ಮಡಿಕೇರಿಯಲ್ಲಿ ಸಂಭವಿಸಿದ್ದ ಕುಟ್ಟಪ್ಪನ ಹತ್ಯೆಯಲ್ಲಿ ರುದ್ರೇಶ್ ಹಂತಕರ ಕೈವಾಡ?

By Suvarna Web DeskFirst Published Oct 31, 2016, 10:37 AM IST
Highlights

ಎನ್'ಐಎ ಅಧಿಕಾರಿಗಳು ನಡೆಸುತ್ತಿರುವ ತನಿಖೆಯಲ್ಲಿ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕುಟ್ಟಪ್ಪನ ಹತ್ಯೆಗೆ ಉದ್ದೇಶಪೂರ್ವಕವಾಗಿ ಯೋಜಿಸಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ.

ಬೆಂಗಳೂರು(ಅ. 31): ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಾಲ್ವರು ಆರೋಪಿಗಳ ಪೈಕಿ ಮೂವರು ವ್ಯಕ್ತಿಗಳು ಮಡಿಕೇರಿ ಗಲಭೆಯಲ್ಲಿ ನೇರ ಪಾತ್ರ ವಹಿಸಿದ್ದರೆಂಬ ಮಾಹಿತಿ ಹೊರಬಿದ್ದಿದೆ. ದಿಲ್ಲಿಯಿಂದ ಬಂದಿರುವ ಎನ್'ಐಎ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಆರೋಪಿಗಳು ಈ ಮಾಹಿತಿ ನೀಡಿದ್ದಾರೆನ್ನಲಾಗಿದೆ. ಮಡಿಕೇರಿಯಲ್ಲಿ ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆ ಕೋಮುಗಲಭೆಗಳಾಗಿದ್ದವು. ಆ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಮುಖಂಡ ಕುಟ್ಟಪ್ಪನ ಹತ್ಯೆಯಾಗಿತ್ತು. ಅದು ಗಲಭೆಯಲ್ಲಿ ಆದ ಸಾವು ಎಂಬುದು ಸರಕಾರದ ವಾದವಾಗಿದೆ. ಆದರೆ, ಎನ್'ಐಎ ಅಧಿಕಾರಿಗಳು ನಡೆಸುತ್ತಿರುವ ತನಿಖೆಯಲ್ಲಿ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕುಟ್ಟಪ್ಪನ ಹತ್ಯೆಗೆ ಉದ್ದೇಶಪೂರ್ವಕವಾಗಿ ಯೋಜಿಸಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಕೇರಳದ ಪ್ರಬಲ ಸಮುದಾಯದವರನ್ನು ಕರೆಸಿಕೊಂಡು ಮಡಿಕೇರಿಯಲ್ಲಿ ಗಲಭೆಗೆ ಬಳಸಿಕೊಳ್ಳಲಾಗಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ.

ರುದ್ರೇಶ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆನ್ನಲಾದ ವಜೀಬ್, ಇಕ್ರಾಮ್ ಪಾಷಾ, ವಾಸೀಮ್ ಮತ್ತು ಮಝರ್ ಅವರು ಎಸ್'ಡಿಪಿಐ, ಪಿಎಫ್'ಡಿ ಸಂಘಟನೆಗೆ ಸೇರಿದವರಾಗಿದ್ದು, ಎನ್'ಐಎ ಅಧಿಕಾರಿಗಳು ಇನ್ನಷ್ಟು ದಿನ ಅವರ ವಿಚಾರಣೆ ಮುಂದುವರಿಸಲಿದ್ದಾರೆ. ಇವರ ಪೈಕಿ ವಜೀಬ್, ವಾಸೀ ಮತ್ತು ಮಜರ್ ಅವರು ಮಡಿಕೇರಿ ಗಲಭೆಯಲ್ಲಿ ಪಾಲ್ಗೊಂಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದೇ ವೇಳೆ, ಮೈಸೂರಿನಲ್ಲಿ ಸಂಭವಿಸಿದ ರಾಜು ಅವರ ಹತ್ಯೆಯಲ್ಲಿ ತಾವಾಗಲೀ ತಮ್ಮ ಸಂಘಟನೆಯಾಗಲೀ ಪಾತ್ರವಿಲ್ಲ ಎಂದು ಈ ನಾಲ್ವರು ಹೇಳಿದ್ದಾರೆಂದು ಮೂಲಗಳು ತಿಳಿಸುತ್ತಿವೆ. ರಾಜು ಹತ್ಯೆಯಲ್ಲಿ ಬೇರೆ ಸಂಘಟನೆಯ ಕೈವಾಡ ಇರಬಹುದೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

click me!