4 ದಿನದ ಹಸುಗೂಸಿನೊಂದಿಗೆ ಸೊಸೆಗೆ ಗೋ ಔಟ್ ಎಂದ ಅತ್ತೆ-ಮಾವ

By Web DeskFirst Published Dec 10, 2018, 1:16 PM IST
Highlights

ಹಸುಗೂಸಿನೊಂದಿಗೆ ಬಾಣಂತಿಯನ್ನು ಮನೆಯಿಂದ ಹೊರಗೆ ಹಾಕಿದ್ದು, ದೇವಾಲಯದ ಆವರಣದಲ್ಲಿಯೇ ದಿನ ಕಳೆದ ಮನಕಲುಕುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಬಳಿಕ ಸಾರ್ವಜನಿಕರು ಈಕೆಯನ್ನು ರಕ್ಷಣೆ ಮಾಡಿದ್ದಾರೆ.

ಚಳ್ಳಕೆರೆ :  ಗಂಡನ ಮನೆಯವರು ಮನೆಗೆ ಬರಬೇಡ ಎಂದಿದ್ದರಿಂದ ನಾಲ್ಕು ದಿನದ ಮಗುವಿನೊಂದಿಗೆ ಬಾಣಂತಿಯೊಬ್ಬಳು ದೇವಸ್ಥಾನದ ಆವರಣದಲ್ಲಿಯೇ ಒಂದು ದಿನ ಕಾಲ ಕಳೆದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಕಣುವೆ ಮಾರಮ್ಮ ದೇವಸ್ಥಾನದಲ್ಲಿ ನಡೆದಿದೆ.

"

ಈ ಬಗ್ಗೆ ವಿಷಯ ತಿಳಿದ ಆರೋಗ್ಯಾಧಿಕಾರಿಗಳು ಮಗುವಿನೊಂದಿಗೆ ಅನಾಥವಾಗಿ ಮಲಗಿದ್ದ ಸಂತ್ರಸ್ತ ಬಾಣಂತಿ ಶಾರದಮ್ಮನನ್ನು ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಶಾರದಮ್ಮ ಚಳ್ಳಕೆರೆ ತಾಲೂಕಿನ ಎನ್‌.ದೇವರಹಳ್ಳಿ ಗ್ರಾಮದವಳಾಗಿದ್ದಾಳೆ. ಕೆಲವು ವರ್ಷಗಳ ಹಿಂದೆ ಹಿರೇಹಳ್ಳಿ ಗ್ರಾಮದ ದುರುಗಪ್ಪ ಎಂಬುವರ ಪುತ್ರ ಮಲ್ಲಿಕಾರ್ಜುನನ ಜೊತೆ ವಿವಾಹವಾಗಿದ್ದರು. ಆದರೆ, ಕಳೆದ ಜೂನ್‌ ತಿಂಗಳಿನಲ್ಲಿ ಪತಿ ನಾಪತ್ತೆಯಾಗಿದ್ದರು. ಈ ಬಗ್ಗೆ ಶಾರದಮ್ಮ ಮಹಿಳಾ ಸಾಂತ್ವನ ಕೇಂದ್ರಕ್ಕೆ ಮತ್ತು ಜಿಲ್ಲಾ ರಕ್ಷಣಾಧಿ​ಕಾರಿಗಳಿಗೆ ದೂರು ನೀಡಿದ್ದರು. ಆದರೆ, ಮಲ್ಲಿಕಾರ್ಜುನ ಪತ್ತೆಯಾಗಿರಲಿಲ್ಲ.

ಡಿ.5ರಂದು ಈಕೆಗೆ 2ನೇ ಮಗುವಿನ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸ್ವಾಭಾವಿಕ ಹೆರಿಗೆ ಹಿನ್ನೆಲೆಯಲ್ಲಿ ಡಿ.8ರಂದು ಜಿಲ್ಲಾ ಆಸ್ಪತ್ರೆಯಿಂದ ಈಕೆಯನ್ನು ಬಿಡುಗಡೆಗೊಳಿಸಿದ್ದರು. ಆಕೆ ನೇರವಾಗಿ ಹಿರೇಹಳ್ಳಿಯ ಗಂಡನ ಮನೆಗೆ ತೆರಳಿದ್ದಾಳೆ. 

ಆದರೆ, ಅಲ್ಲಿ ಅತ್ತೆ, ಮಾವ ನಿನ್ನ ಗಂಡ ಬಂದರೆ ಮಾತ್ರ ನಿನಗೆ ಮನೆಯಲ್ಲಿ ಸ್ಥಾನವೆಂದು ಆಕೆಯನ್ನು ಹೊರ ಹಾಕಿದ್ದಾರೆ. ದಿಕ್ಕು ತೋಚದ ಈಕೆ ಸಾರ್ವಜನಿಕ ಆಸ್ಪತ್ರೆಯ ದೇವಸ್ಥಾನದ ಕಟ್ಟೆಯ ಮೇಲೆ ಮಲಗಿದ್ದಳು. ಸುದ್ದಿ ತಿಳಿದ ಈಕೆಯ ತಂದೆ ಚನ್ನಪ್ಪ ಆಸ್ಪತ್ರೆಗೆ ಧಾವಿಸಿದ್ದು, ಮಗಳ ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದಾರೆ.

click me!