
ನವದೆಹಲಿ (ಜ.19): 2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಹವಾ ಈಗಲೂ ಮುಂದುವರೆದಿದ್ದು, ಈಗ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ 335 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ.
ಇದೇ ವೇಳೆ ಕಾಂಗ್ರೆಸ್ ನೇತೃತ್ವದ ಯುಪಿಎ 89 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ‘ರಿಪಬ್ಲಿಕ್ ಟೀವಿ’ ಆಂಗ್ಲ ಸುದ್ದಿವಾಹಿನಿ ಗುರುವಾರ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ಅನಿಸಿಕೆ ವ್ಯಕ್ತವಾಗಿದೆ. ಇದೇ ವೇಳೆ ಈ ಸಮೀಕ್ಷೆಯ ಅನ್ವಯ ಕರ್ನಾಟಕದಲ್ಲಿ ಬಿಜೆಪಿ 22, ಕಾಂಗ್ರೆಸ್ 5 ಮತ್ತು ಜೆಡಿಎಸ್ 1 ಸ್ಥಾನ ಗೆಲ್ಲಲಿದೆ.
ಕರ್ನಾಟಕದ ವಿಧಾನಸಭೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಹಲವು ಸಮೀಕ್ಷೆಗಳು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದವು. ಆದರೆ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್, ತನ್ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಎದುರಿಸಲಿದೆ. ಹೀಗಾಗಿ ರಾಜ್ಯದಲ್ಲಿ ರಾಹುಲ್ ಚರಿಷ್ಮಾ ಲೆಕ್ಕಕ್ಕೆ ಬರುವ ಸಾಧ್ಯತೆ ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್'ಗೆ ಈಗಲೂ ಸಿಎಂ ಸಿದ್ದರಾಮಯ್ಯ ಅವರ ಚರಿಷ್ಮಾವೇ ಅನಿವಾರ್ಯ ಎಂಬುದು ಸಾಬೀತಾಗಿದೆ.
ಎನ್‌ಡಿಎಗೆ ಮತ್ತೆ ಅಧಿಕಾರ:
ರಿಪಬ್ಲಿಕ್ ಸಮೀಕ್ಷೆ ಅನ್ವಯ, ಈಗಲೂ ಕೇಂದ್ರದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಹವಾ ಮುಂದುವರೆದಿದ್ದು, ಎನ್‌ಡಿಎ 335 ಸ್ಥಾನಗಳಿಸಲಿದೆ ಎಂದು ಹೇಳಲಾಗಿದೆ.
ಇನ್ನು ಈಗಷ್ಟೇ ಕಾಂಗ್ರೆಸ್ ಅಧ್ಯಕ್ಷ ಗಾದಿ ಹೊತ್ತಿರುವ ರಾಹುಲ್ ಗಾಂಧಿ, ತಕ್ಷಣಕ್ಕೆ ಯಾವುದೇ ಮ್ಯಾಜಿಕ್ ಮಾಡುವ ಸಾಧ್ಯತೆ ಇಲ್ಲ. ಜೊತೆಗೆ ಯುಪಿಎದ ಇತರೆ ಮಿತ್ರಪಕ್ಷಗಳೂ ಕೂಡಾ ಎನ್‌ಡಿಎ ಓಟಕ್ಕೆ ಬ್ರೇಕ್ ಹಾಕುವ ಸಾಮಥ್ಯ ಹೊಂದಿಲ್ಲ. ಆದರೆ ಹಿಂದಿನ ಚುನಾವಣೆಗೆ ಹೋಲಿಸಿದರೆ ಎನ್‌ಡಿಎ 6 ಸ್ಥಾನ ಕಳೆದುಕೊಳ್ಳಲಿದೆ. ಅದೇ ವೇಳೆ ಯುಪಿಎ ತನ್ನ ಬಲವನ್ನು 29 ಸೀಟುಗಳಷ್ಟು ಹೆಚ್ಚಿಸಿಕೊಂಡರೂ ಎನ್'ಡಿಎ ಹತ್ತಿರಕ್ಕೂ ಸಾಗಲಾರದು. ಈ ಎರಡೂ ಬಣಗಳ ಹೋರಾಟದಲ್ಲಿ ಇತರೆ ಪಕ್ಷಗಳು ಭಾರೀ ಹೊಡೆತ ತಿನ್ನಲಿದ್ದು, ಅವುಗಳ ಮತಗಳಿಕೆ ಪ್ರಮಾಣ ಶೇ.5.8 ರಷ್ಟು ಇಳಿಯಲಿದೆ ಎಂದು ಸಮೀಕ್ಷೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.