
ಬೆಂಗಳೂರು (ಏ. 29): ಗಾಳಿಯಲ್ಲಿ ತೇಲಿ ಬರುತ್ತಿದ್ದ ನೊರೆಯ ಗುಚ್ಛ, ಕೆರೆಯ ಸುತ್ತಲೂ ಸುರಿದಿದ್ದ ಘನತ್ಯಾಜ್ಯಗಳು, ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟಜನರು, ಕೆದಕಿದಷ್ಟುಸಮಸ್ಯೆಗಳ ಮಹಾಪೂರವನ್ನೇ ಹೇಳುತ್ತಿದ್ದ ಸ್ಥಳೀಯರು, ಸಿಸಿಟಿವಿ ಕ್ಯಾಮರಾ ಅಳವಡಿಸಿರುವ ಜಾಗ ಬಿಟ್ಟು ಬೇರೆಡೆ ತ್ಯಾಜ್ಯ ವಿಲೇವಾರಿ, ಎನ್‌ಜಿಟಿ ಆದೇಶ ಹೊರಬಿದ್ದರೂ ಏನೇನು ಕ್ರಮ ಕೈಗೊಳ್ಳದ ಸ್ಥಳೀಯ ಆಡಳಿತ.....
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಸಂಸದ ರಾದ ರಾಜೀವ್ ಚಂದ್ರಶೇಖರ್, ಪಿ.ಸಿ.ಮೋಹನ್ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ತಂಡ ಬೆಳ್ಳಂದೂರು ಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎದುರಾದ ಸನ್ನಿವೇಶಗಳಿವು.
ಬೆಳ್ಳಂದೂರು ಕೆರೆ ಹಾಳಾಗಲು ಕೈಗಾರಿಕೆಗಳೇ ಪ್ರಮುಖ ಕಾರಣವಾಗಿವೆ. ಸಂಸ್ಕರಣೆ ಮಾಡದೆ, ತ್ಯಾಜ್ಯ ನೀರನ್ನು ಹರಿಸುತ್ತಿರುವುದನ್ನು ಯಾರೊಬ್ಬರು ಕೇಳುತ್ತಿಲ್ಲ. ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳು ಬೇರೊಂದು ಇಲಾಖೆ ಗಳ ಮೇಲೆ ಹೊಣೆಗಾರಿಕೆ ಹಾಕಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಹೀಗಾಗಿಯೇ ಕೆರೆ ಸಂಪೂರ್ಣ ಅವನತಿ ಹಾದಿ ಹಿಡಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ನಗರದಲ್ಲಿರುವ ಜಲ ಮೂಲಗಳ ಸಂರಕ್ಷಣೆ, ಒತ್ತುವರಿ ತೆರವು ಮತ್ತು ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ಸ್ಥಳೀಯ ಸಂಸ್ಥೆ ಗಳು ಹಾಗೂ ರಾಜ್ಯ ಸರ್ಕಾರ ಏನೇನೂ ಕ್ರಮ ಕೈಗೊಂಡಿಲ್ಲ. ತಿಂಗಳೊಳಗೆ ಕೆರೆಯನ್ನು ಪುನಶ್ಚೇತನ ಗೊಳಿಸುವಂತೆ ಎನ್‌ಜಿಟಿ ಆದೇಶ ಹೊರಡಿಸಿದ್ದರೂ ಕೇವಲ ಎರಡು ಹಿಟಾಚಿ ಮತ್ತು ಜೆಸಿಬಿ ಯಂತ್ರಗಳ ಲ್ಲಷ್ಟೇ ಹಾಕಿ ಕಾಟಾಚಾರಕ್ಕೆ ಕಾರ್ಯ ನಿರ್ವಹಿಸು ತ್ತಿದೆ. ಕೆರೆ ಸ್ವಚ್ಛತೆಗೆ ನಿಗದಿತ ಯೋಜನೆಗಳನ್ನು ರೂಪಿ ಸಿಲ್ಲ. ಬಿಬಿಎಂಪಿ ಮತ್ತು ಬಿಡಿಎ ಪರಸ್ಪರ ಆರೋಪ ಗಳನ್ನು ಮಾಡಿಕೊಂಡು ಲಾಭದ ದೃಷ್ಟಿಯಿಂದ ಕಾರ‍್ಯ ನಿರ್ವಹಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟ ನಿಲ್ಲಲ್ಲ: ಸ್ವಚ್ಛ ನೀರು, ಗಾಳಿ ಮೂಲ ಭೂತ ನಾಗರಿಕರ ಹಕ್ಕುಗಳಾಗಿವೆ. ಅಂತರ್ಜಲ ಸಂರಕ್ಷಣೆ ಮತ್ತು ನಾಗರಿಕರ ಆರೋಗ್ಯದ ದೃಷ್ಟಿಯಿಂದಲೂ ನಿಯಮ ಉಲ್ಲಂಘಿಸುತ್ತಿರುವ ಕೈಗಾರಿ ಕೆಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕಿತ್ತು. ಆದೇಶ ಬಂದು ವಾರ ಕಳೆದರೂ ಎಚ್ಚೆತ್ತುಕೊಳ್ಳದೆ ಎನ್‌ಜಿಟಿ ಆದೇಶ ನಿರ್ಲಕ್ಷಿಸುವುದು ಸಹ ಆದೇಶ ಉಲ್ಲಂಘನೆ ಯಾಗಲಿದ್ದು, ಸ್ಥಳೀಯ ಆಡಳಿತ ಸಂಸ್ಥೆಗಳ ವಿರುದ್ಧವೇ ಕ್ರಮ ಕೈಗೊಳ್ಳಬೇಕಿದೆ. ಕೆರೆಯನ್ನು ಸಂಪೂರ್ಣವಾಗಿ ಪುನಶ್ಚೇತನಗೊಳಿಸುವ ತನಕ ಹೋರಾಟ ನಿಲ್ಲದು. ಶಾಶ್ವತ ಪರಿಹಾರಕ್ಕಾಗಿ ಹೋರಾಟ ಮುಂದುವರಿ ಯಲಿದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ಜತೆ ಸಭೆ: ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ಸರ್ಕಾರ ಯಾವ ರೀತಿಯ ಯೋಜನೆ ರೂಪಿಸಿದೆ. ಸಂಬಂಧಪಟ್ಟಇಲಾಖೆ ಏನೇನು ಕ್ರಮ ಕೈಗೊಂಡಿದೆ ಎಂದು ತಿಳಿಯುವುದಕ್ಕಾಗಿ ನಗರಾಭಿವೃದ್ಧಿ ಸಚಿವರು ಸೇರಿದಂತೆ ಸಂಬಂಧಪಟ್ಟಇಲಾಖೆ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು, ತಜ್ಞರನ್ನು ಒಟ್ಟಾರೆ ಸೇರಿಸಿ ಸದ್ಯದಲ್ಲೇ ಚರ್ಚಿಸಲಾಗುವುದು. ನ್ಯಾಯಾಲಯದ ಆದೇಶದ ಹೊರತಾಗಿಯೂ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ತಿಳಿಸಿದರು.
ಬಿಡಿಎ ಅಧಿಕಾರಿ ಕಕ್ಕಾಬಿಕ್ಕಿ: ಎನ್‌ಜಿಟಿ ಆದೇಶ ಹಿನ್ನೆಲೆಯಲ್ಲಿ ಏನೇನು ಸಿದ್ಧತಾ ಕ್ರಮ ಕೈಗೊಂಡಿದ್ದೀರಿ, ಕೆರೆಯ ಸುತ್ತಳತೆ ಎಷ್ಟು? ಸರ್ವೆ ಮಾಡಿದ್ದೀರಾ, ಪುನಶ್ಚೇತನಕ್ಕೆ ಏನು ಯೋಜನೆ ರೂಪಿ ಸಿದ್ದೀರಿ ಎಂಬ ಪ್ರಶ್ನೆಗೆ ಬಿಡಿಎ ಕಾರ್ಯ ನಿರ್ವಹಣಾ ಎಂಜಿನಿಯರ್ ಉತ್ತರಿಸಲು ಕಕ್ಕಾಬಿಕ್ಕಿಯಾದರು. ಕೆರೆಯ ಸುತ್ತಲೂ ಬೇಲಿ ಹಾಕಲಾಗುತ್ತಿದೆ. ಬಿಬಿಎಂಪಿ ಯಿಂದ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ ಎಂಬ ಅಧಿಕಾರಿ ಉತ್ತರ, ಸಮಾಧಾನ ತಾರಲಿಲ್ಲ.
