
ನವದೆಹಲಿ(ನ. 09): ನರೇಂದ್ರ ಮೋದಿ ಪಕ್ಕಾ ಟೈಮಿಂಗ್'ನಲ್ಲಿ ಹೊಸ ಸುಧಾರಣೆ ಜಾರಿಗೆ ತಂದಿದ್ದಾರೆ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಮೂಲಕ ಮೋದಿಯವರು ಒಂದೇ ಕಲ್ಲಿಗೆ ಹಲವು ಗುರಿಗಳನ್ನು ಹೊಡೆದುರುಳಿಸಿದ್ದಾರೆ. ಭಾರತದ ಅರ್ಥವ್ಯವಸ್ಥೆಯನ್ನೇ ಕುಸಿಯುವಂತೆ ಪಾಕಿಸ್ತಾನದ ಮಾಸ್ಟರ್'ಪ್ಲಾನ್'ಗೆ ಪ್ರತಿಯಾಗಿ ಮೋದಿ ಮಾಸ್ಟರ್'ಸ್ಟ್ರೈಕ್ ಮಾಡಿದ್ದಾರೆ.
ಪಾಕ್'ಗೆ ಹೇಗೆ ