ಆ್ಯಂಕರ್ ನವಿತಾ ಜೈನ್ ಅನುಭವ; ಮನಸ್ಸಲ್ಲಿ ನೋವಿದ್ದರೂ ಮುಖದಲ್ಲಿ ತೋರಿಸದೆ ಕಳೆದ ಆ ಎರಡು ಗಂಟೆ

Published : Nov 30, 2016, 08:14 AM ISTUpdated : Apr 11, 2018, 12:57 PM IST
ಆ್ಯಂಕರ್ ನವಿತಾ ಜೈನ್ ಅನುಭವ; ಮನಸ್ಸಲ್ಲಿ ನೋವಿದ್ದರೂ ಮುಖದಲ್ಲಿ ತೋರಿಸದೆ ಕಳೆದ ಆ ಎರಡು ಗಂಟೆ

ಸಾರಾಂಶ

‘‘ಆದಷ್ಟು ಬೇಗ ಫ್ರೆಶ್‌ ಆಗಿ, ಮೇಕಪ್‌ ಮಾಡಿ, ಡೆಸ್ಕ್‌'ಗೆ ಬನ್ನಿ... ಕಮಾನ್‌ ಕ್ವಿಕ್‌,'' ಅಂತ ಫೋನಿಟ್ಟರು. ನ್ಯೂಸ್‌ ರೂಮ್‌ ಧಾವಂತಗಳನ್ನು ಅರಿತುಕೊಳ್ಳುತ್ತಿದ್ದ ನನಗೆ ಏನೋ ಮೇಜರ್‌ ನ್ಯೂಸ್‌ ಬಂದಿದೆ ಅನ್ನೋದು ತಕ್ಷಣಕ್ಕೇ ಹೊಳೆ­ದಿತ್ತು. ಗಡಿಬಿಡಿಯಲ್ಲಿ ತಯಾರಾಗಿ ತೆರಳಿದೆ.

ನ್ಯೂಸ್ ರೂಂ - ನವಿತಾ ಜೈನ್, ಸುವರ್ಣನ್ಯೂಸ್ ಆ್ಯಂಕರ್

ಅದು 2009ರ ಡಿ.30. ಈಟಿವಿ ಕನ್ನಡ ವಾಹಿನಿಗೆ ಸೇರಿ ಒಂದು ವರ್ಷ ಕಳೆದಿತ್ತು. ಹೈದರಾಬಾದ್‌ನಲ್ಲಿ ವಾಸ್ತವ್ಯ. ಆ ವಾರ ನನಗೆ ನೈಟ್‌ ಶಿಫ್ಟ್. ಡಿ.29ರ ರಾತ್ರಿ ಸುಮಾರು ಹತ್ತು ಗಂಟೆಗೆ ಆಫೀಸ್‌ ತಲುಪಿದೆ. ರಾತ್ರಿ 2-3 ಗಂಟೆಯಷ್ಟು ಹೊತ್ತಿಗೆ ಎಲ್ಲ ಸುದ್ದಿಗಳಿಗೂ ವಾಯ್ಸ್ ಓವರ್‌ ಕೊಟ್ಟು ನಾನು ರೆಸ್ವ್‌ ತೆಗೆದುಕೊಳ್ಳುವುದಕ್ಕೆ ನಾಲ್ಕನೇ ಮಹಡಿಯಲ್ಲಿದ್ದ ನಮ್ಮ ಮೇಕಪ್‌ ರೂಮ್‌ಗೆ ತೆರಳಿದ್ದೆ. 

ವಾಯ್ಸ್ ಎಲ್ಲ ಕೊಟ್ಟಮೇಲೆ ಮುಂಜಾನೆ ಐದರವರೆಗೆ ನಿದ್ದೆ ಮಾಡಬಹುದಿತ್ತು. ಏಕೆಂದರೆ ನಂತರ ಲೈವ್‌ ನ್ಯೂಸ್‌ ಇರೋದು ಬೆಳಗ್ಗೆ ಆರಕ್ಕೆ. ಮುಂಜಾನೆ ಟಿವಿ ಸ್ಕ್ರೀನ್‌'ನಲ್ಲಿ ಫ್ರೆಶ್‌ ಫೇಸ್‌ ಕಾಣಬೇಕೆಂಬ ಕಾರಣಕ್ಕೆ ನಮಗೆ ಒಂದಷ್ಟು ನಿದ್ದೆ ಮಾಡುವ ಅವಕಾಶ ಇತ್ತು. ನಿದ್ದೆಯಿಂದ ಎದ್ದು ಸರಿಯಾದ ಹೊತ್ತಿಗೆ ನಾವು ಡೆಸ್ಕ್‌ಗೆ ತೆರಳಿ, ಸ್ಕ್ರಿಪ್ಟ್ ನೋಡಿ, ಸ್ಟುಡಿಯೊದೊಳಗೆ ಹೋಗುತ್ತಿದ್ದೆವು.

