ಹೆಂಡತಿ ಹೇಳಿದಂತೆ ಕೇಳಿದರೆ ಸಮಸ್ಯೆ ಇತ್ಯರ್ಥ : ಹೈಕೋರ್ಟ್

By Suvarna Web DeskFirst Published Feb 27, 2018, 11:19 AM IST
Highlights

‘ಪತ್ನಿಯನ್ನು ಫಾಲೋ ಮಾಡಿದರೆ ಜೀವನದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ’. –ಡೈವೋರ್ಸ್ ಕೋರಿದ ವ್ಯಕ್ತಿಯೊಬ್ಬನಿಗೆ ಹೈಕೋರ್ಟ್ ಜಡ್ಜ್ ಎಚ್ .ಜಿ. ರಮೇಶ್ ಅವರು ನೀಡಿದ ಸಲಹೆ ಇದು. 

ಬೆಂಗಳೂರು : ‘ಪತ್ನಿಯನ್ನು ಫಾಲೋ ಮಾಡಿದರೆ ಜೀವನದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ’. –ಡೈವೋರ್ಸ್ ಕೋರಿದ ವ್ಯಕ್ತಿಯೊಬ್ಬನಿಗೆ ಹೈಕೋರ್ಟ್ ಜಡ್ಜ್ ಎಚ್ .ಜಿ. ರಮೇಶ್ ಅವರು ನೀಡಿದ ಸಲಹೆ ಇದು. ವಿವಾಹ ವಿಚ್ಛೇದನ ಕೋರಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ. ರಮೇಶ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಮದುವೆಯಾದ ಮೇಲೆ ಹಲವು ಸಮಸ್ಯೆಗಳು ಬರುತ್ತವೆ. ಅವುಗಳನ್ನು ಮೀರಿ ನಿಲ್ಲಬೇಕು. ಅದುವೇ ಜೀವನ. ಹೆಂಡತಿ ಹೇಳಿದಂತೆ ನಡೆದುಕೊಂಡರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ.

ಯಾರು ಹೆಂಡತಿ ನುಡಿದಂತೆ ನಡೆಯುತ್ತಾನೋ, ಅವನು ಯಶಸ್ವಿಯಾಗಿ ಜೀವನ ನಡೆಸುತ್ತಾನೆ. ಸಣ್ಣಪುಟ್ಟ ತಪ್ಪುಗಳನ್ನೇ ದೊಡ್ಡದು ಮಾಡಿಕೊಳ್ಳಬಾರದು. ಯಾವುದೇ ಸಮಸ್ಯೆಯಿದ್ದರೂ ಮಾತುಕತೆ ನಡೆಸಿ ಇತ್ಯರ್ಥ ಮಾಡಿಕೊಳ್ಳಬೇಕು’ ಎಂದು ಪತಿಗೆ ಬುದ್ಧಿವಾದ ಹೇಳಿತು.

ಇದಕ್ಕೂ ಮುನ್ನ ಪತಿರಾಯ ಮಾತನಾಡಿ, ಸ್ವಾಮಿ ನನ್ನ ಹೆಂಡತಿ ಪ್ರತಿ ದಿನ ನನ್ನೊಂದಿಗೆ ಜಗಳ ವಾಡುತ್ತಾಳೆ. ‘ಜಗಳ ಆಡಿ ಆಡಿ ನನಗೂ ಸಾಕಾಗಿದ್ದು, ಜೀವನವೇ ಹಾಳಾಗಿದೆ.  ಮನಶಾಂತಿ ಇಲ್ಲ. ಉದ್ಯೋಗವನ್ನೂ ಕಳೆದುಕೊಂಡಿದ್ದೇನೆ. ಹೆಂಡತಿ ಜೊತೆಗೆ ನಾನು ಜೀವನ ನಡೆಸಲಾಗದು. ನನಗೆ ನನ್ನ ತಾಯಿಯೇ ಮುಖ್ಯ. ವಿವಾಹ ವಿಚ್ಛೇದನ ನೀಡಬೇಕು ಎಂದು ಕೋರಿದರು.

ಈ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಮಾತುಕತೆ ನಡೆಸಿದರೆ ಎಲ್ಲವೂ ಸರಿ ಹೋಗಲಿದೆ. ಒಮ್ಮೆ ಕೋರ್ಟ್ ಆಚೆ ಹೋಗಿ ಮಾತನಾಡಿಕೊಂಡು ಬನ್ನಿ ಎಂದು ತಿಳಿಸಿ ಕೋರ್ಟ್ ಹಾಲ್‌ನಿಂದ ಹೊರಗೆ ಕಳುಹಿಸಿದರು.  ಕೋರ್ಟ್ ಹಾಲ್‌ನಿಂದ ಹೊರ ಹೋಗಿ ಕೆಲ ಕಾಲ ಮಾತುಕತಡೆ ನಡೆಸಿ ವಾಪಸಾದ ದಂಪತಿಯು ಸಹಮತಕ್ಕೆ ಬರಲಿಲ್ಲ. ಆದರೂ ನ್ಯಾಯಮೂರ್ತಿಗಳು ದಂಪತಿ ಯನ್ನು ಒಂದುಗೂಡಿಸುವ ಪ್ರಯತ್ನ ಮುಂದು ವರಿಸಿ, ಮಾತುಕತೆಯಿಂದ ಬಗೆಹರಿಯದ ಯಾವುದೇ ಸಮಸ್ಯೆ ಇಲ್ಲ. ಈಗಲೇ ಎಲ್ಲಾ ಮುಗಿಯಿತು ಎಂದು ತಿಳಿಯಬೇಡಿ. ಇನ್ನೂ ಕಾಲ ಮಿಂಚಿಲ್ಲ. ಇಬ್ಬರೂ ಮತ್ತೊಮ್ಮೆ ಕೂತು ಶಾಂತವಾಗಿ ಮಾತುಕತೆ ನಡೆಸಿ ಎಂದು ತಿಳಿ ಹೇಳಿದರು. ಅಲ್ಲದೆ, ಹೆಂಡತಿಯನ್ನು ಫಾಲೋ ಮಾಡಿದರೆ ನಿಮಗೆ ಸಮಸ್ಯೆಯೇ ಇರೋದಿಲ್ಲ ಎಂದು ಹೇಳಿ ವಿಚಾರಣೆಯನ್ನು ಏ. 2ಕ್ಕೆ ಮುಂದೂಡಿದರು.

click me!