ಭವಿಷ್ಯದಲ್ಲಿ ನೆರೆ, ಪ್ರವಾಹ ಇನ್ನಷ್ಟು ಹೆಚ್ಚಲಿದೆಯೇ?

By Web DeskFirst Published Aug 20, 2018, 12:38 PM IST
Highlights

ಕೇರಳ ಹಾಗೂ ಕೊಡಗಿನಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಪ್ರವಾಹವೆಂಬುದು ಭಾರತಕ್ಕೆ ಪ್ರತಿವರ್ಷದ ಶಾಪ. ಇರುವುದರಲ್ಲೇ ದಕ್ಷಿಣ ಭಾರತ ಸುರಕ್ಷಿತವಾಗಿದ್ದು, ಈಶಾನ್ಯ ಭಾರತದಲ್ಲಿ ಪ್ರತಿ ವರ್ಷ ಪ್ರವಾಹದಿಂದ ಸಾವಿರಾರು ಮಂದಿ ಮರಣ ಹೊಂದುತ್ತಾರೆ. ವಿಶ್ವಬ್ಯಾಂಕ್‌ನ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ ಪ್ರವಾಹದಿಂದ ಮರಣ ಹೊಂದುವವರ ಪೈಕಿ ಐವರಲ್ಲಿ ಒಬ್ಬರು ಭಾರತೀಯರು. ಇದಕ್ಕೆಲ್ಲ ಕಾರಣ ಹವಾಮಾನ ಬದಲಾವಣೆ ಎಂದು ವಿಶ್ವಬ್ಯಾಂಕ್ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ ಭೀಕರ ಸ್ಥಿತಿಗೆ ಕಾರಣವೇನು? ಇಲ್ಲಿವರೆಗೆ ಬಲಿಯಾದವರೆಷ್ಟು ಜನ? ಭವಿಷ್ಯದಲ್ಲಿ ನೆರೆ, ಪ್ರವಾಹ ಇನ್ನಷ್ಟು ಹೆಚ್ಚಲಿದೆಯೇ? ಈ ಕುರಿತ ಕೂತೂಹಲಕಾರಿ ಮಾಹಿತಿ ಇಲ್ಲಿದೆ.

ಕೊಡಗು (ಆ. 20):  ಕೇವಲ ಕೇರಳದಲ್ಲಿ ಮಾತ್ರವಲ್ಲದೆ, ಕರ್ನಾಟಕದ ಕೊಡಗಿನಲ್ಲಿ  ಎಡಬಿಡದೆ ಮಳೆ ಅಪ್ಪಳಿಸುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಇದರಿಂದಾಗಿ ಅಂದಾಜು ₹8000 ಕೋಟಿ ಹಾನಿ ಸಂಭವಿಸಿದೆ.

2500 ಜನರು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. 1000 ಕ್ಕೂ ಹೆಚ್ಚು ಮನೆಗಳು, 3000 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 250 ಸರ್ಕಾರಿ ಕಚೇರಿಗಳು, 20 ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಹಾನಿಗೊಳಗಾಗಿವೆ. ಕೊಡಗಿನ ಸಂತ್ರಸ್ತರ ನೆರವಿಗೆ ಇಡೀ ರಾಜ್ಯದ ಜನತೆ ಮುಂದಾಗಿದ್ದಾರೆ.

ಇಲ್ಲಿಯವರೆಗೆ ಮಳೆಗೆ ಬಲಿಯಾದವರು  ಲಕ್ಷ!

ಭಾರತದಲ್ಲಿ ಹವಾಮಾನ ಸಂಬಂಧಿ ಅಂಕಿ-ಅಂಶಗಳನ್ನು ಸರಿಯಾಗಿ ಕ್ರೋಢೀಕರಿಸಲು ಶುರುಮಾಡಿದ್ದು 1953 ರಲ್ಲಿ. ಅಲ್ಲಿಂದ 2017 ರ ವರೆಗೆ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ 64 ವರ್ಷಗಳಲ್ಲಿ 1,07,487 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಕೇಂದ್ರ ಜಲ ಆಯೋಗದ ಲೆಕ್ಕಾಚಾರ. 3.6 ಲಕ್ಷ ಕೋಟಿ ರು. ಆಸ್ತಿಪಾಸ್ತಿ ಹಾಗೂ ಬೆಳೆಹಾನಿ ಇಲ್ಲಿಯವರೆಗೆ ಉಂಟಾಗಿದೆ.

