ದೇಶದ ಬೆನ್ನೆಲುಬಾದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಬಲಗೊಳಿಸಲು ಮೋದಿ ಸರಕಾರಕ್ಕೆ ಆರೆಸ್ಸೆಸ್ ಸಲಹೆ

By Suvarna Web DeskFirst Published Sep 30, 2017, 5:47 PM IST
Highlights

"ನಮ್ಮ ನೀತಿ ಆಯೋಗ ಹಾಗೂ ಆರ್ಥಿಕ ಸಲಹೆಗಾರರು ಅದೇ ಹಳೆಯ ಆರ್ಥಿಕ ತತ್ವಗಳ ಜಿಡ್ಡಿನಿಂದ ಹೊರಬಂದು ಯೋಚಿಸಬೇಕು. ನಮ್ಮ ದೇಶದ ವಾಸ್ತವ ಸ್ಥಿತಿಯ ಆಧಾರದ ಮೇಲೆ ಆರ್ಥಿಕ ಅನುಭವಗಳೊಂದಿಗೆ ನೀತಿಗಳನ್ನು ರೂಪಿಸಬೇಕು," ಎಂದೂ ಅವರು ಸಲಹೆ ನೀಡಿದ್ದಾರೆ.

ನಾಗಪುರ(ಸೆ. 30): ಕೇಂದ್ರ ಸರಕಾರ ನಡೆಸುತ್ತಿರುವ ಆರ್ಥಿಕ ಸುಧಾರಣೆ ಕ್ರಮಗಳನ್ನು ಆರೆಸ್ಸೆಸ್ ಸ್ವಾಗತಿಸಿದೆ. ಆದರೆ, ಚಿಕ್ಕ ಮತ್ತು ಮಧ್ಯಮ ಉದ್ಯಮಗಳಿಗೆ ಹೆಚ್ಚು ಹೊರೆಯಾಗದಂತೆ ಜಾಗ್ರತೆ ವಹಿಸಿ ಎಂದೂ ಮೋದಿ ಸರಕಾರಕ್ಕೆ ಆರೆಸ್ಸೆಸ್ ಕಿವಿಮಾತು ಹೇಳಿದೆ.

"ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವಾಗ ಕೆಲ ಅಸ್ಥಿರತೆಗಳು ಮತ್ತು ಆಘಾತಗಳು ನಿರೀಕ್ಷಿತವೇ. ಆದರೆ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಇದರ ಬಿಸಿ ಹೆಚ್ಚು ತಾಗದಂತೆ ನೋಡಿಕೊಳ್ಳಬೇಕು. ಇವುಗಳನ್ನ ಅತೀ ಹೆಚ್ಚು ಸಬಲಗೊಳಿಸಬೇಕು," ಎಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಸಲಹೆ ನೀಡಿದ್ದಾರೆ.

Latest Videos

ಎಸ್'ಎಂಇಗಳು ಯಾಕೆ ಮುಖ್ಯ?
"ಕಿರು ಮತ್ತು ಮಧ್ಯಮ ಉದ್ದಿಮೆಗಳು ಅರ್ಥ ವ್ಯವಸ್ಥೆಯಲ್ಲಿ ಬಹಳ ಮುಖ್ಯ. ಇವುಗಳು ಭಾರತದ ಕೌಟುಂಬಿಕ ವ್ಯವಸ್ಥೆಯ ಬೇರನ್ನು ಗಟ್ಟಿಗೊಳಿಸುತ್ತವೆ. ಜಾಗತಿಕ ಆರ್ಥಿಕ ಕುಸಿತದ ವೇಳೆ ನಮ್ಮ ಅರ್ಥ ವ್ಯವಸ್ಥೆಗೆ ಇವು ಭದ್ರತೆ ಒದಗಿಸುತ್ತವೆ. ಇಲ್ಲಿ ಭ್ರಷ್ಟಾಚಾರ ಪ್ರಮಾಣವೂ ಕಡಿಮೆಯೇ. ಅಲ್ಲದೇ ಕೋಟಿಗಟ್ಟಲೆ ಉದ್ಯೋಗಗಳು ಸೃಷ್ಟಿಯಾಗುವುದು ಇಲ್ಲಿಯೇ. ಸಮಾಜದ ಕೊನೆಯ ಸ್ತರದಲ್ಲಿರುವ ಜನರು ಇರುವುದು ಬಹುತೇಕ ಈ ಕ್ಷೇತ್ರಗಳಲ್ಲಿಯೇ. ಹೀಗಾಗಿ, ಈ ಉದ್ದಿಮೆಗಳು ಬಲಗೊಳ್ಳುವುದು ಬಹಳ ಮುಖ್ಯ" ಎಂದು ಆರೆಸ್ಸೆಸ್ ಮುಖ್ಯಸ್ಥರು ಹೇಳಿದ್ದಾರೆ.

ಇಲ್ಲಿ ವಿಜಯದಶಮಿ ಸಂದರ್ಭದಲ್ಲಿ ಭಾಷಣ ಮಾಡಿದ ಭಾಗವತ್, ಜಾಗತಿಕ ಆರ್ಥಿಕ ನೀತಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೈತಿಕತೆ, ಪರಿಸರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಕುಸಿತ ಕಾಣಲು ಈ ಜಾಗತಿಕ ನೀತಿಗಳ ದೋಷವೇ ಕಾರಣ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನಮ್ಮ ನೀತಿ ಆಯೋಗ ಹಾಗೂ ಆರ್ಥಿಕ ಸಲಹೆಗಾರರು ಅದೇ ಹಳೆಯ ಆರ್ಥಿಕ ತತ್ವಗಳ ಜಿಡ್ಡಿನಿಂದ ಹೊರಬಂದು ಯೋಚಿಸಬೇಕು. ನಮ್ಮ ದೇಶದ ವಾಸ್ತವ ಸ್ಥಿತಿಯ ಆಧಾರದ ಮೇಲೆ ಆರ್ಥಿಕ ಅನುಭವಗಳೊಂದಿಗೆ ನೀತಿಗಳನ್ನು ರೂಪಿಸಬೇಕು," ಎಂದೂ ಅವರು ಸಲಹೆ ನೀಡಿದ್ದಾರೆ.

ಜಿಡಿಪಿ ಮಾನದಂಡ ಬೇಡ:
ದೇಶದ ಅಭಿವೃದ್ಧಿ ಮಾನದಂಡವಾಗಿ ಜಿಡಿಪಿಯನ್ನು ಪರಿಗಣಿಸುವ ಕ್ರಮವನ್ನು ಆರೆಸ್ಸೆಸ್ ಸರಸಂಘಚಾಲಕರು ವಿರೋಧಿಸಿದ್ದಾರೆ. "ಅರ್ಥ ವ್ಯವಸ್ಥೆಯ ಪ್ರಗತಿ ಮತ್ತು ಆರೋಗ್ಯವನ್ನು ಅಳೆಯಲು ಜಿಡಿಪಿಯನ್ನೇ ಮಾನದಂಡವಾಗಿ ಈಗಲೂ ಬಳಸಲಾಗುತ್ತಿದೆ. ಆದರೆ ಇದು ತಪ್ಪು. ಉದ್ಯೋಗ ಪ್ರಮಾಣವು ಅರ್ಥಿಕತೆಯ ಮಾನದಂಡವಾಗಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಕೆಲಸ, ಹಾಗೂ ಒಳ್ಳೆಯ ಜೀವನ ಸಾಗಿಸಲು ಬೇಕಾದ ಸಂಬಳ, ಇವು ನಮಗೆ ಮುಖ್ಯ," ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.

click me!