
ಬೆಂಗಳೂರು(ಅ.01): ಕಳೆದ 2011ರಿಂದ ಸತತ ಬರ ಎದುರಿಸುತ್ತಾ ಬಂದ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ರಾಜ್ಯ ಬರದಿಂದ ಮುಕ್ತಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ನಿನ್ನೆ ಶನಿವಾರ ರಾಜ್ಯದಲ್ಲಿ ಈ ಬಾರಿಯ ಮುಂಗಾರು ಅಧಿಕೃತವಾಗಿ ಮುಕ್ತಾಯವಾಗಿದೆ. ಆದರೆ, ಇನ್ನೂ ಒಂದು ವಾರ ರಾಜ್ಯದಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಚುನಾವಣೆಗೆ ಹೋಗುವ ವರ್ಷದಲ್ಲಿ ಸಮೃದ್ಧ ಮಳೆಯಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಡಳಿತಾರೂಢ ಪಕ್ಷಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಆದರೆ, ಉತ್ತಮ ಮಳೆಯಾಗಿದ್ದರೂ ಮಳೆ ಆರಂಭವಾಗುವುದು ವಿಳಂಬವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಆಹಾರ ಉತ್ಪಾದನೆಯಲ್ಲಿ ಮಾತ್ರ ಕೊಂಚ ಕುಸಿತ ಕಾಣುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಶನಿವಾರ ಅಂತ್ಯಗೊಂಡ ಈ ಬಾರಿಯ ಮುಂಗಾರು ಋತುವಿನಲ್ಲಿ ಹೆಚ್ಚುಕಮ್ಮಿ ರಾಜ್ಯ ನಿರೀಕ್ಷಿಸಿದಷ್ಟು ಮಳೆ ಬಂದಿದೆ. ಒಟ್ಟು 4 ತಿಂಗಳ ಮುಂಗಾರಿನಲ್ಲಿ ರಾಜ್ಯ ನಿರೀಕ್ಷಿಸಿದ್ದ 826 ಮಿ.ಮೀ. ಮಳೆಗೆ 750 ಮಿ.ಮೀ. ಸುರಿದಿದೆ. ಆದರೆ, ಮಳೆ ಪ್ರಮಾಣ ಸಮಾನವಾಗಿಲ್ಲದ ಕಾರಣ 10ರಿಂದ 15 ತಾಲೂಕುಗಳಲ್ಲಿ ಕೊಂಚ ಕಡಿಮೆಯಾಗಿದ್ದು, ಇನ್ನೂ ಚುರುಕಾಗಿರುವ ಮುಂಗಾರು ಮಾರುತ ಸುರಿಸಬಹುದಾದ ಮಳೆಯಿಂದ ಕೊರತೆ ನಿವಾರಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದಲ್ಲಿ ಮುಂಗಾರಿಗೆ ಸಂಬಂಧಿಸಿದಂತೆ ಬರ ತಲೆದೋರುವುದಿಲ್ಲ. ಯಾವುದೇ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸುವ ಅಗತ್ಯವೂ ಕಾಣುತ್ತಿಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ 2011ರಲ್ಲಿ ಬರ ಘೋಷಣೆ ಆಗಿತ್ತು. ಅನಂತರ ಸರಣಿ ಎನ್ನುವಂತೆ ಪ್ರತಿವರ್ಷ ೧೫೦ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಎಂದು ಘೋಷಿಸುತ್ತಾ ಬರಲಾಯಿತು. ಹೀಗಾಗಿ ಸತತ 6 ವರ್ಷಗಳಿಂದಲೂ ರಾಜ್ಯ ಬರದಿಂದ ಬೆಂದಿದೆ.
