
ಮೈಸೂರು(ಫೆ.16):ಮುಖ್ಯಮಂತ್ರಿಗಳು ಪ್ರತಿನಿಧಿಸುವ ಕ್ಷೇತ್ರ ಮಾದರಿಯಾಗಿಬೇಕು ಅಂತಾ ನಿರೀಕ್ಷೆ ಮಾಡೋದು ಸಹಜ. ಸಿಎಂ ಆಗಿದ್ದವರು ತಮ್ಮ ಕ್ಷೇತ್ರಕ್ಕೆ ಹೆಚ್ಚು ಕೆಲಸ ಮಾಡಿಸುತ್ತಾರೆ ಅನ್ನುವ ಆರೋಪಗಳೂ ಇವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ಕ್ಷೇತ್ರ ನೋಡಿದವರಿಗೆ ಈ ನಿರೀಕ್ಷೆ ಖಂಡಿತಾ ಹುಸಿಯಾಗುತ್ತೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾ ಕೇಂದ್ರ ಸ್ಥಾನದ ಶಾಲಾ ವಿದ್ಯಾರ್ಥಿಗಳು. ವರುಣಾದಲ್ಲಿರುವ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೂರಲು ಬೆಂಚ್ಗಳಿಲ್ಲ, ಸರಿಯಾದ ಕೊಠಡಿಗಳಿಲ್ಲ. ಈಗಲೋ-ಆಗಲೋ ಮುರಿದು ಬೀಳುವ ಸ್ಥಿತಿಯಲ್ಲಿರುವ ಕೊಠಡಿಗಳು. ಅದಕ್ಕಾಗಿಯೇ ಇಲ್ಲಿನ ಶಿಕ್ಷಕರು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಬಯಲಿನಲ್ಲೇ ಕೂರಿಸಿ ಪಾಠ ಮಾಡುತ್ತಾರೆ. ಕೊಠಡಿಗಳಲ್ಲಿ ಬೆಂಚ್ಗಳಿಲ್ಲದೆ ನೆಲದ ಮೇಲೆ ಕೂರಿಸುತ್ತಾರೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶಾಲೆಗೆ ಸರಿಯಾದ ಕಾಂಪೌಂಡ್ ಇಲ್ಲ. ಹೀಗೆ ಹತ್ತಾರು ಸಮಸ್ಯೆಗಳ ಮಧ್ಯೆ ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ.
ಸ್ವಲ್ಪ ಆಶ್ಚರ್ಯವಾದರೂ ಇದುವೇ ನಿಜ. ಸಿಎಂ ಕ್ಷೇತ್ರದಲ್ಲೇ ಇಂತಹ ಅವ್ಯವಸ್ಥೆಯೇ ಎಂದು ಅನಿಸಬಹುದು. ಶಾಲೆಯ ಮುಖ್ಯ ಶಿಕ್ಷಕರೇನು ಸುಮ್ಮನೆ ಕುಳಿತಿಲ್ಲ. ಹಲವಾರು ಬಾರಿ ಈ ಸಮಸ್ಯೆ ಬಗ್ಗೆ ಬಿಇಓ, ಡಿಡಿಪಿಐ ಗಮನಕ್ಕೆ ತಂದಿದ್ದಾರೆ. ಆದರೆ ಅಧಿಕಾರಿಗಳು ಯಾವ ಮಟ್ಟಿಗೆ ಜಡ್ಡುಗಟ್ಟಿದ್ದಾರೆ ಅನ್ನೋದಕ್ಕೆ ಈ ಶಾಲೆಯೇ ಸಾಕ್ಷಿ. ಸಿಎಂ ಕ್ಷೇತ್ರವಿದು, ಇಲ್ಲಿ ಏನೇ ಸಮಸ್ಯೆಯಾದರೂ ಮುಖ್ಯಮಂತ್ರಿಗಳ ವರ್ಚಸ್ಸಿಗೆ ಧಕ್ಕೆ ಆಗುತ್ತೆ ಎನ್ನುವ ಕನಿಷ್ಠ ಭಯವೂ ಅಧಿಕಾರಿಗಳಿಗಿಲ್ಲ.ಈ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳೇ ಬರಬೇಕಿಲ್ಲ. ಅಧಿಕಾರಿಗಳ ಮಟ್ಟದಲ್ಲೇ ಬಗೆಹರಿಯಬಹುದಾದ ಸಮಸ್ಯೆ ಇದು. ಆದರೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಶಿಕ್ಷಕರು ಮತ್ತು ಮಕ್ಕಳು ಸಂಕಷ್ಟದಲ್ಲೇ ಕಾಲ ದೂಡುತ್ತಿದ್ದಾರೆ.
