ಅಪ್ಪನಿಗೇ ಮೋಸ ಮಾಡಿದವನು ಸಮಾಜಕ್ಕೆ ಒಳ್ಳೇದು ಮಾಡ್ತಾನಾ? ಮುಲಾಯಂ ವ್ಯಗ್ರ

By Suvarna Web DeskFirst Published Apr 1, 2017, 3:06 PM IST
Highlights

"ಅಖಿಲೇಶ್ ಯಾದವ್'ನನ್ನು ನಾನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ರಾಜಕೀಯ ಜೀವನ ಇನ್ನೂ ಇರುವ ಯಾವುದೇ ತಂದೆಯೂ ನನ್ನಂತೆ ತ್ಯಾಗ ಮಾಡಿಲ್ಲ. ಇದಕ್ಕೆ ಬದಲಾಗಿ ಅಖಿಲೇಶ್ ಕೊಟ್ಟಿದ್ದೇನು?"

ನವದೆಹಲಿ(ಏ. 01): ಉತ್ತರಪ್ರದೇಶ ಚುನಾವಣೆಗೂ ಮುನ್ನವೇ ರಣರಂಗವಾಗಿದ್ದ ಮುಲಾಯಂ ಸಿಂಗ್ ಯಾದವ್ ಕುಟುಂಬದ ಯಾದವೀ ಕಲಹವು ಚುನಾವಣೆ ಬಳಿಕ ಮುಂದುವರಿದಿದೆ. ಚುನಾವಣೆ ನಂತರ ಮುಲಾಯಂ ಸಿಂಗ್ ಮೊದಲ ಬಾರಿಗೆ ತಮ್ಮ ಪುತ್ರ ಅಖಿಲೇಶ್ ಯಾದವ್ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದಾರೆ. ತನ್ನ ತಂದೆಗೆ ಮೋಸ ಮಾಡಿದವನು ಯಾರಿಗೆ ಬೇಕಾದರೂ ಮೋಸ ಮಾಡಿಯಾನು ಎಂದು ಮಾಜಿ ಸಿಎಂ ಅಖಿಲೇಶ್'ಗೆ ಮುಲಾಯಂ ಕುಟುಕಿದ್ದಾರೆ.

ತಮ್ಮ ಮಗನಿಂದ ಆಗಿರುವಷ್ಟ ಅವಮಾನ ನನ್ನ ಜೀವನದಲ್ಲಿ ಯಾವತ್ತೂ ಆಗಿರಲಿಲ್ಲ ಎಂದು ಮುಲಾಯಂ ದುಃಖ ತೋಡಿಕೊಂಡಿದ್ದಾರೆ. "ಅಖಿಲೇಶ್ ಯಾದವ್'ನನ್ನು ನಾನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ರಾಜಕೀಯ ಜೀವನ ಇನ್ನೂ ಇರುವ ಯಾವುದೇ ತಂದೆಯೂ ನನ್ನಂತೆ ತ್ಯಾಗ ಮಾಡಿಲ್ಲ. ಇದಕ್ಕೆ ಬದಲಾಗಿ ಅಖಿಲೇಶ್ ಕೊಟ್ಟಿದ್ದೇನು? ನನ್ನ ಇಡೀ ಜೀವಮಾನದಲ್ಲಿ ಇಂತಹ ಅವಮಾನ ಹೊಂದಿರಲಿಲ್ಲ" ಎಂದು ಮಾಜಿ ಉ.ಪ್ರ. ಸಿಎಂ ಕೂಡ ಆಗಿರುವ ಮುಲಾಯಂ ಖೇದ ವ್ಯಕ್ತಪಡಿಸಿದ್ದಾರೆ.

ಏನಿದು ಯಾದವೀ ಕಲಹ?
ಈಗ್ಗೆ ಕೆಲವಾರು ವರ್ಷಗಳಿಂದ ಮುಲಾಯಂ ಸಿಂಗ್ ಕುಟುಂಬದೊಳಗೆ ಬಿರುಕು ಮೂಡಿದೆ. ಮುಲಾಯಂ ಮತ್ತವರ ಸೋದರ ಶಿವಪಾಲ್ ಯಾದವ್ ಅವರದ್ದು ಒಂದು ಗುಂಪಾದರೆ; ಅಖಿಲೇಶ್ ಯಾದವ್ ಮತ್ತವರ ಚಿಕ್ಕಪ್ಪ ರಾಮ್ ಗೋಪಾಲ್ ಯಾದವ್ ಅವರದ್ದು ಮತ್ತೊಂದು ಗುಂಪು. ಇವೆರಡು ಗುಂಪುಗಳ ನಡುವಿನ ಶೀತಲ ಸಮರ ತಾರಕಕ್ಕೇರಿ ಪರಸ್ಪರ ಉಚ್ಛಾಟನೆಯ ಮಟ್ಟಕ್ಕೂ ಹೋಯಿತು.