ಕಳೆದ ವರ್ಷವೂ 160ಕ್ಕೂ ಹೆಚ್ಚು ತಾಲೂಕಗಳನ್ನು ಬರಪೀಡಿತ ಎಂದು ಗುರುತಿಸಿ ಪರಿಹಾರ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ಈ ಬಾರಿ ಅಂಥ ಪ್ರಮೇಯ ಬರುವುದಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಕೈ ಹಿಡಿದ ಹೆಚ್ಚುವರಿ ಮಳೆ:
ಮುಂಗಾರು ಆರಂ‘ದ ಜೂನ್ ತಿಂಗಳಿನಲ್ಲಿ ಚದುರಿದಂತೆ ಮಳೆ ಸುರಿದರೂ ಮಳೆ ಕೊರತೆಯಾಗಿದ್ದು ಬರೀ ಶೇ.೫ರಷ್ಟು ಮಾತ್ರ. ದಕ್ಷಿಣ ಒಳನಾಡಿನಲ್ಲಿ ಶೇ.37ರವರೆಗೂ ಕೊರತೆ ಉಂಟಾಗಿತ್ತಾದರೂ ಉತ್ತರ ಒಳನಾಡಿನಲ್ಲಿ ಶೇ.13ರಷ್ಟು ಮಾತ್ರ ಕಡಿಮೆಯಾಗಿತ್ತು. ಆದರೆ ಮಲೆನಾಡು, ಕರಾವಳಿಯಲ್ಲಿ ಉತ್ತಮ ಮಳೆಯಾಗಿ ಒಟ್ಟಾರೆ ಮಳೆ ಪ್ರಮಾಣ ಹೆಚ್ಚಾಗುವಂತಾಯಿತು. ಹೀಗಾಗಿ ಆರಂ‘ದಲ್ಲಿ ಮುಂಗಾರು ಶೇ.೫ರಷ್ಟು ಮಾತ್ರ ಕೊರತೆ ಆಗಿತ್ತು. ಆದರೆ ನಂತರ ಜುಲೈ ಮುಂಗಾರು ಸಂಪೂರ್ಣ ಕೈಕೊಟ್ಟಿತು. ಆಗ ರಾಜ್ಯಾದ್ಯಂತ ಶೇ.98ರವರೆಗೂ ಕೊರತೆಯಾಗಿ ಈ ಬಾರಿಯೂ ಮುಂಗಾರು ಕೈಕೊಟ್ಟಂತೆಯೇ ಸರಿ ಎನ್ನುವಂತಾಗಿತ್ತು. ಆದರೆ, ಆಗಸ್ಟ್'ನಲ್ಲಿ ಎಲ್ಲೆಡೆ ಉತ್ತಮ ಮಳೆಯಾಗಿ ಪರಿಸ್ಥಿತಿ ಸುಧಾರಿಸಿತು. ರಾಜ್ಯದ 3 ತಾಲೂಕುಗಳನ್ನು ಹೊರತುಪಡಿಸಿದರೆ ಎಲ್ಲೆಡೆ ಉತ್ತಮ ಮಳೆಯಾಗಿತ್ತು. ಹೀಗಾಗಿ ಆ ತಿಂಗಳ ಮಳೆ ಕೊರತೆ ಕೇವಲ ಶೇ.5ಷ್ಟು ಮಾತ್ರ.
ಅಚ್ಚರಿ ಎಂದರೆ ಸೆಪ್ಟೆಂಬರ್'ನಲ್ಲಿ ಅತ್ಯಧಿಕ ಮಳೆಯಾಗಿ, ಹಿಂದಿನ ಕೊರತೆಯನ್ನೆಲ್ಲಾ ನೀಗಿಸಿತು. ಅಂದರೆ ತಿಂಗಳ ಸರಾಸರಿ ಮಳೆಗಿಂತ ಶೇ.34ರಷ್ಟು ಹೆಚ್ಚುವರಿ ಮಳೆಯಾಗಿ ಪರಿಸ್ಥಿತಿ ಬಹುತೇಕ ಸುಧಾರಿಸುವಂತಾಯಿತು. ಇದರೊಂದಿಗೆ ರಾಜ್ಯಾದ್ಯಂತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿಸಲಾಗಿದ್ದ 825 ಮಿ. ಮೀ. ಮಳೆಗೆ 750 ಮಿ.ಮೀ. ಮಳೆ ಸುರಿದಿದ್ದು, ಒಟ್ಟಾರೆ ಶೇ.8ರಷ್ಟು ಮಾತ್ರ ಮಳೆ ಕಡಿಮೆ ಆಗಿದೆ. ಇದರಿಂದಾಗಿ ರಾಜ್ಯ ಈ ಬಾರಿ ಬರದಿಂದ ಬಚಾವ್ ಆದಂತಾಗಿದೆ.
- ಶಿವಕುಮಾರ್ ಬೆಳ್ಳಿತಟ್ಟೆ, ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.