
ನವದೆಹಲಿ(ಮಾ.15): 'ಯಾರೂ ಒಳಗೆ ಬರಬೇಡಿ, ನಾನಿವರನ್ನು ನೋಡಿಕೊಳ್ಳುತ್ತೇನೆ..' ಇದು ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ತಮ್ಮ ಸಹೋದ್ಯೋಗಿಗಳಿಗೆ ನೀಡಿದ ಕೊನೆಯ ಆದೇಶ.
ಅದು, 2008, ನವೆಂಬರ್ 26. ಮುಂಬೈನ ತಾಜ್ ಹೊಟೇಲ್ ಮೇಲೆ ದಾಳಿ ಮಾಡಿದ್ದ ಪಾಕ್ ಬೆಂಬಲಿತ ಲಷ್ಕರ್-ಎ-ತೋಯ್ವಾ ಸಂಘಟನೆಯ ಉಗ್ರರು, ನಾಗರಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು ಭದ್ರತಾ ಪಡೆಗಳತ್ತ ಮನಬಂದಂತೆ ಗುಂಡು ಹಾರಿಸುತ್ತಿದ್ದರು.
ಈ ವೇಳೆ ಆಗಮಿಸಿದ ನ್ಯಾಶನಲ್ ಸೆಕ್ಯೂರಿಟಿ ಗಾರ್ಡ್ಸ್(ಎನ್‌ಎಸ್‌ಜಿ) ಕಮಾಂಡೋಗಳು, ತಾಜ್ ಹೋಟೆಲ್‌ನ್ನು ಸುತ್ತುವರೆದು ಕಾರ್ಯಾಚರಣೆ ಆರಂಭಿಸಿದ್ದರು. ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದವರು ಮೇಜರ್ ಸಂದೀಪ್ ಉನ್ನಿಕೃಷ್ಣನ್.
ಹೋಟೆಲ್ ಒಳಗೆ ನುಗ್ಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಉಗ್ರರ ಕಪಿಮುಷ್ಠಿಯಲ್ಲಿದ್ದ ಕೆಲವು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹೋಟೆಲ್‌ನಿಂದ ಹೊರ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.
ಅಲ್ಲದೇ ಉಗ್ರರ ಗುಂಡೇಟಿನಿಂದ ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಗಳನ್ನು ರಕ್ಷಿಸುವಲ್ಲಿಯೂ ಸಂದೀಪ್ ಯಶಶ್ವಿಯಾಗಿದ್ದರು. ಆದರೆ ಉಗ್ರರನ್ನು ಬೇಟೆಯಾಡುತ್ತಾ ಮುನ್ನುಗ್ಗುತ್ತಿದ್ದ ಸಂದೀಪ್ ಉನ್ನಿಕೃಷ್ಣನ್, ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಯನ್ನು ರಕ್ಷಿಲು ಮುಂದಾದಾಗ ಉಗ್ರರ ಗುಂಡುಗಳು ಅವರ ಎದೆ ಸೀಳಿತ್ತು.
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಈ ವೇಳೆ ತಮ್ಮ ರಕ್ಷಣೆಗೆ ಮುಂದಾದ ಸಹೋದ್ಯೋಗಿಗಳಿಗೆ ಯಾರೂ ಒಳಗೆ ಬರಬೇಡಿ, ನಾನು ಇವರನ್ನು(ಉಗ್ರರನ್ನು) ನೋಡಿಕೊಳ್ಳುತ್ತೇನೆ ಎಂದು ಕೂಗಿ ಹೇಳಿದ್ದರು.
ಅಂತೆಯೇ ಕೊನೆಯ ಉಸಿರು ಹೊರ ಚೆಲ್ಲುವವರೆಗೂ ಸಂದೀಪ್ ಉಗ್ರರೊಂದಿಗೆ ಸೆಣೆಸಾಡಿ ದೇಶಕ್ಕಾಗಿ ಪ್ರಾಣ ತಮ್ಮ ಪ್ರಾಣ ಅರ್ಪಿಸಿದರು. ಸಂದೀಪ್ ಉನ್ನಿಕೃಷ್ಣನ್ ತ್ಯಾಗ, ಬಲಿದಾನವನ್ನು ದೇಶ ಎಂದೆಂದಿಗೂ ಮರೆಯುವುದಿಲ್ಲ. ದೇಶಕ್ಕಾಗಿ ಪ್ರಾಣ ಅರ್ಪಿಸಿದ ಉನ್ನಿಕೃಷ್ಣನ್ ಈ ದೇಶದ ಯುವ ಜನತೆಯ ಆದರ್ಶವಾಗಿ ಎಂದೆಂದಿಗೂ ರಾರಾಜಿಸುತ್ತಿರುತ್ತಾರೆ.
ಮುಂಬೈ ದಾಳಿಯ ಸಂದರ್ಭದಲ್ಲಿ ತಮ್ಮ ಅದ್ಭುತ ಶೌರ್ಯ ಪ್ರದರ್ಶನದ ಮೂಲಕ ಜನರ ಪ್ರಾಣ ರಕ್ಷಿಸಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಭಾರತ ಸರ್ಕಾರ ಶಾಂತಿ ಕಾಲದ ಅತ್ಯುನ್ನತ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ.
ಇಂದು ದೇಶಕ್ಕಾಗಿ, ಕರ್ತವ್ಯಕ್ಕಾಗಿ ತಮ್ಮ ರಕ್ತ ಚೆಲ್ಲಿದ ಈ ವೀರ ಯೋಧನ ಹುಟ್ಟುಹಬ್ಬವಾಗಿದ್ದು, ದೇಶಕ್ಕೆ ಇನ್ನೂ ಅನೇಕ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಅವಶ್ಯಕತೆ ಇದೆ ಅಂತಾರೆ ಇಸ್ರೋ ಮಾಜಿ ಅಧಿಕಾರಿಯಾಗಿರುವ ಸಂದೀಪ್ ಅವರ ತಂದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.