ಐಪಿಎಲ್'ನ ಮೊದಲ ಸೂಪರ್ ಓವರ್'ನಲ್ಲಿ ಮುಂಬೈ'ಗೆ ಜಯ

By Suvarna Web DeskFirst Published Apr 29, 2017, 1:18 PM IST
Highlights

ಮುಂಬೈ 1 ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿದರೆ, ಜಸ್‌ಪ್ರೀತ್ ಬೂಮ್ರಾ ದಾಳಿಗೆ ಉತ್ತರಿಸಲಾಗದೆ ಗುಜರಾತ್ ಕೇವಲ 6 ರನ್ ಗಳಿಸಿ ಸೋಲೊಪ್ಪಿಕೊಂಡಿತು

ರಾಜ್‌ಕೋಟ್(ಏ.30): 10ನೇ ಆವೃತ್ತಿಯ ಐಪಿಎಲ್ ಶನಿವಾರ ಮೊದಲ ಸೂಪರ್ ಓವರ್‌ಗೆ ಸಾಕ್ಷಿಯಾಯಿತು. ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಟೈ ಆದ ಕಾರಣ ಪಂದ್ಯದ ಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಮುಂಬೈ 1 ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿದರೆ, ಜಸ್‌ಪ್ರೀತ್ ಬೂಮ್ರಾ ದಾಳಿಗೆ ಉತ್ತರಿಸಲಾಗದೆ ಗುಜರಾತ್ ಕೇವಲ 6 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಮುಂಬೈ 20 ಓವರ್‌ಗಳಲ್ಲಿ 153 ರನ್ ಗಳಿಸಿ ಆಲೌಟ್ ಆಯಿತು. ಸಾಧಾರಣ ಗುರಿ ಬೆನ್ನತ್ತಿದ ಮುಂಬೈಗೆ ಪಾರ್ಥೀವ್ ಪಟೇಲ್ (70: 44 ಎಸೆತ, 9 ಬೌಂಡರಿ, 1 ಸಿಕ್ಸರ್) ಆಟ ಸುಲಭ ಗೆಲುವಿನ ಸೂಚನೆ ನೀಡಿತ್ತು. ಆದರೆ ಮಧ್ಯಮ ಕ್ರಮಾಂಕ ದಿಢೀರ್ ಕುಸಿದ ಕಾರಣ, ಕೈಯಲ್ಲಿದ್ದ ಪಂದ್ಯವನ್ನು ಮುಂಬೈ ತನ್ನದಾಗಿಸಿಕೊಳ್ಳಲು ವಿಲವಾಯಿತು. ಕೊನೆ ಓವರ್‌ನಲ್ಲಿ ಗೆಲುವಿಗೆ 12 ರನ್‌ಗಳ ಅವಶ್ಯಕತೆ ಇತ್ತು. ಕೃನಾಲ್ ಪಾಂಡ್ಯ, ಇರ್ಫಾನ್  ಪಠಾಣ್‌ರ ಮೊದಲ ಎಸೆತವನ್ನ ಸಿಕ್ಸರ್‌ಗಟ್ಟಿದರು. ಆದರೆ 2ನೇ ಎಸೆತದಲ್ಲಿ ಒಂಟಿ ರನ್ ಪಡೆದು ನಾನ್-ಸ್ಟ್ರೈಕರ್ ಬದಿಗೆ ತೆರಳಿದರು. 3ನೇ ಎಸೆತದಲ್ಲಿ ಜಡೇಜಾ ನೇರವಾಗಿ ಚೆಂಡನ್ನು ಸ್ಟಂಪ್ಸ್‌ಗೆಸೆದ ಕಾರಣ ಬೂಮ್ರಾ ಔಟಾದರು. 4ನೇ ಎಸೆತದಲ್ಲಿ 2 ಹಾಗೂ 5ನೇ ಎಸೆತದಲ್ಲಿ ಕೃನಾಲ್ ಒಂದು ರನ್ ಪಡೆದರು. ಕೊನೆ ಎಸೆತದಲ್ಲಿ ಜಡೇಜಾ ಮತ್ತೊಮ್ಮೆ ತಮ್ಮ ಅದ್ಭುತ ಕ್ಷೇತ್ರರಕ್ಷಣೆ ಮೂಲಕ ಕೃನಾಲ್‌ರನ್ನು ರನೌಟ್ ಮಾಡಿ ಸೂಪರ್ ಓವರ್‌ಗೆ ಕಾರಣರಾದರು.

ಗುಜರಾತ್ ಲಯನ್ಸ್: 153/9 (20/20 )
ಮುಂಬೈ ಇಂಡಿಯನ್ಸ್: 153/10 (20/20)
ಪಂದ್ಯ ಶ್ರೇಷ್ಠ: ಕೃನಾಲ್ ಪಾಂಡ್ಯ
click me!