
ವಾಷಿಂಗ್ಟನ್(ಜೂ.8): ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್, ಮಹತ್ವದ ಸಂಶೋಧನೆ ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆ. ಕ್ಯೂರಿಯಾಸಿಟಿ ರೋವರ್ ಕುರಿತು ಅತೀ ಮಹತ್ವದ ಮಾಹಿತಿ ಬಹಿರಂಗಪಡಿಸಲು ನಾಸಾ ನಿನ್ನೆಯಷ್ಟೇ ಪತ್ರಿಕಾಗೋಷ್ಠಿ ಕರೆದಿತ್ತು.
ಅದರಂತೆ ಕ್ಯೂರಿಯಾಸಿಟಿ ರೋವರ್ ಪತ್ತೆ ಹಚ್ಚಿದ ಅಂಶವನ್ನು ನಾಸಾ ಬಿಡುಗಡೆ ಮಾಡಿದ್ದು, ಇಡೀ ಜಗತ್ತನ್ನು ಮೂಕವಿಸ್ಮಿತವನ್ನಾಗಿಸಿದೆ. ಮಂಗಳ ಗ್ರಹದಲ್ಲಿ ಸಾವಯವ ಜೈವಿಕ ಅಂಶ ಪತ್ತೆಯಾಗಿದ್ದು, ಕೆಂಪು ಗ್ರಹ ಪ್ರಾಚೀನ ಕಾಲದಲ್ಲಿ ಜೀವಿಗಳ ಆವಾಸ ಸ್ಥಾನವಾಗಿತ್ತು ಎಂದು ನಾಸಾ ಸ್ಪಷ್ಟಪಡಿಸಿದೆ. ಪ್ರಸ್ತುತವೂ ಮಂಗಳ ಗ್ರಹ ಸೂಕ್ಷ್ಮಾಣು ಜೀವಿಗಳ ಆವಾಸ ಸ್ಥಾನವಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಈ ಸಂಶೋಧನೆ ಸಹಾಯಕಾರಿಯಾಗಲಿದೆ ಎಂದು ನಾಸಾ ಹೇಳಿದೆ.
ಮಂಗಳ ಗ್ರಹದ ಕಲ್ಲುಬಂಡೆಗಳ ಒಳಪದರಿನಲ್ಲಿ ಸಾವಯವ ಜೈವಿಕ ಅಂಶ ಪತ್ತೆ ಹಚ್ಚಿರುವ ರೋವರ್, ಇದರ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುತ್ತಿದೆ ಎಂದು ನಾಸಾ ತಿಳಿಸಿದೆ. ಈ ಕಲ್ಲುಬಂಡೆಗಳು ಸುಮಾರು 3 ಬಿಲಿಯನ್ ವರ್ಷಗಳಷ್ಟು ಪುರಾತನವಾಗಿದ್ದು, ಪ್ರಮುಖವಾಗಿ ಹೈಡ್ರೋಜನ್, ಕಾರ್ಬನ್ ಮತ್ತು ಆಮ್ಲಜನಕದ ಅಂಶಗಳನ್ನು ಹೊಂದಿವೆ.
ಮಂಗಳಗ್ರಹದಲ್ಲಿ ಈ ಹಿಂದೆ ಸಮುದ್ರವಿದ್ದ ಕುರಿತು ಸಾಕಷ್ಟು ಕುರುಹುಗಳು ದೊರೆತಿದ್ದು, ಇದು ಜೀವಿಗಳ ಉಗಮಕ್ಕೂ ಕಾರಣವಾಗಿರಬಹುದು ಎಂದು ನಾಸಾದ ಜೆನ್ ಈಜೆನಬ್ರೊಡ್ ಹೇಳಿದ್ದಾರೆ. ಇಷ್ಟೇ ಅಲ್ಲದೇ ಮಂಗಳ ಗ್ರಹದ ಮೇಲ್ಮೆ ಮೇಲೆ ಋತುಕಾಲಿಕ ಮೀಥೇನ್ ಕೂಡ ಪತ್ತೆಯಾಗಿದ್ದು, ಸಾವಯವ ಜೈವಿಕ ಅಂಶಗಳನ್ನು ಪೋಷಿಸಲು ಇದೂ ಕೂಡ ಮಹತ್ವದ ಪಾತ್ರ ನಿರ್ವಹಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.