ಆದರೆ ಡಿ.30ರ ಮುಂಜಾನೆ ನಾಲ್ಕೂವರೆ ಹೊತ್ತಿಗೆ ಮೇಕಪ್‌ ರೂಮ್‌'ನಲ್ಲಿ ಫೋನ್‌ ಇದ್ದಕ್ಕಿ­ದ್ದಂತೆ ಸದ್ದು ಮಾಡೋದಕ್ಕೆ ಶುರುಮಾಡಿತ್ತು. ಗಾಢ ನಿದ್ದೆ ಹತ್ತಿದ್ದರಿಂದ ಅದು ಗೊತ್ತಾಗಿರಲಿಲ್ಲ. ಬಹುಶಃ ಮೂರ್ನಾಲ್ಕು ರೌಂಡ್‌ ರಿಂಗ್‌ ಆದಮೇಲೆ ಫೋನ್‌ ರಿಸೀವ್‌ ಮಾಡಿದ್ದೆ. ಅತ್ತ ಕಡೆಯಿಂದ ಬುಲೆಟಿನ್‌ ಪ್ರೊಡ್ಯೂಸರ್‌ ತುಂಬಾ ಆತಂಕದಿಂದಲೇ, ‘‘ಆದಷ್ಟು ಬೇಗ ಫ್ರೆಶ್‌ ಆಗಿ, ಮೇಕಪ್‌ ಮಾಡಿ, ಡೆಸ್ಕ್‌'ಗೆ ಬನ್ನಿ... ಕಮಾನ್‌ ಕ್ವಿಕ್‌,'' ಅಂತ ಫೋನಿಟ್ಟರು. ನ್ಯೂಸ್‌ ರೂಮ್‌ ಧಾವಂತಗಳನ್ನು ಅರಿತುಕೊಳ್ಳುತ್ತಿದ್ದ ನನಗೆ ಏನೋ ಮೇಜರ್‌ ನ್ಯೂಸ್‌ ಬಂದಿದೆ ಅನ್ನೋದು ತಕ್ಷಣಕ್ಕೇ ಹೊಳೆ­ದಿತ್ತು. ಗಡಿಬಿಡಿಯಲ್ಲಿ ತಯಾರಾಗಿ ತೆರಳಿದೆ.

‘‘ವಿಷ್ಣುವರ್ಧನ್‌ ತೀರಿಕೊಂಡಿದ್ದಾರೆ. ಆರು ಗಂಟೆಯಿಂದ ನೇರಪ್ರಸಾರ. ಪ್ರಿಪೇರ್‌ ಆಗ್ಬಿಡಿ,'' ಎಂದರು ಬುಲೆಟಿನ್‌ ಪ್ರೊಡ್ಯೂಸರ್‌! ಅನಿರೀಕ್ಷಿತ ಸುದ್ದಿ ಕೇಳಿ ಅಕ್ಷರಶಃ ಶಾಕ್‌! ನಾನು ಬೆಳೆದಿದ್ದೇ ವಿಷ್ಣುವರ್ಧನ್‌ ಸಿನಿಮಾಗಳನ್ನು ನೋಡುತ್ತ. ಟಿವಿಯಲ್ಲಿ ಅವರ ಸಿನಿಮಾ ಬಂದರೆ ನಾವೆಲ್ಲ ನೆಲದ ಮೇಲೆ ಕೂತು ಟಿವಿ ನೋಡುತ್ತಿದ್ದೆವು. ಕಾಕತಾಳೀಯ ಅಂದರೆ, ಒಂದು ವಾರದ ಹಿಂದೆ ನಾವು ಗೆಳೆಯರೆಲ್ಲ ಸೇರಿ, ಯಾವುದೋ ಕಾರಣಕ್ಕೆ ವಿಷ್ಣುವರ್ಧನ್‌ ಸಿನಿಮಾಗಳ ಬಗ್ಗೆ ಚರ್ಚೆ ನಡೆಸಿದ್ದೆವು. ಹೀಗಾಗಿ ವಿಷ್ಣು ತೀರಿಕೊಂಡಿದ್ದಾರೆ ಅನ್ನೋದನ್ನು ಆ ಕ್ಷಣಕ್ಕೆ ನನಗೆ ನಂಬಲಾಗಲಿಲ್ಲ. ಬೇಜಾರು, ನೋವು, ದುಃಖ ಮನಸ್ಸನ್ನು ಆವರಿಸಿಕೊಂಡಿತ್ತು. ಮೈಂಡ್‌ ಬ್ಲ್ಯಾಂಕ್‌ ಆಗಿತ್ತು.

