
ಬೆಂಗಳೂರು (ಏ.01): ಮುಖ್ಯಮಂತ್ರಿ ಆಪ್ತ ಹಾಗೂ ರಾಜಾಜಿನಗರ ವಾರ್ಡ್ ಕಾಪೋರೇಟರ್ ಕೃಷ್ಣಮೂರ್ತಿ ಗುತ್ತಿಗೆದಾರನೊಬ್ಬನಿಂದ ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಕಾಪೋರೇಟರ್ ಜೊತೆಗೆ ಇಬ್ಬರು ಇಂಜಿನೀಯರ್ಗಳನ್ನ ಅರೆಸ್ಟ್ ಮಾಡಿದ ಭ್ರಷ್ಟಚಾರ ನಿಗ್ರಹ ದಳ ಈ ತಂಡವನ್ನ ಖೆಡ್ಡಾಕ್ಕೆ ಬೀಳಿಸಲು ಒಂದು ದೊಡ್ಡ ಮಾಸ್ಟರ್ ಪ್ಲಾನೇ ಮಾಡಿತ್ತು. ಎಸಿಬಿ ಮಾಡಿದ ಆ ಪ್ಲಾನ್ ಕೇಳಿದ್ರೆ ನೀವು ನಿಜಕ್ಕೂ ಬೆಚ್ಚಿಬೀಳ್ತೀರಾ...!!!
ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ, ಪೊಲೀಸ್ರು ರಂಗೋಲಿ ಕೆಳಗೆ ನುಗ್ತಾರೆ ಅನ್ನೋ ಗಾದೆ ನಮಗೆ ಗೋತ್ತೆ ಇದೆ. ಕೆಲವೊಮ್ಮೆ ಪೊಲೀಸ್ರು ಎಷ್ಟೇ ಪ್ಲಾನ್ ಮಾಡಿದ್ರೂ, ಕಳ್ಳರು ತಪ್ಪಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ, ಕೆಲವೊಮ್ಮೆ, ಪೊಲೀಸರ ಮಾಸ್ಟರ್ ಪ್ಲಾನ್ಗಳು ಅದ್ಹೇಗೆ ಸಕ್ಸಸ್ ಆಗುತ್ತವೆ ಅನ್ನೋದಕ್ಕೆ ನಿನ್ನೆ ನಡೆದ ಎಸಿಬಿ ದಾಳಿಯೇ ಸಾಕ್ಷಿ...!
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ, ರಾಜಾಜಿನಗರ ವಾರ್ಡ್ ಕಾಪೋರೇಟರ್ ಕೃಷ್ಣಮೂರ್ತಿ ಬಂದನದ ಹಿಂದೆ ಎಸಿಬಿ ಅಧಿಕಾರಿಗಳ ದೊಡ್ಡ ಕಾರ್ಯಾಚರಣೆಯೇ ಅಡಗಿದೆ. ಹದಿನೈದು ದಿನಗಳ ಹಿಂದೆ, ಎಸಿಬಿ ಕಛೇರಿಗೆ ಬಂದ ಬಿಬಿಎಂಪಿ ಗುತ್ತಿಗೆದಾರ, ಧನುಂಜಯ್, ಐಜಿಪಿ ಶರತ್ಚಂದ್ರ ಅವರನ್ನ ಭೇಟಿ ಮಾಡಿ ಕಾಪೋರೇಟರ್ ಕೃಷ್ಣಮೂರ್ತಿ ಮತ್ತು ಇಬ್ಬರು ಎಂಜಿನೀಯರ್ಗಳು ಬಿಡುಗಡೆಯಾಗಲಿರುವ ಹಣದ ಮಂಜೂರಾತಿಗೆ ಲಂಚದ ಬೇಡಿಕೆಯಿಟ್ಟಿದ್ದಾರೆ ಎಂಬ ದೂರನ್ನ ನೀಡುತ್ತಾರೆ. ಪೊಲೀಸರು ಆಲರ್ಟ್ ಅಂಡ್ ಆಕ್ಷನ್ ಆಗೋದು ಈವಾಗಲೇ..!
ಅಧಿಕಾರಿಗಳಿಗೇ ಗೊತ್ತಿರೋಲ್ಲ...!
