
ನವದೆಹಲಿ [ಜು.27] : ವಿವಾದಗಳ ನಾಯಕ ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್ ಅವರು ಗುರುವಾರದ ಕಲಾಪದಲ್ಲಿ ಬಿಜೆಪಿ ಮಹಿಳಾ ಸಂಸದೆ ರಮಾದೇವಿ ಕುರಿತು ಆಡಿದ ‘ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕೆನಿಸುತ್ತಿದೆ’ ಎಂಬ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಈ ವಿಚಾರದಲ್ಲಿ ಎಲ್ಲಾ ಪಕ್ಷದ ಮಹಿಳಾ ಸಂಸದರು ಪಕ್ಷಭೇದ ಮರೆತು ಸಂಸದ ಆಜಂ ಖಾನ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಅಲ್ಲದೆ, ಆಜಂ ಖಾನ್ ಕ್ಷಮಾಪಣೆ ಕೋರಬೇಕು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಹೇಳಿಕೆಯನ್ನು ಖಂಡಿಸಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು, ಎಸ್‌ಪಿ ಸಂಸದ ಸಂಸತ್ತಿಗಷ್ಟೇ ಅಲ್ಲದೆ, ಮಹಿಳಾ ಸಮುದಾಯಕ್ಕೆ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರು, ‘ಆಜಂ ಖಾನ್ ಅವರಿಗೆ ಸದನದಲ್ಲಿ ಕ್ಷಮೆ ಕೋರುವಂತೆ ಸ್ಪೀಕರ್ ಓಂ ಬಿರ್ಲಾ ಅವರು ಸೂಚಿಸುವ ನಿರ್ಧಾರವನ್ನು ಸರ್ವಪಕ್ಷಗಳ ಸಭೆಯಲ್ಲಿ ಕೈಗೊಳ್ಳಲಾಗಿದೆ. ಒಂದು ವೇಳೆ ಆಜಂ ಖಾನ್ ಕ್ಷಮೆ ಕೋರದಿದ್ದರೆ, ಸ್ಪೀಕರ್ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.
ಬಿಜೆಪಿ ಸಂಸದೆಗೆ ‘ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ’ ಎಂದ ಅಜಂ ಖಾನ್!
ಗುರುವಾರದ ಲೋಕಸಭೆ ಕಲಾಪದ ವೇಳೆ ತ್ರಿವಳಿ ತಲಾಖ್ ಕುರಿತಾದ ಚರ್ಚೆ ವೇಳೆ ಎಸ್‌ಪಿ ಸಂಸದ ಆಜಂ ಖಾನ್ ಆಡಳಿತ ಪಕ್ಷದ ಸದಸ್ಯರನ್ನು ನೋಡಿಕೊಂಡು ಮಾತನಾಡುತ್ತಿದ್ದರು.
ಈ ವೇಳೆ ಸಭಾಪತಿ ಸ್ಥಾನ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಬಿಜೆಪಿ ಸಂಸದೆ ರಮಾದೇವಿ ಅವರು ಸಭಾಧ್ಯಕ್ಷರ ಪೀಠವನ್ನು ನೋಡಿಕೊಂಡು ಮಾತನಾಡಿ ಎಂದು ಸೂಚನೆ ನೀಡಿದರು. ಆಗ, ಆಜಂ ಖಾನ್, ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು ಎಂದು ನನ್ನ ಮನಸ್ಸು ಹೇಳುತ್ತಿದೆ ಎಂದು ಹೇಳಿದ್ದರು. ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ, ರಮಾದೇವಿ ಅವರು ತನಗೆ ಸಹೋದರಿ ಇದ್ದಂತೆ ಎಂದು ತೇಪೆ ಹಚ್ಚಲು ಯತ್ನಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.