ಆಗಿನ್ನೂ ವಿಷ್ಣುವರ್ಧನ್‌ ಹೇಗೆ ನಿಧನರಾದರು, ಎಲ್ಲಿ ಅನ್ನುವುದೆಲ್ಲ ಇನ್ನೂ ಸ್ಟಷ್ಟವಾಗಿ ಗೊತ್ತಿರಲಿಲ್ಲ. ಇದ್ದಿದ್ದು ಪ್ರಾಥಮಿಕ ನ್ಯೂಸ್‌ ಅಷ್ಟೆ. ಆದರೆ ಇದು ತುಂಬಾ ಸೂಕ್ಷ್ಮ ವಿಚಾರವಾಗಿತ್ತು. ಏಕೆಂದರೆ, ರಾಜ್‌'ಕುಮಾರ್‌ ತೀರಿಕೊಂಡಾಗ ಏನಾಯಿತು ಅನ್ನೋದನ್ನು ನೋಡಿದ್ದೆ. ಅಲ್ಲದೆ, ಅದುವರೆಗೆ ನಾನು ತುಂಬಾ ಮೇಜರ್‌ ಲೈವ್‌ ಮಾಡಿರಲಿಲ್ಲ. ವಿಷ್ಣು ನಿಧನ, ನನ್ನ ವೃತ್ತಿ ಬದುಕಿನ ಆರಂಭದಲ್ಲಿ ಮಾಡಿದ ದೊಡ್ಡ ಲೈವ್‌ ಚಾಟ್‌. ಅಲ್ಲದೆ, ಕೈಯಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಅಲ್ಲಿ ಇಲ್ಲಿ ಫೋನ್‌ ಮಾಡಿದರೂ ಸರಿಯಾದ ಡೀಟೆಲ್ಸ್‌ ಸಿಗುತ್ತಿರಲಿಲ್ಲ. ಮನಸ್ಸಿನಲ್ಲಿ ನೋವು ಕಾಡುತ್ತಿದ್ದರೂ ಮುಖವನ್ನು ಸಹಜ ಸ್ಥಿತಿಗೆ ತಂದುಕೊಂಡು ಸ್ಟುಡಿಯೊದೊಳಗೆ ಹೋದೆ. ಬೆಳಗ್ಗೆ ಎಂಟು ಗಂಟೆವರೆಗೂ ವಿಷ್ಣು ನಿಧನದ ಸುದ್ದಿಗಳನ್ನು ಹೇಳುತ್ತಲೇ ಹೋದೆ. ಅಷ್ಟೊತ್ತಿಗೆ ಮತ್ತೊಬ್ಬ ಆ್ಯಂಕರ್‌ ಬಂದು ನ್ಯೂಸ್‌ ಕಂಟಿನ್ಯೂ ಮಾಡಿದರು. ಸ್ಟುಡಿಯೊದಿಂದ ಹೊರ ಬಂದ ಮೇಲೂ ನನಗೆ ವಿಷ್ಣುವರ್ಧನ್‌ ಸತ್ತಿದ್ದಾರೆ ಅನ್ನೋದನ್ನು ನಂಬುವುದಕ್ಕೆ ಸಾಧ್ಯ ಆಗಿರಲೇ ಇಲ್ಲ. ನನ್ನ ಎಂಟು ವರ್ಷಗಳ ವೃತ್ತಿಜೀವನದಲ್ಲಿ ಕನಸೋ ಎಂಬಂತೆ ಮುಗಿದುಹೋದದ್ದು 2009ರ ಡಿಸೆಂಬರ್‌'ನ ಆ ಮುಂಜಾನೆ ಮಾತ್ರ.

(ಕನ್ನಡಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು