
ಸೋಲ್(ಅ.01): ಉತ್ತರ ಕೊರಿಯಾ ಮತ್ತು ಅಮೆರಿಕದ ಮಧ್ಯೆ ಯುದ್ಧದ ಕಾರ್ಮೋಡ ಕವಿಯುತ್ತಿದ್ದಂತೆಯೇ, ಉತ್ತರ ಕೊರಿಯಾ ತನ್ನ ರಾಕೆಟ್ ಘಟಕಗಳಿಂದ ಕ್ಷಿಪಣಿಗಳನ್ನು ಹೊರತೆಗೆದು ಅಜ್ಞಾತ ಸ್ಥಳಕ್ಕೆ ಸಾಗಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಇದೇ ವೇಳೆ, ಅಮೆರಿಕ ಕೂಡ ಇದಕ್ಕೆ ಪ್ರತ್ಯುತ್ತರ ನೀಡಲು ಅಣಿಯಾದಂತಿದ್ದು, ಈ ವರ್ಷದ ಅಂತ್ಯದ ಒಳಗೆ ಉ.ಕೊರಿಯಾದ ಬದ್ಧ ವೈರಿ ದೇಶವಾದ ದಕ್ಷಿಣ ಕೊರಿಯಾದಲ್ಲಿ ತನ್ನ ಸೇನಾ ಸಲಕರಣೆಗಳನ್ನು ನಿಯೋಜಿಸಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಹೀಗಾಗಿ ಕಳೆದ ಕೆಲ ತಿಂಗಳಿನಿಂದ ಉ‘ಯ ದೇಶಗಳ ನಡುವೆ ನಡೆಯುತ್ತಿರುವ ವಾಕ್ಸಮರ, ಕ್ಷಿಪಣಿ ಪ್ರಯೋಗದ ಮೂಲಕ ಬೆದರಿಕೆ ಹಾಕುವ ತಂತ್ರ ನಿರ್ಣಾಯಕ ಘಟ್ಟವನ್ನು ತಲುಪಿದೆಯೇ ಎಂಬ ಅತಂಕವನ್ನು ಹುಟ್ಟುಹಾಕಿದೆ. ಉತ್ತರ ಕೊರಿಯಾ ತನ್ನ ರಾಜಧಾನಿ ಪ್ಯೋಂಗ್'ಯಾಂಗ್'ನ ಉತ್ತರಕ್ಕಿರುವ ಕ್ಷಿಪಣಿ ಸಂಶೋಧನಾ ಹಾಗೂ ಅಭಿವೃದ್ಧಿ ಘಟಕದಲ್ಲಿನ ಕ್ಷಿಪಣಿಗಳನ್ನು ಹೊರತೆಗೆದು ಅವುಗಳನ್ನು ಎಲ್ಲಿಗೋ ಸಾಗಿಸುತ್ತಿದ್ದುದನ್ನು ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಗುಪ್ತಚರರು ಪತ್ತೆ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಈ ಸಂಶೋಧನಾ ಘಟಕದಲ್ಲಿ ಖಂಡಾಂತರ ಕ್ಷಿಪಣಿಗಳೇ ಹೆಚ್ಚಿವೆ. ಹ್ವಾಸಾಂಗ್-14 ಖಂಡಾಂತರ ಹಾಗೂ ಹ್ವಾಸಾಂಗ್-12 ಮಧ್ಯಮ ದೂರದ ಕ್ಷಿಪಣಿಗಳು ಇವಾಗಿರಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಸಾಗಣೆಯಾದ ದಿನಾಂಕ ಮತ್ತು ಎಲ್ಲಿಗೆ ಸಾಗಿಸಲಾಯಿತು ಎಂಬುದನ್ನು ತಿಳಿಸಿಲ್ಲ. ಅಲ್ಲದೆ ಈ ಭಾಗದಲ್ಲಿ ಅಸಹಜ ಚಟುವಟಿಕೆ ಗಳೇನಾದರೂ ನಡೆಯುತ್ತಿವೆಯೇ ಎಂಬ ಮಾಹಿತಿಯನ್ನೂ ನೀಡಿಲ್ಲ.
ಅಮೆರಿಕ ತಿರುಗೇಟು:
ಇದೇ ವೇಳೆ ಅಮೆರಿಕ ಕೂಡ ಈ ವರ್ಷದ ಅಂತ್ಯದ ವೇಳೆಗೆ ಸೋಲ್'ನಲ್ಲಿ ತನ್ನ ‘ವ್ಯೂಹಾತ್ಮಕ ಸಲಕರಣೆ’ಗಳನ್ನು ಕಳಿಸಬಹುದು ಎಂದು ಉತ್ತರ ಕೊರಿಯಾದ ವೈರಿ ದೇಶ ದಕ್ಷಿಣ ಕೊರಿಯಾ ಸರ್ಕಾರ ಹೇಳಿದೆ. ಮೂಲಗಳ ಪ್ರಕಾರ, ಬಾಂಬರ್'ಗಳು, ಯುದ್ಧವಿಮಾನಗಳು, ಅಣುಸಜ್ಜಿತ ಜಲಾಂತರ್ಗಾ ಮಿಗಳು, ಕ್ಷಿಪಣಿ ಸಾಗಿಸುವ ಹಡಗುಗಳಿಗೆ ದಕ್ಷಿಣ ಕೊರಿಯಾದವರು ‘ವ್ಯೂಹಾತ್ಮಕ ಸಲಕರಣೆ’ ಎನ್ನುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.