ಮುಲಾಯಂಗೆ ಆಪ್ತರೆನಿಸಿದ ಶಿವಪಾಲ್ ಯಾದವ್ ಅವರನ್ನು ಅಖಿಲೇಶ್ ಯಾದವ್ ತಮ್ಮ ಸಂಪುಟದಿಂದ ಎರಡು ಬಾರಿ ಕಿತ್ತೊಗೆದಿದ್ದರು. ಇದು ಮುಲಾಯಂರ ಪ್ರತಿಷ್ಠೆಗೆ ಧಕ್ಕೆ ತರುವಂತಿತ್ತು. ಇದಕ್ಕೆ ಪ್ರತಿಯಾಗಿ, ಮುಲಾಯಂ ಅವರು ಡಿ.30, 2016ರಂದು ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಅಖಿಲೇಶ್ ಮತ್ತು ರಾಮ್ ಗೋಪಾಲ್ ಯಾದವ್ ಅವರನ್ನು ಪಕ್ಷದಿಂದ 6 ವರ್ಷ ಅಮಾನತುಗೊಳಿಸಿದರು. ಆದರೆ, ಒಂದೇ ದಿನದೊಳಗೆ ಮುಲಾಯಂ ತಮ್ಮ ಕ್ರಮವನ್ನು ಹಿಂತೆಗೆದುಕೊಂಡರು. ಆದರೆ, ಅಖಿಲೇಶ್ ಸುಮ್ಮನಾಗಲಿಲ್ಲ. ಜನವರಿ 1ರಂದು ನಡೆದ ಪಕ್ಷದ ರಾಷ್ಟ್ರೀಯ ಸಭೆಯಲ್ಲಿ ಮುಲಾಯಂ ಸಿಂಗ್ ಅವರನ್ನೇ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ನಿಯುಕ್ತಗೊಳಿಸಿ, ತಾವು ಆ ಸ್ಥಾನ ಪಡೆದರು. ಈ ರಾಷ್ಟ್ರೀಯ ಸಭೆಯು ಅನಧಿಕೃತವಾಗಿದ್ದು, ತಾವೇ ರಾಷ್ಟ್ರಾಧ್ಯಕ್ಷ ಎಂದು ಮುಲಾಯಂ ಮಾಡಿದ ವಾದವನ್ನು ಚುನಾವಣಾ ಆಯೋಗ ಪುರಸ್ಕರಿಸಲಿಲ್ಲ.

ಉ.ಪ್ರ. ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಧೂಳೀಪಟಗೊಂಡಿದೆ. ಭಾರತೀಯ ಜನತಾ ಪಕ್ಷ ದಾಖಲೆಯ 325 ಸ್ಥಾನಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ.

ಚುನಾವಣೆಗೆ ಮುಂಚಿನ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಯಾದವ್ ಕುಟುಂಬದ ಕಲಹದ ವಿಚಾರವನ್ನು ಪ್ರಸ್ತಾಪಿಸುತ್ತಿದ್ದುದುಂಟು. ಮುಲಾಯಂರನ್ನು ಕೊಲ್ಲಲು ಸಂಚು ರೂಪಿಸಿದ ಪಕ್ಷದ ಜೊತೆಗೆ ಅವರ ಪುತ್ರ ಅಖಿಲೇಶ್ ಕೈಜೋಡಿಸಿದ್ದಾರೆಂದು ತಮ್ಮ ಭಾಷಣಗಳಲ್ಲಿ ಮೋದಿ ಹೇಳುತ್ತಿದ್ದುಂಟು. ಅಪ್ಪನಿಗೆ ಗೌರವ ಕೊಡದವರು ಜನರಿಂದ ಹೇಗೆ ಗೌರವ ಪಡೆಯುತ್ತಾರೆ ಎಂದೂ ಅಖಿಲೇಶ್'ರನ್ನು ಮೋದಿ ಕುಟುಕುತ್ತಿದ್ದರು.

click me!