
ಹುಬ್ಬಳ್ಳಿ (ಜ.22): ದೇಶದಲ್ಲಿ ಉದ್ಯಮ ಆರಂಭಿಸುವ ಯುವಕರಿಗೆ ಸಮಾನ ಅವಕಾಶಗಳಿವೆ. ಆದರೆ, ಭವಿಷ್ಯದ ಬೆಳವಣಿಗೆ ಬಗ್ಗೆ ಅಧ್ಯಯನ ಮಾಡಿ ನಮ್ಮದೇ ಆದ ಹೊಸ ಅನ್ವೇಷಣೆಯೊಂದಿಗೆ ಯುವಕರು ಉದ್ಯಮ ಆರಂಭಿಸುವುದು ಸೂಕ್ತ ಎಂದು ಉದ್ಯಮಿ ಹಾಗೂ ಸಂಸದ ರಾಜೀವ್ ಚಂದ್ರಶೇಖರ್ ಸಲಹೆ ನೀಡಿದ್ದಾರೆ.
ಒಂದು ಉದ್ಯಮ ಕಟ್ಟಿ ಯಶಸ್ವಿಗೊಳಿಸಲು ನಮ್ಮಲ್ಲಿನ ಪ್ರತಿಭೆ, ಕನಸು, ಕಲ್ಪನೆಗಳಷ್ಟೇ ಸಾಕಾಗುವುದಿಲ್ಲ. ಮುಂದಾಲೋಚನೆ ಮತ್ತು ಆಗಬಹುದಾದ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಿ ಶ್ರದ್ಧೆಯಿಂದ ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದರು.
ಬದುಕು ಬದಲಿಸಿದ ಟ್ರಂಕ್ ಕಾಲ್:
ತಮ್ಮ ಬದುಕು ಬದಲಿಸಿದ ಟ್ರಂಕ್ ಕಾಲ್ ಬಗ್ಗೆ ಹೇಳಿ ನೆರೆದಿದ್ದ ಯುವ ನವೋದ್ಯಮಿಗಳನ್ನು ಉತ್ತೇಜಿಸಿದ ರಾಜೀವ್ ಚಂದ್ರಶೇಖರ್, ಪ್ರಯತ್ನ ಮಾಡಿದರೆ ಅಂದುಕೊಂಡದ್ದನ್ನು ಸಾಧಿಸಬಹುದು ಎಂದು ಹೇಳಿದರು. ಚೆನ್ನೈನಲ್ಲಿ ಎಂಜಿನಿಯರಿಂಗ್ ಮುಗಿಸಿ, ದೆಹಲಿಯಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದೆ. ನಂತರ ನಾನು ಅಮೆರಿಕಾಕ್ಕೆ ತೆರಳಿ ಅಲ್ಲಿ ಕಂಪ್ಯೂಟರ್‌ನಲ್ಲಿ ಸ್ನಾತ್ತಕೋತ್ತರ ಪದವಿ ಪಡೆದು ಇಂಟೆಲ್ ಕಂಪನಿಯಲ್ಲಿ ಕಾರ್ಯನಿರ್ವಹಿಸಿ ಭಾರತಕ್ಕೆ ವಾಪಸ್ ಬಂದೆ.
ವಿವಾಹ ನಂತರ ಯುಎಸ್‌ಗೆ ವಾಪಸಾಗುವ ಸಲುವಾಗಿ ಗ್ರೀನ್ ಕಾರ್ಡ್ ನವೀಕರಿಸಲು ಯತ್ನಿಸಿದೆ. ಆದರೆ, ಅಂದು ಅಲ್ಲಿಗೆ ಟ್ರಂಕ್ ಕಾಲ್ ಮಾಡಬೇಕಿತ್ತು. ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಕೆಲ ದಿನಗಳ ನಂತರ ನನ್ನ ತಂದೆ ತಮಗೆ ಆಪ್ತರಾಗಿದ್ದ ರಾಜೇಶ್ ಪೈಲಟ್ ಅವರನ್ನು ಭೇಟಿ ಮಾಡಿಸಿದರು. ಆಗ ಅವರು ನಿನ್ನಂತಹ ಯುವಕರಿಗೆ ಇಲ್ಲೇ ಭವಿಷ್ಯವಿದ್ದು ಇಲ್ಲಿಯೇ ಇರು ಎಂದು ಹೇಳಿದರು. ಆಗ ನಾನು ಇಲ್ಲಿ ಸೆಲ್ಯುಲರ್ ಕಂಪನಿ ಆರಂಭಿಸಿದೆ. ಟ್ರಂಕ್ ಕಾಲ್ ಸಿಕ್ಕಿದ್ದರೆ, ಯಾವುದೋ ಕಂಪನಿಯಲ್ಲಿ ಅಧಿಕಾರಿಯಾಗಿ ರುತ್ತಿದ್ದೆ ಎಂದು ನವಿರು ಹಾಸ್ಯದಿಂದ ಸ್ವಾರಸ್ಯ ಬಿಚ್ಚಿಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.