
ಬೆಂಗಳೂರು : ಉದ್ಯಮಿ ಲೋಕನಾಥನ್ ಪುತ್ರ ವಿದ್ವತ್ ಮೇಲಿನ ಮಾರಾಣಾಂತಿಕ ಹಲ್ಲೆ ಆರೋಪದಲ್ಲಿ ಜೈಲು ಸೇರಿರುವ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಎರಡನೇ ಬಾರಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನಗರದ 63 ನೇ ಸೆಷನ್ಸ್ ನ್ಯಾಯಾಲಯ ಅಂತಿಮ ಆದೇಶವನ್ನು ಇಂದು ಪ್ರಕಟಿಸಲಿದೆ.
ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ನಲಪಾಡ್ ಜಾಮೀನು ಅರ್ಜಿ ಸಲ್ಲಿಸಿದ್ದು, ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ವಿಚಾರಣೆ ನಡೆಸಿದರು. ಅರ್ಜಿಯ ವಿಚಾರಣೆ ಈ ವೇಳೆ ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರಿಂದ ವಾದ ಮಂಡಿಸಿದರು.
ಇನ್ನೂ ಪತ್ತೆಯಾಗದ ಆರೋಪಿ: ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್, ಪ್ರಕರಣ ಸಂಬಂಧದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಘಟನೆ ಸಂಬಂಧ ಪ್ರಮುಖ ಸಾಕ್ಷ್ಯಗಳ ಹೇಳಿಕೆಗಳನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಿಲ್ಲ. ಶೀಘ್ರದಲ್ಲಿ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲಿದ್ದು, ಫರ್ಜಿ ಕಫೆ, ಮಲ್ಯಆಸ್ಪತ್ರೆ ಬಳಿಯ ಘಟನೆ ಸಂಬಂಧ 15 ಪ್ರಮುಖ ಸಾಕ್ಷ್ಯಗಳು ಹೇಳಿಕೆ ದಾಖಲಿಸಲಾಗುತ್ತಿದೆ. ಸಾಕ್ಷ್ಯಿಗಳ ಹೇಳಿಕೆಗಳು ಘಟನೆಯ ಕೌರ್ಯವನ್ನು ಸಾರುತ್ತಿದೆ.
ಅಲ್ಲದೆ, ಪ್ರಕರಣದ ಒಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಇನ್ನೂ ಆತನನ್ನು ಬಂಧಿಸಿಲ್ಲ. ಈ ಪ್ರಕರಣದಲ್ಲಿನ ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರುವಷ್ಟು ಪ್ರಬಲರಾಗಿದ್ದಾರೆ. ಮತ್ತು ಈಗಾಗಲೇ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದು ತನಿಖೆ ವೇಳೆ ಪತ್ತೆಯಾಗಿದೆ. ಇನ್ನು, ಆರೋಪ ಪಟ್ಟಿ ಸಲ್ಲಿಸಿದ ತಕ್ಷಣ ಜಾಮೀನು ಮಂಜೂರು ಮಾಡಬೇಕೆಂಬ ಕಾನೂನು ಇಲ್ಲ. ಈ ಹಂತದಲ್ಲಿ ಜಾಮೀನು ಮಂಜೂರು ಮಾಡಿದರೆ ತನಿಖೆ ಮೇಲೆ ಪ್ರಭಾವ ಉಂಟಾಗಬಹುದು.
ಸಾಕ್ಷಿದಾರರು ತಾವು ನೀಡಿದ ಹೇಳಿಕೆಯನ್ನೇ ಬದಲಾಯಿಸುವ ಸಾಧ್ಯತೆಯಿದೆ. ಈ ಎಲ್ಲಾ ಸಾಧ್ಯತೆಗಳು ಇರುವ ಕಾರಣ ಆರೋಪಿ ಗಳಿಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ನಲಪಾಡ್ ಪರ ವಕೀಲ ಉಸ್ಮಾನ್ ವಾದ ಮಂಡಿಸಿ, ಸರ್ಕಾರಿ ವಕೀಲರು ನ್ಯಾಯಾಲ ಯದ ದಿಕ್ಕು ತಪ್ಪಿಸುತ್ತಿದ್ದಾರೆ. ಏಕೆಂದರೆ, ಈ ಹಿಂದೆ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ. ಹೀಗಾಗಿ ಜಾಮೀನು ನೀಡಬಾರದು ಎಂದು ವಾದಿಸಿದ್ದ ಅರ್ಜಿದಾರರ ಪರ ವಕೀಲರು ಈಗ ತನಿಖೆ ಪೂರ್ಣಗೊಳ್ಳುವವರೆಗೂ ಜಾಮೀನು ನೀಡ ಬಾರದು ಎಂದು ಹೇಳುತ್ತಿದ್ದಾರೆ.
ಇದು ವಿನಾಕಾರಣ ನಮ್ಮ ಕಕ್ಷಿದಾರರು ಬಿಡುಗಡೆ ತಡೆ ಯೊಡ್ಡಲು ಮಾಡುತ್ತಿರುವ ಯತ್ನದಂತೆ ಕಾಣುತ್ತಿದೆ. ಈ ಪ್ರಕರಣದಲ್ಲಿ ಈಗ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಸಾಕ್ಷಿಗಳು ಹೇಳಿಕೆ ನೀಡಿ ಯಾಗಿರುವುದರಿಂದ ಅವರನ್ನು ಮತ್ತೆ ಪ್ರಭಾವಿಸುತ್ತಾರೆ ಎಂಬ ವಾದದಲ್ಲಿ ಹುರುಳಿಲ್ಲ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.