
ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಕೇವಲ ಬ್ರಾಂಚ್ ಆಫೀಸ್ ಅಷ್ಟೆ. ಇದಕ್ಕೆಲ್ಲಾ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೆಡ್ ಆಫೀಸ್. ಮೊದಲು ಅವರನ್ನು ತನಿಖೆಗೊಳಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣ ವಿಚಾರದಲ್ಲಿ ಕಾಯಿಲೆಗೆ ಮದ್ದು ಕಂಡುಹಿಡಿದರೆ ಸಾಕಾಗಲ್ಲ. ಕಾಯಿಲೆಗೆ ಕಾರಣವಾದವರನ್ನು ಮೊದಲು ಪತ್ತೆ ಮಾಡಬೇಕು. ಮೊದಲು ಪ್ರಮೋದ್ ಮುತಾಲಿಕ್ ಅವರನ್ನು ತನಿಖೆಗೆ ಒಳಪಡಿಸಬೇಕು. ಅವರು ದೇವರ ಬಳಿಗೆ ಹೋಗುವ ವಯಸ್ಸಿನಲ್ಲಿ ಇದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ, ಜನರ ಜೀವನದಲ್ಲಿ ಹುಳಿ ಹಿಂಡಿರುವ ಅವರು ಯಾವ ಮುಖ ಇಟ್ಟುಕೊಂಡು ದೇವರ ಬಳಿಗೆ ಹೋಗುತ್ತಾರೆ? ಇನ್ನಾದರೂ ಪಶ್ಚಾತ್ತಾಪ ಪಟ್ಟು ಸನ್ಮಾರ್ಗದಲ್ಲಿ ಬದುಕಲಿ ಎಂದು ವ್ಯಂಗ್ಯವಾಡಿದರು.
ದೇವರ ಬಳಿಗೆ ಹೋಗಲು ಟಿಕೆಟ್ ಪಡೆದು ಏರ್‌ಪೋರ್ಟ್‌ನಲ್ಲಿರುವ ಮುತಾಲಿಕ್ ಬಗ್ಗೆ ನನಗೆ ತುಂಬಾ ನೋವಿದೆ. ಪರಶುರಾಮ್ ವಾಗ್ಮೋರೆ ಅವರಂತಹ ಯುವಕರ ಹಿಂದಿನ ಶಕ್ತಿಯನ್ನು ಪತ್ತೆಹಚ್ಚಬೇಕು. ಯುವಕ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇಂತಹ ಯುವಕರ ಹಿಂದೆ ನಿಂತು ತಲೆ ತಿರುಗಿಸುತ್ತಿರುವ ದುಷ್ಟಶಕ್ತಿಗಳನ್ನು ಪತ್ತೆ ಮಾಡಿದಾಗ ಮಾತ್ರ ಶಾಶ್ವತ ಪರಿಹಾರ ಕಂಡುಹಿಡಿಯಲು ಸಾಧ್ಯ ಎಂದರು.
ಬಾಲಿಶತನದ ಹೇಳಿಕೆ, ಮಾನನಷ್ಟ ಕೇಸ್ ಹಾಕ್ತೀನಿ: ಮುತಾಲಿಕ್
ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ತಮ್ಮ ವಿರುದ್ಧ ನೀಡಿರುವ ಹೇಳಿಕೆ ವಾಪಸ್ ಪಡೆಯದಿದ್ದರೆ ಮಾನಹಾನಿ ಪ್ರಕರಣ ದಾಖಲಿಸುವುದಾಗಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧವಿದೆ ಎಂಬ ಅರ್ಥದಲ್ಲಿ ಸಿ.ಎಂ. ಇಬ್ರಾಹಿಂ ನೀಡಿರುವ ಹೇಳಿಕೆ ಬಾಲಿಶತನದಿಂದ ಕೂಡಿದೆ. ಮುತಾಲಿಕ್ ಅವರನ್ನು ಬಂಧಿಸಿ ಎಂದು ಹೇಳಲು ಅವರ ಬಳಿಯಲ್ಲಿ ದಾಖಲೆ ಇದೆಯೇ? ಇದ್ದರೆ ಕೂಡಲೇ ಎಸ್‌ಐಟಿಗೆ ಕೊಡಲಿ. ಅದನ್ನು ಬಿಟ್ಟು ಹೀಗೆ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ನಾನು ಖಂಡಿಸುತ್ತೇನೆ. ಅವರಂತೆ ನಾನು ಕೂಡ ಸಿ.ಎಂ. ಇಬ್ರಾಹಿಂ ಐಎಸ್‌ಐ ಏಜೆಂಟ್, ಭಯೋತ್ಪಾದಕರ ಜತೆಗೆ ಸಂಪರ್ಕ ಹೊಂದಿದ್ದಾರೆ ಎದು ಹೇಳಿದರೆ ಸರಿಯೇ ಎಂದು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.