ದಾಖಲೆ ಸೃಷ್ಟಿಸಿದ ಬೆಂಗಳೂರು ಮೆಟ್ರೋ : ಏನದು..?

By Web DeskFirst Published Oct 20, 2018, 7:52 AM IST
Highlights

ನಮ್ಮ ಮೆಟ್ರೋ ಇದೀಗ ಹೊಸ ರೀತಿಯಾದ ದಾಖಲೆಯೊಂದನ್ನು ಸೃಷ್ಟಿ ಮಾಡಿದೆ. ಒಂದೇ ದಿನದಲ್ಲಿ ಮೆಟ್ರೋದಲ್ಲಿ 4 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ. 

ಬೆಂಗಳೂರು :  ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ಹೊಸ ದಾಖಲೆ ನಿರ್ಮಾಣವಾಗಿದ್ದು, ಅ.17ರಂದು ಒಟ್ಟು 4.49 ಲಕ್ಷ ಮಂದಿ ಪ್ರಯಾಣಿಕರು ಒಂದೇ ದಿನದಲ್ಲಿ ಪ್ರಯಾಣಿಸುವ ಮೂಲಕ ಈ ಹಿಂದಿನ ದಾಖಲೆಯನ್ನು ಮುರಿದಿದೆ.

ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಮಾಹಿತಿ ನೀಡಿದ್ದು, ಬೈಯಪ್ಪನಹಳ್ಳಿ- ನಾಯಂಡಹಳ್ಳಿ (ಮೈಸೂರು ರಸ್ತೆ ನಿಲ್ದಾಣ) ನೇರಳೆ ಮಾರ್ಗದಲ್ಲಿ 2,43,799 ಹಾಗೂ ನಾಗಸಂದ್ರ- ಯಲಚೇನಹಳ್ಳಿ (ಹಸಿರು ಮಾರ್ಗ) ಮಾರ್ಗದಲ್ಲಿ 2,05,602 ಮಂದಿ ಸಂಚರಿಸಿದ್ದಾರೆ. ಒಟ್ಟು 4,49,401 ಮಂದಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದು, ಈ ಹಿಂದಿನ ದಾಖಲೆ ಮುರಿದಿದೆ. 2018 ಸೆ.11ರಂದು ಒಟ್ಟು 4,36,693 ಮಂದಿ ಒಂದೇ ದಿನದಲ್ಲಿ ಪ್ರಯಾಣಿಸಿದ್ದು ಈ ಹಿಂದಿನ ದಾಖಲೆ ಆಗಿತ್ತು. ಹಿಂದಿನ ದಾಖಲೆಗಿಂತ 12,708 ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ.

ದಸರಾ ರಜೆ ಹಿನ್ನೆಲೆಯಲ್ಲಿ ಅ.18 ಮತ್ತು 19ರಂದು ಹಾಗೂ ಭಾನುವಾರವೂ ಸರ್ಕಾರ ರಜೆ ಇತ್ತು. ಶನಿವಾರ ಹಾಗೂ ಭಾನುವಾರ ಖಾಸಗಿ ಕಂಪನಿಗಳಿಗೆ ರಜೆ. ಸತತ ರಜೆಗಳಿದ್ದ ಕಾರಣ ಊರುಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿತ್ತು. 

ಅಲ್ಲದೇ ಹಬ್ಬದ ಓಡಾಟವೂ ಹೆಚ್ಚಾಗಿದ್ದರಿಂದ ಅ.17ರಂದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಅ.18 ಮತ್ತು 19ರಂದು ದಸರಾ ರಜೆ ಇದ್ದುದರಿಂದ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಸಂಚಾರಿ ದಟ್ಟಣೆ ಕಡಿಮೆ ಇತ್ತು. ಆದರೆ, ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸ ಕಂಡು ಬಂದಿಲ್ಲ. ಪ್ರತಿದಿನದಂತೆ ಈ ದಿನಗಳಲ್ಲೂ ನೇರಳೆ ಮತ್ತು ಹಸಿರು ಮಾರ್ಗದಿಂದ ಅಂದಾಜು 3 ಲಕ್ಷಕ್ಕೂ ಅಧಿಕ ಮಂದಿ ಮೆಟ್ರೋ ರೈಲಿನಲ್ಲಿ ಸಂಚರಿಸಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

click me!