
ಮಂಗಳೂರು: ಎಂಆರ್‌ಪಿಎಲ್‌ನ ಕೋಕ್ ಸಲ್ಫರ್ ಘಟಕದ ಹಾರುಬೂದಿಯ ಸಮಸ್ಯೆ ಮತ್ತೆ ಉಲ್ಭಣಗೊಂಡಿದೆ. ಮಂಗಳವಾರ ರಾತ್ರಿಯಿಂದ ಜೋಕಟ್ಟೆ ಪರಿಸರದಲ್ಲಿ ಭಾರಿ ಪ್ರಮಾಣದ ಹಾರುಬೂದಿ ಸುರಿಯುತ್ತಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ.
ಹಾರುಬೂದಿ ಮಾತ್ರವಲ್ಲ, ಸಹಿಸಲಸಾಧ್ಯ ಸಲ್ಫರ್ ವಾಸನೆ, ಶಬ್ದ ಮಾಲಿನ್ಯದಿಂದಲೂ ಜನತೆ ಕಂಗಾಲಾಗಿದ್ದಾರೆ. ಕೋಕ್ ಹಾರುಬೂದಿ ಮಂಜಿನಂತೆ ಊರಿಡೀ ಪಸರಿಸಿದ್ದು, ಮಂದಿರ, ಮಸೀದಿ, ಶಾಲೆ, ಅಂಗನವಾಡಿ ಒಳಗಡೆಯೂ ಸುರಿದಿದೆ.
ಅಂಗನವಾಡಿಯಲ್ಲಿ ಬಿದ್ದ ಈ ವಿಷಕಾರಿ ಬೂದಿಯಲ್ಲೇ ಪುಟ್ಟ ಪುಟ್ಟ ಮಕ್ಕಳು ಬುಧವಾರ ಆಟವಾಡುತ್ತಿದ್ದರು. ಜನವಸತಿ ಪ್ರದೇಶದಲ್ಲಿ ನಿಯಮ ಮೀರಿ ಕೋಕ್ ಸಲ್ಫರ್ ಘಟಕ ಸ್ಥಾಪಿಸಿರುವ ವಿರುದ್ಧ ಸ್ಥಳೀಯ ನಾಗರಿಕ ಹೋರಾಟ ಸಮಿತಿಯು ನಿರಂತರವಾಗಿ ಒಂದೂವರೆ ವರ್ಷ ಹೋರಾಟ ನಡೆಸಿದ ಫಲವಾಗಿ 2016ರ ಏಪ್ರಿಲ್‌ನಲ್ಲಿ ಸರ್ಕಾರವು ಪರಿಹಾರದ ಭಾಗವಾಗಿ ಗಜೆಟ್ ನೋಟಿಫಿಕೇಷನ್ ಹೊರಡಿಸಿತ್ತು.
ಈ ಆದೇಶದಂತೆ 2017ರ ಜೂನ್ ತಿಂಗಳ ಒಳಗಡೆ ಕೋಕ್ ಡಂಪಿಂಗ್, ಲೋಡಿಂಗ್ ಯಾರ್ಡ್‌ನ್ನು ಜನವಸತಿ ಪ್ರದೇಶದಿಂದ ಕಂಪೆನಿಯ ಒಳಭಾಗಕ್ಕೆ ವರ್ಗಾಯಿಸಬೇಕು. ಜನ ವಸತಿ ಮತ್ತು ಕಂಪೆನಿಯ ಮಧ್ಯೆ ಇಪ್ಪತ್ತೇಳು ಎಕರೆ ಭೂಮಿಯನ್ನು ವಶಕ್ಕೆ ಪಡೆದು ಆ ಭೂಮಿಯಲ್ಲಿ ಹಸಿರು ವಲಯ ನಿರ್ಮಿಸಬೇಕು ಎಂಬ ಪ್ರಮುಖ ಪರಿಹಾರ ಕ್ರಮಗಳನ್ನು ಆದೇಶದಲ್ಲಿ ಸೂಚಿಸಲಾಗಿತ್ತು.
ಈ ಆದೇಶದ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ಪ್ರತಿಭಟನೆಯನ್ನು ಕೈಬಿಟ್ಟಿತ್ತು. ಆದರೆ ಕಂಪೆನಿಯು ತಾನೇ ಒಪ್ಪಿಕೊಂಡ ಸರ್ಕಾರಿ ಆದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಇದರ ಪರಿಣಾಮ ಜೋಕಟ್ಟೆ ಪ್ರದೇಶದಲ್ಲಿ ಪರಿಸರ ಮಾಲಿನ್ಯದ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ.
ಮಕ್ಕಳು, ವೃದ್ಧರಲ್ಲಿ ಶ್ವಾಸಕೋಶ ಕಾಯಿಲೆ, ಚರ್ಮ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದೀಗ ಮತ್ತೆ ಕೋಕ್ ಹಾರುಬೂದಿ ವ್ಯಾಪಿಸಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ತಾನೇ ಉಂಟು ಮಾಡಿರುವ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಳ್ಳದ, ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ, ಸರ್ಕಾರಿ ಆದೇಶಗಳನ್ನು ಗಾಳಿಗೆ ತೂರುವ ಎಂಆರ್‌ಪಿಎಲ್ ಕಂಪೆನಿಯ ನಿಯಮ ಬಾಹಿರ ಕೋಕ್ ಸಲ್ಫರ್ ಘಟಕಕ್ಕೆ ಜಿಲ್ಲಾಡಳಿತ ಬೀಗ ಜಡಿಯಬೇಕು.
ಈ ಸಂಬಂಧ ಪರಿಹಾರ ಕ್ರಮ ಕೈಗೊಳ್ಳುವವರೆಗೆ ಕಾರ್ಯಾಚರಣೆಗೆ ಅವಕಾಶ ನೀಡಬಾರದು ಎಂದು ನಾಗರಿಕ ಹೋರಾಟ ಸಮಿತಿಯ ಮುಖಂಡ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮತ್ತೊಂದು ಸುತ್ತಿನ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.