿಯಾ ಕಂಪನಿಯ ರೀತಿ ಆಗಿ ಹೋಗಿದೆ. ದಿಲ್ಲಿಯಲ್ಲಿ ಕೂತು ಪಂಜಾಬ್'ನ ಆಡಳಿತ ನಡೆಸುವ ಪಕ್ಷವಾಗಿದೆ ಎಂದು ನವಜೋತ್ ಕೌರ್ ವಿಶ್ಲೇಷಿಸಿದ್ದಾರೆ.

ಆಪ್ ಪೊಳ್ಳು ಭರವಸೆ:
ಇದೇ ವೇಳೆ, ಆಮ್ ಆದ್ಮಿ ಪಕ್ಷ ಜನರಿಗೆ ಪೊಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಮಿಸೆಸ್ ಸಿಧು ಟೀಕಿಸಿದ್ದಾರೆ. "ಪಂಜಾಬ್'ನಲ್ಲಿ ಅಧಿಕಾರಕ್ಕೆ ಬಂದರೆ ಬರೀ 25 ದಿನದಲ್ಲಿ ಡ್ರಗ್ ಸಮಸ್ಯೆ ನೀಗಿಸುವುದಾಗಿ ಆಮ್ ಆದ್ಮಿ ಪಕ್ಷ ಭರವಸೆ ನೀಡಿದೆ. ಆದರೆ, ರಾಜಧಾನಿಯಲ್ಲಿ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಆ ಪಕ್ಷವು ಅಲ್ಲಿಯ ಡ್ರಗ್ ಸಮಸ್ಯೆಯನ್ನು ನಿವಾರಿಸಲು ವಿಫಲವಾಗಿದೆ" ಎಂದು ಕೌರ್ ವಿಷಾದಿಸಿದ್ದಾರೆ.

ಸಿಧು ಪತ್ನಿ ಬಿಜೆಪಿಯನ್ನೂ ಬಿಡಲಿಲ್ಲ. 2012ರಲ್ಲಿ ಅಮೃತಸರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್'ನಲ್ಲಿ ಸ್ಪರ್ಧಿಸಿ ಗೆದ್ದಿದ್ದ ನವಜೋತ್ ಕೌರ್, "ಪಂಜಾಬ್'ನಲ್ಲಿ ಬಿಜೆಪಿ ಪಕ್ಷವು ಅಕಾಲಿಗಳ ಕೈಗೊಂಬೆಯಾಗಿಬಿಟ್ಟಿದೆ. ಇಲ್ಲಿ ಅದಕ್ಕೆ ಧ್ವನಿಯೇ ಇಲ್ಲ" ಎಂದು ಟೀಕಿಸಿದ್ದಾರೆ.

click me!