
ಮೈಸೂರು: ತಾನು ಪೇದೆ ಅಂತ ಐಡಿ ಸೃಷ್ಟಿಸಿ, ಪೊಲೀಸ್ ಡ್ರೆಸ್'ನಲ್ಲಿ ಫೋಟೋ ತೆಗೆಸಿಕೊಂಡು ಯುವತಿಗೆ ನಂಬಿಸಿ ಮದುವೆಯಾದ ನಕಲಿ ಪೊಲೀಸಪ್ಪನ ಮತ್ತೊಂದು ಬಣ್ಣ ಬಯಲಾಗಿದೆ. ಊರು ತುಂಬ ಕೋಟ್ಯಂತರ ಸಾಲ ಮಾಡಿ, ತಾನು ಬಿಗ್'ಬಾಸ್ ಸೀಸನ್ 5 ಗೆ ಹೋಗಲು ರೆಡಿಯಾಗಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ. "ನನ್ನ ಹೆಸರು ಮೂರು ಕೋಟಿ ಮೂರ್ತಿ. ವಿಜಯಮಲ್ಯ ದೊಡ್ಡ ಬಿಸ್ ನೆಸ್ ಮ್ಯಾನ್, ಅವರ ಸಾಲ ಮಾಡಿ ದೇಶ ಬಿಟ್ಟು ಹೋದರು. ನಾನು ಸಾಲ ಮಾಡಿ ಊರೂರು ಬಿಟ್ಟು ಬಂದಿದ್ದೇನೆ" ಎಂದು ವಿಡಿಯೋ ಮಾಡಿದ್ದಾನೆ. ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಸೀಸನ್ 5ಗೆ ಹೋಗಲು ನಾಲ್ಕು ನಿಮಿಷದ ವಿಡಿಯೋವೊಂದನ್ನು ತಯಾರಿಸಿ ಸ್ನೇಹಿತರಿಗೆ ಕಳುಹಿಸಿದ್ದು, ಆ ವಿಡಿಯೋ ಈಗ ವೈರಲ್ ಆಗಿದೆ. ಜನರು ಮೂರು ಕೋಟಿ ಮೂರ್ತಿ ಸಾಲ ಮಾಡಿದ್ದಾನೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡ ಈತ, ನಾನು ಮೂರ್ತಿ ಹೆಸರಿನ ಪಕ್ಕ ಮೂರು ಕೋಟಿ ಮೂರ್ತಿ ಎಂದು ಹೆಸರಿಟ್ಟುಕೊಂಡಿದ್ದೇನೆ ಎಂದು ತನ್ನ ಹೆಸರಿನ ಅಸಲಿತನವನ್ನ ಬಿಚ್ಚಿಟ್ಟಿದ್ದಾನೆ.
ಸುವರ್ಣನ್ಯೂಸ್ ಜೊತೆ ಮಾತನಾಡಿದ ಈತನ ಪತ್ನಿ ದೇವಿಕಾ ಈತನ ಇನ್ನಷ್ಟು ಅಸಲಿತನವನ್ನು ಬಹಿರಂಗಪಡಿಸಿದ್ದಾರೆ. ಶಿವಮೂರ್ತಿ ಈತನ ಅಸಲಿ ಹೆಸರು. ನಕಲಿ ಪೊಲೀಸನಾದ ಈತನ ಮದುವೆಗೆ ನಿಜವಾದ ಪೊಲೀಸರೇ ಹಾಜರಿದ್ದರೆಂಬ ಅಚ್ಚರಿಯ ವಿಷಯವನ್ನು ದೇವಿಕಾ ತಿಳಿಸಿದ್ದಾರೆ. ಈತ ನಕಲಿ ಪೊಲೀಸ್ ಎಂಬ ಅನುಮಾನವೇ ಸುಳಿಯದಂತೆ ಈತನ ನಡೆದುಕೊಂಡಿದ್ದಾನೆ. ಪ್ರತೀ ದಿನವೂ ಈತ ಪೊಲೀಸ್ ಡ್ರೆಸ್ ಮತ್ತು ಐಡಿ ಕಾರ್ಡ್'ವೊಂದಿಗೆ ಆಚೆ ಹೋಗುತ್ತಿರುತ್ತಿದ್ದ ಎಂದು ದೇವಿಕಾ ಹೇಳಿದ್ದಾರೆ.
2016ರಲ್ಲಿ ಮದುವೆಯಾಗಿ ಒಂದು ತಿಂಗಳಷ್ಟೇ ತನ್ನನ್ನು ಈತ ಚೆನ್ನಾಗಿ ನೋಡಿಕೊಂಡಿದ್ದು. ಅಲ್ಲಿಂದ ಈತ ಮತ್ತು ಈತನ ಅಜ್ಜಿ ಇಬ್ಬರೂ ತನಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು ಎಂದು ಈತನ ಪತ್ನಿ ದೂರಿದ್ದಾರೆ. ಅಂದಹಾಗೆ, ಮದುವೆಗೆ ಈತ 250 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ ವರದಕ್ಷಿಣೆ ಪಡೆದುಕೊಂಡಿದ್ದಾನೆ. 10 ಲಕ್ಷ ಖರ್ಚು ಮಾಡಿ ದೊಡ್ಡ ಲೆವೆಲ್'ನಲ್ಲಿ ಮದುವೆ ಮಾಡಿಸಿಕೊಂಡಿದ್ದಾನೆ.
ಬಿಗ್'ಬಾಸ್'ಗೆ ಎಂಟ್ರಿ ಪಡೆಯಲು ಈತ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿ ಹಬ್ಬಿ ಕೊನೆಗೆ ಈತನ ಪತ್ನಿ ದೇವಿಕಾಗೆ ಸಿಕ್ಕಿದೆ. ಅಸಲಿ ಪೊಲೀಸಪ್ಪ ಎಂದು ತಿಳಿದುಕೊಂಡಿದ್ದ ದೇವಿಕಾಗೆ ಈ ವಿಡಿಯೋ ನೋಡಿ ಶಾಕ್ ಆಗಿದೆ. ಈ ಹುಡುಗಿ ಕೊಟ್ಟ ದೂರಿನ ಮೇರೆಗೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.