ಕಾವೇರಿ: ಕೇಂದ್ರಕ್ಕೆ ಉತ್ತರಿಸುವ ಹೊಣೆ ನಾರಿಮನ್‌ಗೆ

By Suvarna Web DeskFirst Published May 10, 2017, 5:34 AM IST
Highlights

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸರ್ವಪಕ್ಷಗಳ ಸಭಾನಾಯಕರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಸಭೆ ಬಳಿಕ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಸುದ್ದಿಗಾರರಿಗೆ ಈ ವಿಷಯ ತಿಳಿಸಿ, ‘ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯ ಕಾವೇರಿ ನೀರು ಹಂಚಿಕೆ ಸಂಬಂಧ ತಜ್ಞರ ಸಮಿತಿ ರಚಿಸುವ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಅಭಿಪ್ರಾಯ ಕೋರಿದೆ.

ಬೆಂಗಳೂರು : ಕಾವೇರಿ ಕಣಿವೆಯ ನಿರ್ವಹಣೆಗಾಗಿ ತಜ್ಞರ ತಂಡ ರಚನೆ ಮಾಡಬೇಕೆನ್ನುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ರಾಜ್ಯ ಒಪ್ಪಿಗೆ ನೀಡಬೇಕೆ, ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹೊಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರ ವಕಾಲತ್ತು ವಹಿಸುತ್ತಿರುವ ಹಿರಿಯ ಕಾನೂನು ತಜ್ಞ ಎಫ್‌.ಎಸ್‌. ನಾರಿಮನ್‌ ಹೆಗಲಿಗೆ ರಾಜ್ಯ ಸರ್ಕಾರ ವಹಿಸಿದೆ.

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸರ್ವಪಕ್ಷಗಳ ಸಭಾನಾಯಕರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಸಭೆ ಬಳಿಕ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಸುದ್ದಿಗಾರರಿಗೆ ಈ ವಿಷಯ ತಿಳಿಸಿ, ‘ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯ ಕಾವೇರಿ ನೀರು ಹಂಚಿಕೆ ಸಂಬಂಧ ತಜ್ಞರ ಸಮಿತಿ ರಚಿಸುವ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಅಭಿಪ್ರಾಯ ಕೋರಿದೆ.

ಈ ಸಂಬಂಧ ಪುದುಚೇರಿ ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಉಳಿದ ಮೂರು ರಾಜ್ಯಗಳ ಅಭಿಪ್ರಾಯಕ್ಕಾಗಿ ಕಾಯುತ್ತಿದೆ. ಈ ಕುರಿತಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಕೂಡ ಸಾಕಷ್ಟುಚರ್ಚೆಯಾಗಿತ್ತು. ಹೀಗಾಗಿ ರಾಜ್ಯ ಕೂಡ ತನ್ನ ನಿಲುವು ಪ್ರಕಟಿಸಬೇಕಾಗಿರುವು​ದರಿಂದ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು ಎಂದು ಹೇಳಿದರು.

‘ರಾಜ್ಯದ ಹಿತ ಕಾಯುವ ದೃಷ್ಟಿಯಿಂದ ಹಾಗೂ ಕಾವೇರಿ ಅಂತಿಮ ತೀರ್ಪಿನ ವಿರುದ್ಧ ಸುಪ್ರಿಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ಮೇಲೆ ತಜ್ಞರ ತಂಡ ರಚನೆಗೆ ಒಪ್ಪಿಗೆ ನೀಡಿದರೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತನ್ನ ನಿಲುವು ತೆಗೆದುಕೊಳ್ಳಬೇಕಿದೆ. ಹೀಗಾಗಿ ರಾಜ್ಯದ ಕಾನೂನು ತಂಡದ ಮುಖ್ಯಸ್ಥ ಎಫ್‌.ಎಸ್‌.ನಾರಿಮನ್‌ ಅವರೊಂದಿಗೆ ಕೂಲಂಕಷವಾಗಿ ಚರ್ಚಿಸಿ, ಅಭಿಪ್ರಾಯ ಪಡೆಯಲು ಸರ್ಕಾರ ನಿರ್ಧರಿಸಿದೆ' ಎಂದು ಹೇಳಿದರು.

ಸಭೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌, ಸಚಿವರಾದ ಟಿ.ಬಿ.ಜಯಚಂದ್ರ, ಡಾ.ಜಿ.ಪರಮೇಶ್ವರ್‌, ಜೆಡಿಎಸ್‌ ನಾಯಕರಾದ ಎಚ್‌.ಡಿ.ರೇವಣ್ಣ, ಬಸವರಾಜ ಹೊರಟ್ಟಿ, ಅಡ್ವೋಕೇಟ್‌ ಜನರಲ್‌ ಮಧುಸೂದನ್‌ ನಾಯ್‌್ಕ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

click me!