ದೇಶದ ಬಹಳಷ್ಟು ಮಾಧ್ಯಮಗಳು ಕೋಮುವಾದಿ ನಿಲುವು ತಾಳಿವೆ

By Suvarna Web DeskFirst Published Feb 25, 2017, 12:18 PM IST
Highlights

ಜಾತ್ಯತೀತರೆಂದು ಹೇಳಿಕೊಳ್ಳುವ ದೇಶದ ಬಹಳಷ್ಟು ಮಾಧ್ಯಮಗಳು ಕೋಮುವಾದಿ ನಿಲುವುಗಳನ್ನೇ ಹೊಂದಿರುತ್ತವೆ. ಇದು ಪ್ರಸ್ತುತ ಅತ್ಯಂತ ಅಪಾಯಕಾರಿ ಪ್ರವೃತ್ತಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು (ಫೆ.25): ಜಾತ್ಯತೀತರೆಂದು ಹೇಳಿಕೊಳ್ಳುವ ದೇಶದ ಬಹಳಷ್ಟು ಮಾಧ್ಯಮಗಳು ಕೋಮುವಾದಿ ನಿಲುವುಗಳನ್ನೇ ಹೊಂದಿರುತ್ತವೆ. ಇದು ಪ್ರಸ್ತುತ ಅತ್ಯಂತ ಅಪಾಯಕಾರಿ ಪ್ರವೃತ್ತಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಐಎಂಎ ಸಭಾಭವನದಲ್ಲಿ ಶನಿವಾರ ವಾರ್ತಾಭಾರತಿ ಪತ್ರಿಕೆಯ ನೂತನ ಕಚೇರಿ ಸಂಕೀರ್ಣದ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಜಾತ್ಯತೀತತೆಯನ್ನು ಎತ್ತಿ ಹಿಡಿಯುವುದು ಮಾಧ್ಯಮಗಳ ಕರ್ತವ್ಯ. ಆದರೆ ಹಲವು ಮಾಧ್ಯಮಗಳು ಜಾತ್ಯತೀತತೆಯನ್ನೇ ವಿರೋಧಿಸುತ್ತ ದೇಶವನ್ನು ಕೋಮುವಾದಿಯನ್ನಾಗಿ ಮಾಡುತ್ತಿವೆ. ಈ ಪ್ರವೃತ್ತಿ ಬದಲಾಗಬೇಕು ಎಂದು ಸಲಹೆ ನೀಡಿದರು.

ಇಂದು ದೇಶದ ಶೇ.೯೫ರಷ್ಟು ಮಾಧ್ಯಮಗಳು ಬಂಡವಾಳಶಾಹಿಗಳ ಪರವಾಗಿವೆ. ಬಂಡವಾಳಶಾಹಿಗಳಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಾಗಿವೆ. ಅನೇಕ ಮಾಧ್ಯಮಗಳು ಬಂಡವಾಳಶಾಹಿಗಳಿಂದಲೇ ನಡೆಯುತ್ತಿವೆ. ಇತರ ಬಂಡವಾಳಶಾಹಿಗಳನ್ನು ರಕ್ಷಿಸಲು ಮಾಧ್ಯಮಗಳ ನಡುವೆಯೇ ಪೈಪೋಟಿ ನಡೆಯುತ್ತಿರುವುದು ವಿಷಾದನೀಯ ಎಂದರು.

ಬಡವರ ಪರವಾಗಿರಲಿ: 

ಪ್ರತಿಯೊಂದು ಮಾಧ್ಯಮವೂ ತಮ್ಮದೇ ಆದ ನಿಲುವು ಹೊಂದಿರುತ್ತವೆ. ಅದು ತಪ್ಪಲ್ಲ. ಆದರೆ ಆ ನಿಲುವು ಸಮಾಜದ ಹಿತದೃಷ್ಟಿಗೆ ಪೂರಕವಾಗಿರಬೇಕು. ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಬಡವರಿದ್ದಾರೆಯೇ ಹೊರತು ಶ್ರೀಮಂತ ಬಂಡವಾಳಶಾಹಿಗಳಲ್ಲ. ಆದ್ದರಿಂದ ಮಾಧ್ಯಮಗಳು ಬಹುಸಂಖ್ಯಾತ ಬಡವರ ಪರವಾಗಿರಬೇಕು. ಆದರೆ ಇಂದು ಕೆಲವೇ ಕೆಲವು ಮಾಧ್ಯಮಗಳು ಮಾತ್ರ ಬಡವರ ಕುರಿತಾಗಿ ಕಾಳಜಿ ಹೊಂದಿವೆ ಎಂದು ಪಿಣರಾಯಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ಶಾಸಕರಾದ ಕೆ.ಅಭಯಚಂದ್ರ ಜೈನ್, ಜೆ.ಆರ್. ಲೋಬೊ, ಮೊಹಿಯುದ್ದೀನ್ ಬಾವ, ಮೇಯರ್ ಹರಿನಾಥ್, ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮತ್ತಿತರರಿದ್ದರು.

ಸಂವಿಧಾನ ವಿರೋಧಿಗಳಿಗೆ ಚಪ್ಪಲಿಯಲ್ಲಿ ಹೊಡೆಯಬೇಕು

ದೇಶಕ್ಕೆ ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ವಿರೋಧಿಸುವವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು. ಪಿಣರಾಯಿ ಅವರ ಭೇಟಿ ವಿರೋಧಿಸುವವರು ಅವರು ಹಾಕುವ ಚಪ್ಪಲಿಗೂ ಸಮಾನರಲ್ಲ. ಪ್ರಜಾಸತ್ತಾತ್ಮಕವಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾದವರ ಆಗಮನವನ್ನು ವಿರೋಧಿಸುವುದು ‘ಅತಿಥಿ ದೇವೋಭವ’ ಎನ್ನುವ ದೇಶದ ಸಂಸ್ಕೃತಿ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಅಂಥ ಶಕ್ತಿಗಳನ್ನು ಹೊರಗಿಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ. 

click me!