ವರ್ತೂರು ಕೆರೆ ರಾತ್ರೋರಾತ್ರಿ ಒತ್ತುವರಿ: ವರ್ತೂರು ಕೆರೆಯ ಸುತ್ತಲೂ ರಾತ್ರೋರಾತ್ರಿ ಕಟ್ಟಡದ ತ್ಯಾಜ್ಯವನ್ನು ಲಾರಿಗಳಲ್ಲಿ ತಂದು ಸುರಿಯುವ ಮೂಲಕ ಒತ್ತುವರಿ ಮಾಡಲಾಗುತ್ತಿದೆ. ಗುರುವಾರ ರಾತ್ರಿ ಕೂಡ ತ್ಯಾಜ್ಯ ವಿಲೇವಾರಿ ಮಾಡಲಾಯಿತು ಎಂದು ಸ್ಥಳೀಯರು ಸ್ಥಳದಲ್ಲಿಯೇ ತಿಳಿಸಿದರು. ಇದಕ್ಕೆ ಗರಂ ಆದ ಸಂಸದರು, ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಲಾರಿಗಳು, ಟ್ರ್ಯಾಕ್ಟರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೆರೆಯಂಚಿಗೆ ಬರುವ ಪ್ರಮುಖ ದಾರಿಯಲ್ಲಿ ಸಿಬ್ಬಂದಿ ನೇಮಿಸಿ ನೋಂದಣಿ ಸಂಖ್ಯೆ ನಮೂದಿಸಿ ಪ್ರಕರಣ ದಾಖಲಿಸಿಕೊಳ್ಳುವಂತೆ ಸ್ಥಳದಲ್ಲೇ ಇದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಸೂಚಿಸಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಸರ್ಕಾರ ಹೇಳುವ ರೀತಿಯಲ್ಲಿ ಕೇವಲ 24 ಗಂಟೆಯಲ್ಲಿ ಮುಗಿಯುವ ಕೆಲಸವಲ್ಲ. ಕನಿಷ್ಠ 24 ತಿಂಗಳು ಬೇಕಾಗುತ್ತದೆ. ಆದ್ದರಿಂದ ಕೆರೆ ಸಂರಕ್ಷಣೆಗೆ ಸರ್ಕಾರ ಏನೇನು ಕ್ರಮ ಕೈಗೊಂಡಿದೆ, ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಯೋಜನೆಗಳನ್ನು ರೂಪಿಸಿದೆಯೇ ಎಂಬ ಮಾಹಿತಿಯನ್ನು ವೆಬ್‌ಸೈಟ್‌ಲ್ಲಿ ಅಪ್‌ಲೋಡ್ ಮಾಡಬೇಕು. ಘನ ತ್ಯಾಜ್ಯ ಸುರಿಯುತ್ತಿರುವವರಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ದಕ್ಷತೆ ಪ್ರದರ್ಶಿಸಬೇಕು ಎಂದು ಸೂಚಿಸಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಚಿಕ್ಕಮಗಳೂರು ಮತ್ತು ಕೋಲಾರ ಜಿಲ್ಲೆಗೆ ಕೃಷಿಗೆ ನೀರು ಸರಬರಾಜು ಮಾಡುತ್ತೇವೆ ಎನ್ನುವ ಜಲಮಂಡಳಿಯೇ ಒಳಚರಂಡಿ ನೀರನ್ನು ಕೆರೆಗೆ ಹರಿಸುತ್ತಿದೆ ಎಂಬುದು ದುರದೃಷ್ಟಕರ ಸಂಗತಿ. ಈ ಬಗ್ಗೆ ಹತ್ತಾರು ಬಾರಿ ಸಭೆ ನಡೆಸಿ ಸೂಚನೆ ನೀಡಿದ್ದರೂ ಎಚ್ಚೆತ್ತುಕೊಳ್ಳದ ಸ್ಥಳೀಯ ಸಂಸ್ಥೆಗಳಿಗೆ ಎನ್‌ಜಿಟಿ ಸರಿಯಾಗಿಯೇ ಕಪಾಳಮೋಕ್ಷ ಮಾಡಿದೆ. ಹೀಗಿದ್ದರೂ ಕಾಮಗಾರಿಯನ್ನು ಯಾರು ಕೈಗೊಳ್ಳಬೇಕು ಎಂಬ ಗೊಂದಲ ಮಾಡಿಕೊಳ್ಳುತ್ತಿದ್ದು, ಜನರ ಆಶೋತ್ತರ ಈಡೇರಿಸಲು ಮುಂದಾಗಬೇಕು. ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಾಗರಿಕ ಕ್ರಿಯಾ ಸಮಿತಿ ಸದಸ್ಯರಾದ ಮುಕುಂದ, ನಮ್ಮ ಬೆಂಗಳೂರು ಪ್ರತಿಷ್ಠಾನ ಸಿಇಒ ಶ್ರೀಧರ್ ಪಬ್ಬಿಸೆಟ್ಟಿ, ನರೇಶ್ ನರಸಿಂಹನ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.