
ನವದೆಹಲಿ (ಸೆ. 11): 2011 -12 ನೇ ಸಾಲಿನ ತೆರಿಗೆ ವಿವರ ಸಲ್ಲಿಕೆ ಬಗ್ಗೆ ಮರುಪರಿಶೀಲನೆ ನಡೆಸಬಾರದು ಎಂದು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಆಸ್ಕರ್ ಫರ್ನಾಂಡಿಸ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಇದರಿಂದಾಗಿ ನಾಯಕರಿಗೆ ತೆರಿಗೆ ಇಲಾಖೆಯಿಂದ ಸಂಕಷ್ಟ ಎದುರಾಗುವ ಸಂಭವವಿದೆ. 2011 -12 ನೇ ಸಾಲಿನ ಆದಾಯಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ರಾಹುಲ್ ಗಾಂಧಿ ಬಚ್ಚಿಟ್ಟಿದ್ದಾರೆ ಎಂಬ ಕಾರಣ ನೀಡಿ ಮರುಪರಿಶೀಲನೆ ನಡೆಸಲು ನಿರ್ಧರಿಸಿದ ಆದಾಯ ತೆರಿಗೆ ಇಲಾಖೆ ಕ್ರಮ ಪ್ರಶ್ನಿಸಿ ಮೂವರೂ ನಾಯಕರು ಹೈಕೋರ್ಟ್ ಮೊರೆ ಹೋಗಿದ್ದರು.
ಆ.16 ರಂದು ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್ ಈಗ ತೀರ್ಪು ಪ್ರಕಟಿಸಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಖಾಸಗಿ ಅರ್ಜಿಯ ತನಿಖೆ ವೇಳೆ ಕಾಂಗ್ರೆಸ್ ನಾಯಕರು ಆದಾಯ ತೆರಿಗೆ ಪ್ರಕರಣಗಳಲ್ಲಿ ಸಿಲುಕುವಂತಾಗಿತ್ತು.
ಕೇವಲ 50 ಲಕ್ಷ ರು. ವೆಚ್ಚದಲ್ಲಿ ಯಂಗ್ ಇಂಡಿಯಾ ಎಂಬ ಕಂಪನಿಯನ್ನು ಸ್ಥಾಪಿಸಿ ಸೋನಿಯಾ, ರಾಹುಲ್ ಹಾಗೂ ಇತರರು ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಯ 90.25 ಕೋಟಿ ರು. ಆಸ್ತಿ ಹಕ್ಕು ಗಳಿಸಿದ್ದಾರೆ. ಆ ಕಂಪನಿಯ ಎಲ್ಲ ಷೇರುಗಳನ್ನು ಖರೀದಿಸಿದ್ದಾರೆ ಎಂಬುದು ಸ್ವಾಮಿ ಆರೋಪವಾಗಿತ್ತು.
ತನಿಖೆಯ ಆಳಕ್ಕೆ ಇಳಿದಾಗ 2011 -12 ನೇ ಸಾಲಿನಲ್ಲಿ ರಾಹುಲ್ ಗಾಂಧಿ ಅವರು 68 ಲಕ್ಷ ರು. ಆದಾಯ ತೋರಿಸಿದ್ದರು. ಯಂಗ್ ಇಂಡಿಯಾದಲ್ಲಿರುವ ಷೇರುಗಳನ್ನೂ ಲೆಕ್ಕಕ್ಕೆ ಹಿಡಿದರೆ ರಾಹುಲ್ ಆದಾಯ 154 ಕೋಟಿ ರು.ಗೆ ಏರುತ್ತದೆ ಎಂದು ತೆರಿಗೆ ಇಲಾಖೆ ಈ ಹಿಂದೆ ಹೇಳಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.