ಕುಡಿಯುವ ನೀರು ಇಲ್ಲ, ಶೌಚಾಲಯ ನೋಡುವ ಸ್ಥಿತಿಯಿಲ್ಲ
ಶಾಲಾ ಆವರಣದಲ್ಲಿ ರಂಗಮಂದಿರ ನಿರ್ಮಾಣ ಕಾರ್ಯ ಆರಂಭವಾಗಿ ಬರೋಬ್ಬರಿ ಐದು ವರ್ಷಗಳೇ ಆಗಿವೆ. ಈ ತನಕ ಅದು ಸಹ ಪೂರ್ಣಗೊಂಡಿಲ್ಲ. ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಇದ್ದು, ಶಾಲಾ ಮಕ್ಕಳು ಬೋರ್ವೆಲ್ ಒತ್ತಿ ನೀರು ಬಳಸಬೇಕು. ಕುಡಿಯುವುದಕ್ಕೂ ಇದೇ ಗತಿ. ಶುದ್ಧ ಕುಡಿಯುವ ನೀರು ಅನ್ನೋದು ಈ ಮಕ್ಕಳಿಗೆ ಮರೀಚಿಕೆಯಾಗಿದೆ. ಇನ್ನು ಶೌಚಾಲಯ ವ್ಯವಸ್ಥೆಯಂತು ಕೇಳಲಸಾಧ್ಯ. ಒಂದು ಸಾಧಾರಣ ಶಾಲೆಯಲ್ಲಿರಬಹುದಾದ ಕನಿಷ್ಠ ಮೂಲಭೂತ ಸೌಲಭ್ಯ ಸಹ ಸಿಎಂ ಪ್ರತಿನಿಧಿಸುವ ಕ್ಷೇತ್ರದ ಶಾಲೆಗೆ ಈ ತನಕ ಸಿಕ್ಕಿಲ್ಲವೆಂದರೆ ಪೋಷಕರು ಯಾರನ್ನು ತಾನೆ ಶಪಿಸಬೇಕು.
ಜನಪರ ಕಾಳಜಿ ಇರುವ ಮುಖಂಡರೊಬ್ಬರು ಈ ಮಾರ್ಗದಲ್ಲೇ ಹೋಗುತ್ತಿದ್ದ ಶಿಕ್ಷಣ ಸಚಿವರನ್ನೇ ಒಂದು ಬಾರಿ ತಡೆದು ನಿಲ್ಲಿಸಿ ಶಾಲೆಯ ಸಮಸ್ಯೆ ಬಗ್ಗೆ ಹೇಳಿಕೊಂಡರೂ ಸಮಸ್ಯೆ ಮಾತ್ರ ಈ ತನಕ ಬಗೆಹರಿದಿಲ್ಲ. ಸಿಎಂ ಪ್ರತಿನಿಧಿಸುವ ಕ್ಷೇತ್ರ ಅಂತಾ ಹೇಳಿಕೊಳ್ಳಲು ನಮಗೆ ನಿಜಕ್ಕೂ ನಾಚಿಕೆಯಾಗುತ್ತೆ ಅಂತಾ ಆರೋಪಿಸುತ್ತಾರೆ. ಒಟ್ಟಾರೆ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದ ಜನರ ಸಮಸ್ಯೆ ಕೇಳಲು ಯಾರೂ ಬರ್ತಿಲ್ಲ. ಶಿಕ್ಷಣದಂತಹ ಮುಖ್ಯ ವಿಚಾರವೇ ಇಲ್ಲಿ ಗೌಣವಾಗುತ್ತಿರುವುದು ವಿಪರ್ಯಾಸವೇ ಸರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.