ದೂರು ಬಂದಿರೋದು ಸಿಎಮ್ ಆಪ್ತ ಕಾಪೋರೇಟರ್ ಮೇಲೆ. ಹಣದ ಸಮೇತ ಗುತ್ತಿಗೆದಾರ ಹಣ ನೀಡೋವಾಗ ದಾಳಿ ಮಾಡಬೇಕು. ಅದಕ್ಕೂ ಪಕ್ಕಾ ಸಾಕ್ಷಿಗಳಿರಬೇಕು. ಇಡೀ ಅಪರೇಷನ್ಗಾಗಿ ಇಪ್ಪತ್ತು ಜನರ ಒಂದು ತಂಡವನ್ನ ರೆಡಿಮಾಡುತ್ತಾರೆ. ಆ ಪೈಕಿ, ನಾಲ್ಕೈದು ಮಂದಿ ಅಧಿಕಾರಿಗಳಿಗೆ ಮಾತ್ರ, ಟ್ರಾಪ್ ಮಾಡುತ್ತಿರುವುದು ಸಿಎಮ್ ಆಪ್ತನನ್ನ ಅನ್ನೋದು ಗೊತ್ತಿರುತ್ತದೆ, ಉಳಿದ ಅಧಿಕಾರಿಗಳಿಗೆ, ನಾವೆಲ್ಲಿಗೆ ಹೋಗುತ್ತಿದ್ದೇವೆ, ಯಾರನ್ನ ಹಿಡಿಯಬೇಕು ಅನ್ನೋದ್ಯಾವುದೂ ಗೊತ್ತಿರೋದಿಲ್ಲ. ವಿಷಯ ಲೀಕ್ ಆದರೆ, ಪ್ರಭಾವಿಯಾಗಿರುವ ಆರೋಪಿ, ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿರೋದ್ರಿಂದ, ಹೆಚ್ಚಿನ ಅಧಿಕಾರಿಗಳಿಗೆ ಕಾಪೋರೇಟರ್ ನಿವಾಸ ಅನ್ನೋದು ಗೊತ್ತೆ ಇರೋಲ್ಲ.
ಸರ್ಕಾರಿ ಅಧಿಕಾರಿಗಳೇ ಸಾಕ್ಷಿಯಾದರು...!
ಕಾಪೋರೇಟರ್ ಡಿಮ್ಯಾಂಡ್ ಮಾಡಿದ ಹಣ, ನೀಡೋಕೆ, ಸಮಯ ರೆಡಿಯಾಯ್ತು. ನಿನ್ನೆ ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ. ರಾಜಾಜಿನಗರದ ಒಂದನೇ ಕ್ರಾಸ್ ನಲ್ಲಿರೋ ಕೃಷ್ಣಮೂರ್ತಿ ನಿವಾಸದಲ್ಲೇ ಹಣ ಕೊಡೋ ಮಾತುಕತೆ ಆಯ್ತು. ಗುತ್ತಿಗೆದಾರನ ಜೊತೆ ಇಬ್ಬರು ಸ್ನೇಹಿತರು ಒಳಗೆ ಹೋಗ್ತಾರೆ ಹೋದವರು ಗುತ್ತಿಗೆದಾರನ ಸ್ನೇಹಿತರಲ್ಲ. ಶಿಕ್ಷಣ ಇಲಾಖೆಯ ಇಬ್ಬರು ಪ್ರಥಮ ದರ್ಜೆ ಗುಮಾಸ್ತರು. ಸರ್ಕಾರಿ ಅಧಿಕಾರಿಗಳ ಜೊತೆ ಒಳಗೆ ಹೋದ ಗುತ್ತಿಗೆದಾರ ಧನುಂಜಯ್, ಹಣ ಕೊಡೋಕೆ ರೆಡಿಯಾಗ್ತಾರೆ. ಕಾರಿನಲ್ಲಿದ್ದ ಹಣವನ್ನು ತರಿಸಿಕೊಂಡ ಗುತ್ತಿಗೆದಾರ, ಹಣವನ್ನ ಲೆಕ್ಕಹಾಕಿ ಕಾಪೋರೇಟರ್ ಕೈಗೆ ಎಣಿಸಿ ಕೊಡುತ್ತಿರುತ್ತಾನೆ.
ಟೂ ಮಿಸ್ ಕಾಲ್ಡ್...!
ಪೊಲೀಸರು ಮೊದಲೇ ಪ್ಲಾನ್ ಮಾಡಿದಂತೆ, ಒಳಗೆ ಹೋದ ಗುತ್ತಿಗೆದಾರ, ಹಣ ಕೊಡೋಕೆ ರೆಡಿಯಾಗುತ್ತಿದ್ದಂತೆ, ಆತನ ಜೊತೆಯಲ್ಲಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳು ಕಾರ್ಪೋರೇಟರ್ ನಿವಾಸದ ಹೊರಗೆ ಕಾಯುತ್ತಿದ್ದ ಪೊಲೀಸ್ ಅಧಿಕಾರಿಗಳಿಗೆ ಎರಡು ಮಿಸ್ಡ್ ಕಾಲ್ ಕೊಡ್ತಾರೆ. ತಕ್ಷಣವೇ ಒಳಗೆ ಎಂಟ್ರಿಯಾದ ಅಧಿಕಾರಿಗಳು, ಕಾಪೋರೇಟರ್ ನನ್ನ ವಶಕ್ಕೆ ಪಡೆಯುತ್ತಾರೆ. ಎರಡು ಸಾವಿರ ಮುಖಬೆಲೆಯ 750 ನೋಟುಗಳನ್ನ ಎಣಿಸಿಕೊಳ್ಳುತ್ತಿದ್ದ ಸಿಎಮ್ ಆಪ್ತ ಕೃಷ್ಣಮೂರ್ತಿ ರೆಡ್ ಹ್ಯಾಂಡಾಗಿ ಪೊಲೀಸರ ಮುಂದೆ ಬೆತ್ತಲಾಗಿದ್ದ. ಪೊಲೀಸ್ ಮಾಸ್ಟರ್ ಪ್ಲಾನ್ ಅಂದ್ರೆ, ಇದೇ ಅಲ್ವಾ...!!!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.