ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ ಅರಮನೆ ನಗರಿ

By Suvarna Web DeskFirst Published Nov 22, 2017, 10:59 AM IST
Highlights

ಸಾಂಸ್ಕೃತಿಕ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನ.24 ರಿಂದ 26 ರವರೆಗೆ ನಡೆಯುವ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು ಅಂತಿಮ ಹಂತ ತಲುಪಿದೆ.

ಮೈಸೂರು (ನ.22): ಸಾಂಸ್ಕೃತಿಕ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನ.24 ರಿಂದ 26 ರವರೆಗೆ ನಡೆಯುವ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು ಅಂತಿಮ ಹಂತ ತಲುಪಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ವಿವರಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ, ನ.24 ರಂದು ಬೆಳಗ್ಗೆ 8.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಲಿದೆ. ಬೆಳಗ್ಗೆ 9 ಕ್ಕೆ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲರ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 11 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಮ್ಮೇಳನ ಉದ್ಘಾಟನೆಯಾಗಲಿದೆ. ಬಳಿಕ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಂದ ಸಮ್ಮೇಳನಾಧ್ಯಕ್ಷ ಪ್ರೊ. ಚಂಪಾ ಅವರಿಗೆ ಧ್ವಜ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ.

ನ.26 ರ ಸಂಜೆ 4.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಸಮಾರೋಪ ಭಾಷಣ ಮಾಡುವರು. ಕೇಂದ್ರ ಸಚಿವ ಅನಂತಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಅಧ್ಯಕ್ಷತೆ ವಹಿಸುವರು. 1 ನೇ ಸಮಾನಾಂತರ ವೇದಿಕೆಯನ್ನು ಮಹಾರಾಜ ಕಾಲೇಜು ಶತಮಾನೋತ್ಸವ ಭವನ ಹಾಗೂ 2 ನೇ ಸಮಾನಾಂತರ ವೇದಿಕೆಯನ್ನು ಕಲಾಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ.  ಭಾಗವಹಿಸುವವರಿಗಾಗಿ 3 ಕಡೆ ಭೋಜನ ವ್ಯವಸ್ಥೆ ಮಾಡಲಾಗಿದೆ.

ದರ್ಬಾರ್ ಹಾಲ್ ವೇದಿಕೆ: ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಮಂಟಪದಲ್ಲಿ ನಿರ್ಮಿಸುತ್ತಿರುವ ಕುವೆಂಪು ವೇದಿಕೆಯನ್ನು ಮೈಸೂರು ಅರಮನೆಯ ದರ್ಬಾರ್ ಹಾಲ್ ರೂಪದಲ್ಲಿ ನಿರ್ಮಿಸಲಾಗಿದೆ. ಪ್ರಮುಖ ವೃತ್ತಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ 8 ಸಾಹಿತಿಗಳ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷ ಪ್ರೊ.ಚಂಪಾ ಭಾವಚಿತ್ರ ಅಳವಡಿಸಲಾಗಿದೆ.

click me!