ದಲಿತರ ಜತೆ 2 ದಿನ ಬಿಜೆಪಿ ಸಂಸದರ ಗ್ರಾಮ ವಾಸ್ತವ್ಯ - ಅಂಬೇಡ್ಕರ್‌ ಜಯಂತಿಯಿಂದ ವಾಸ್ತವ್ಯಕ್ಕೆ ಮೋದಿ ಸೂಚನೆ

By Suvarna Web DeskFirst Published Apr 8, 2018, 8:49 AM IST
Highlights

- ಅಂಬೇಡ್ಕರ್‌ ಜಯಂತಿಯಿಂದ ವಾಸ್ತವ್ಯಕ್ಕೆ ಮೋದಿ ಸೂಚನೆ

- ಕೇಂದ್ರದ ದಲಿತ ಕಲ್ಯಾಣ ಯೋಜನೆ ವಿವರಿಸಲು ನಿರ್ದೇಶನ

ನವದೆಹಲಿ: ಕೇಂದ್ರ ಸರ್ಕಾರವು ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟಿದೆ ಎಂಬ ಪ್ರತಿಪಕ್ಷಗಳ ಆರೋಪಗಳಿಂದ ವಿಚಲಿತರಾದಂತೆ ಕಂಡುಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಪ್ರತಿ ಬಿಜೆಪಿ ಸಂಸದರು 2 ರಾತ್ರಿಗಳನ್ನು ದಲಿತರ ಹಾಡಿಗಳಲ್ಲಿ ಕಳೆದು, ಈ ಮಿಥ್ಯೆಯನ್ನು ಹೋಗಲಾಡಿಸಬೇಕು’ ಎಂದು ಕರೆ ನೀಡಿದ್ದಾರೆ.

ಪಕ್ಷದ 38ನೇ ಸಂಸ್ಥಾಪನಾ ದಿವಸದಲ್ಲಿ ಮಾತನಾಡಿದ ಮೋದಿ ಈ ವಿಷಯ ತಿಳಿಸಿದರು ಎಂದು ಸಭೆಯಲ್ಲಿದ್ದ ಕೆಲವು ಬಿಜೆಪಿ ಸಂಸದರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಶೇ.50ಕ್ಕಿಂತ ಹೆಚ್ಚು ದಲಿತರು ಇರುವ ಗ್ರಾಮಗಳಿಗೆ ಅಂಬೇಡ್ಕರ್‌ ಜಯಂತಿ ದಿನವಾದ ಏಪ್ರಿಲ್‌ 14 ಹಾಗೂ ಮೇ 5ರ ಮಧ್ಯೆ ತೆರಳಿ. ಅಲ್ಲಿ 2 ರಾತ್ರಿಗಳನ್ನು ದಲಿತರೊಂದಿಗೆ ಸಂವಾದ ನಡೆಸುತ್ತ ಕಳೆಯಿರಿ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ದಲಿತ ನೀತಿಗೆ ಸಂಬಂಧಿಸಿದಂತೆ ಹರಡಿಸುತ್ತಿರುವ ಮಿಥ್ಯೆಗಳ ಬಗ್ಗೆ ತಿಳಿಹೇಳಿ. ಅಲ್ಲದೆ, ಪಕ್ಷವು ಹಮ್ಮಿಕೊಂಡಿರುವ ದಲಿತ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ’ ಎಂದು ಮೋದಿ ಕರೆ ನೀಡಿದರು.

ದೇಶದಲ್ಲಿ ದಲಿತರ ಹೆಚ್ಚಾಗಿರುವ ಹಳ್ಳಿಗಳ ಸಂಖ್ಯೆ 20000ಕ್ಕಿಂತ ಹೆಚ್ಚಿದೆ. ಇಂಥ ಹಳ್ಳಿಗಳನ್ನು ಆಯ್ಕೆ ಮಾಡಿ ಅಲ್ಲಿ ವಾಸ್ತವ್ಯ ಮಾಡಬೇಕು. ನಮ್ಮ ಬಗ್ಗೆ ವಿಪಕ್ಷಗಳು ಹಬ್ಬಿಸುತ್ತಿರುವ ಸುದ್ದಿ ಸುಳ್ಳು ಎಂದು ಅವರಿಗೆ ಮನವರಿಕೆ ಮಾಡಿಕೊಡಬೇಕು. ಏ.14ರಂದು ನಡೆಯುವ ಅಂಬೇಡ್ಕರ್‌ ಜಯಂತಿಯನ್ನು ಎಲ್ಲಾ ಬಿಜೆಪಿ ಸಂಸದರು ತಮ್ಮ ಸ್ವಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಆಚರಿಸಬೇಕು ಎಂದು ಮೋದಿ ಸೂಚಿಸಿದರು ಎನ್ನಲಾಗಿದೆ.

ಈ ನಡುವೆ, ಅಂಬೇಡ್ಕರ್‌ ಜಯಂತಿಯ ಮುನ್ನಾ ದಿನವಾದ ಏಪ್ರಿಲ್‌ 13ರಂದು ಮೋದಿ ಅವರು, ಅಂಬೇಡ್ಕರ್‌ ನಿಧನ ಹೊಂದಿದ ‘26, ಅಲಿಪುರ ಮಾರ್ಗ’ದ ನಿವಾಸವನ್ನು ಸ್ಮಾರಕ ಎಂದು ಘೋಷಿಸಿ ಉದ್ಘಾಟಿಸುವ ನಿರೀಕ್ಷೆಯಿದೆ.

click me!