ಪ್ರವಾಹಕ್ಕೆ  ಏನು ಕಾರಣ?

ಅತ್ಯಂತ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಮಳೆ ಸುರಿಯುವುದು, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು, ಅಣೆಕಟ್ಟೆಗಳು ಹಾಗೂ ನೀರಿನ ಸಂಗ್ರಹಾಗಾರಗಳನ್ನು ಯೋಜನಾಬದ್ಧವಾಗಿ ನಿರ್ವಹಣೆ ಮಾಡದೆ ಇರುವುದು, ನೆರೆ ನಿಯಂತ್ರಣ ಕ್ರಮ ಕೈಗೊಳ್ಳದೆ ಇರುವುದು, ಕಾಡಿನ ನಾಶ, ನೈಸರ್ಗಿಕ ರಚನೆಗಳನ್ನು ಹಾಳು ಮಾಡುತ್ತಿರುವುದು. 

ಭವಿಷ್ಯದಲ್ಲಿ ನೆರೆ, ಪ್ರವಾಹ ಇನ್ನಷ್ಟು ಹೆಚ್ಚಲಿದೆಯೇ?

ದಕ್ಷಿಣ ಏಷ್ಯಾದಲ್ಲಿ ಉಷ್ಣತೆ ನಿರಂತರವಾಗಿ ಏರುತ್ತಿದೆ. ಮುಂದಿನ ಕೆಲ ದಶಕಗಳವರೆಗೆ ಇದು ಹೀಗೇ ಏರುತ್ತಿರುತ್ತದೆ. ಇದರಿಂದಾಗಿ ನೆರೆ ಹಾಗೂ ಪ್ರವಾಹ ಕೂಡ ಹೆಚ್ಚುತ್ತದೆ. ಜೊತೆಗೆ ಶುದ್ಧ ನೀರಿಗೆ ಬೇಡಿಕೆ ಹೆಚ್ಚುತ್ತದೆ. ಉಷ್ಣತೆ ಸಂಬಂಧಿ ರೋಗಗಳೂ ಹೆಚ್ಚುತ್ತವೆ ಎಂದು ವಿಶ್ವಬ್ಯಾಂಕ್‌ನ ಅಧ್ಯಯನ ವರದಿ ಹೇಳಿದೆ.

ಆತಂಕ ಯಾರಿಗೆ ಹೆಚ್ಚು?

ವಿಶ್ವಬ್ಯಾಂಕ್‌ನ ವರದಿಯ ಪ್ರಕಾರ ಮುಂದಿನ ದಿನಗಳಲ್ಲಿ ಕೊಲ್ಕತಾ, ಮುಂಬೈನಂತಹ ನಗರಗಳಿಗೆ ಪ್ರವಾಹದ ಆತಂಕ ಹೆಚ್ಚಿದೆ. ಹವಾಮಾನ ವೈಪರೀತ್ಯದಿಂದ 2050 ರೊಳಗೆ ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶ ರಾಜ್ಯಗಳು ಅತಿಹೆಚ್ಚು
ನಷ್ಟ (ಬರ-ನೆರೆ) ಅನುಭವಿಸುತ್ತವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಕೇರಳ, ಒಡಿಶಾ, ಅಸ್ಸಾಂ, ಬಿಹಾರ, ಗುಜರಾತ್, ಉತ್ತರ ಪ್ರದೇಶ, ಹರ್ಯಾಣ ಹಾಗೂ ಪಂಜಾಬ್‌ಗೆ ಪ್ರವಾಹದ ಆತಂಕ ಹೆಚ್ಚು. 

click me!