ಪ್ರಸ್ತಾಪಿತ ಜಿಎಸ್'ಟಿ 'ಒಂದು ದೇಶ, ಒಂದು ತೆರಿಗೆ' ವ್ಯವಸ್ಥೆಗೆ ವಿರುದ್ಧವಾಗಿದೆ: ಮೊಯ್ಲಿ

By Suvarna Web DeskFirst Published Mar 29, 2017, 3:33 AM IST
Highlights

ಮೋದಿ ಸರ್ಕಾರ ಜಾರಿಗೊಳಿಸಲುದ್ದೇಶಿಸಿರುವ ಜಿಎಸ್'ಟಿಯಲ್ಲಿ ಬಹಳ ರೀತಿಯ ತೆರಿಗೆಗಳಿವೆಯಲ್ಲದೇ, ದರಗಳೂ ಹೆಚ್ಚಿವೆ. ಇದು ಜಿಎಸ್'ಟಿಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆಯೆಂದು ಮೊಯ್ಲಿ ಹೇಳಿದ್ದಾರೆ.

ನವದೆಹಲಿ (ಮಾ.29): ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ)ಯನ್ನು ಜಾರಿಮಾಡಲು ವಿಳಂಬ ಮಾಡಿದ್ದರಿಂದ ದೇಶಕ್ಕೆ 12 ಲಕ್ಷ ಕೋಟಿ ನಷ್ಟವಾಗಿದೆಯೆಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಜಿಎಸ್'ಟಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮೊಯ್ಲಿ, ಯುಪಿಎ ಸರ್ಕಾರವು ಏಳೆಂಟು ವರ್ಷಗಳ ಹಿಂದೆ ಜಿಎಸ್'ಟಿಯನ್ನು ಜಾರಿಗೊಳಿಸಲುದ್ದೇಶಿಸಿದಾಗ ವಿನಾಕಾರಣ ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು, ಬಿಜೆಪಿಯ ಹಾನಿಕಾರಕ ರಾಜಕೀಯದಿಂದಾಗಿ ದೇಶಕ್ಕೆ ಪ್ರತಿವರ್ಷ 1.5 ಲಕ್ಷ ಕೋಟಿ ನಷ್ಟವಾಗುತ್ತಾ ಬಂದಿದೆ. ಅದನ್ನು ಯಾರು ಭರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರ ಜಾರಿಗೊಳಿಸಲುದ್ದೇಶಿಸಿರುವ ಜಿಎಸ್'ಟಿಯಲ್ಲಿ ಬಹಳ ರೀತಿಯ ತೆರಿಗೆಗಳಿವೆಯಲ್ಲದೇ, ದರಗಳೂ ಹೆಚ್ಚಿವೆ. ಇದು ಜಿಎಸ್'ಟಿಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆಯೆಂದು ಮೊಯ್ಲಿ ಹೇಳಿದ್ದಾರೆ.

ಪ್ರಸ್ತಾಪಿತ ಕೆಲವು ನಿಯಮಗಳು ತಾಂತ್ರಿಕವಾಗಿ ಸಿಂಹಸ್ವಪ್ನವಾಗಲಿದೆಯಲ್ಲದೇ, ಇನ್ನು ಕೆಲವು ಬಹಳ ಅಪಾಯಕಾರಿಯಾಗಿವೆ ಎಂದು ಅವರು ಹೇಳಿದ್ದಾರೆ.

ಅಂತರಾಜ್ಯ ವಹಿವಾಟುಗಳ ನಿಯಮಗಳು ಕ್ಲಿಷ್ಟಕರವಾಗಿದ್ದು, ಬಹಳಷ್ಟು ರೀತಿಯ ತೆರಿಗೆಗಳು ಹಾಗೂ ಸುಂಕಗಳಿವೆ. ಆದ್ದರಿಂದ 'ಒಂದು ದೇಶ, ಒಂದು ತೆರಿಗೆ' ವಿಚಾರವು ಕೇವಲ ಮಿಥ್ಯೆಯಾಗಿ ಉಳಿದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮವನ್ನು ಜಿಎಸ್'ಟಿಯಿಂದ ಹೊರಗಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೊಯ್ಲಿ, ಕಪ್ಪು-ಹಣ ಸಂಗ್ರಹವಾಗುವುದೇ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ. ಅದನ್ನೇಕೆ ಸರ್ಕಾರ ಜಿಎಸ್'ಟಿ ಪರಿಧಿಯಿಂದ ಹೊರಗಿಟ್ಟಿದೆ? ಎಂದು ಪ್ರಶ್ನಿಸಿದ್ದಾರೆ.

click me!