
ಚಿಕ್ಕಮಗಳೂರು(ಫೆ.10): ಕಾಫಿನಾಡಿನಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಯಲ್ಲಿ ಬಗೆದಷ್ಟು ಮಾಹಿತಿ ಹೊರಬೀಳ್ತಿದೆ. ಬಂಧನವಾಗಿರುವ ಆರೋಪಿಗಳು ಬಾಯ್ಬಿಟ್ಟಿರುವ ಸತ್ಯ ದಂಧೆಯ ಆಳದ ಕೈಗನ್ನಡಿಯಾಗಿದೆ. ಜೊತೆಗೆ ಕಲ್ಲಪ್ಪ ಆತ್ಮಹತ್ಯೆಗೂ ಬೆಟ್ಟಿಂಗ್ ಜಾಲಕ್ಕೂ ನಂಟಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬೆಟ್ಟಿಂಗ್ ದಂಧೆಯ ಸುತ್ತಾ ಏನೆಲ್ಲಾ ನಡೆಯುತ್ತಿದೆ? ಈ ಕುರಿತಾದ ವರದಿ.
ಚಿಕ್ಕಮಗಳೂರಿನ ಬೆಟ್ಟಿಂಗ್ ಬುಡಕ್ಕೆ ಕೈಹಾಕಿರುವ ಪೋಲೀಸರಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ. ರಾಷ್ಟ್ರಮಟ್ಟದಲ್ಲಿ ವ್ಯಾಪಿಸಿರುವ ಬೆಟ್ಟಿಂಗ್ ದಂಧೆಯೊಳಗೆ ಹಲವು ಪ್ರಭಾವಿಗಳ ಕೈವಾಡವಿದ್ದು, ದಂಧೆ ನಡೆಸಲು ಆರೋಪಿಗಳು ಬಳಸಿರುವ ಕೋಡ್ ವರ್ಡ್ ಆಳಕ್ಕಿಳಿಯುವುದು ಪೊಲೀಸರಿಗೆ ಸವಾಲಾಗಿದೆ. ವಾಟ್ಸಾಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ಇವರು, ಮೊಬೈಲ್'ನಲ್ಲಿ ಎ1, ಎ2, ಎ3 ಅಂತ ಆರೋಪಿಗಳಂತೆ ಹೆಸರು ಹಾಕಿಕೊಂಡಿರುವುದು ಪೊಲೀಸರಿಗೆ ತಲೆನೋವಾಗಿದೆ. ಇದರಲ್ಲಿ ಕಾಂಗ್ರೆಸ್ ಮುಖಂಡರ ಹೆಸರು ಕೂಡ ಕೇಳಿ ಬಂದಿದೆ. ಈಗಾಗಲೇ ನಗರಸಭೆಯ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಕಾಯಿ ರವಿ ಅಂದರ್ ಆಗಿದ್ದು, ಉಳಿದವರ ಬಂಧನಕ್ಕೆ ಪೊಲೀಸರು ಬಲೆ ಹೆಣೆದಿದ್ದಾರೆ.
ಸದ್ಯ ಬೆಟ್ಟಿಂಗ್ ದಂಧೆಯಲ್ಲಿ ಸಿಕ್ಕಿಬಿದ್ದಿರುವ ಬಿಜೆಪಿ ನಗರಸಭೆ ಸದಸ್ಯ ಕಾಯಿ ರವಿ ತನಿಖೆ ವೇಳೆ ಕೆಲ ಸ್ಫೋಟಕ ವಿಷಯಗಳನ್ನು ಬಾಯಿಬಿಟ್ಟಿದ್ದಾನೆ. ಇನ್ನೂ ಕಲ್ಲಪ್ಪ ಆತ್ಮಹತ್ಯೆಗೂ ಬೆಟ್ಟಿಂಗ್ ಜಾಲಕ್ಕೂ ನಂಟಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಲ್ಲಪ್ಪ ಪ್ರಕರಣದ ತನಿಖೆ ನಡೆಸ್ತಿದ್ದ ಸಿಐಡಿ ಅಧಿಕಾರಿಯೊಬ್ಬನ ನಿಜ ಬಣ್ಣ ಕೂಡ ಬಯಲಾಗಲಿದೆಯಂತೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಬೆಟ್ಟಿಂಗ್ ದಂಧೆಯ ಕರಾಳ ಮುಖ ಒಂದೊಂದಾಗಿ ಹೊರಬೀಳುತ್ತಿರುವುದನ್ನು ನೋಡಿದರೆ ಉನ್ನತ ವ್ಯಕ್ತಿಗಳ ಕೊರಳಿಗೂ ಉರುಳಾಗುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.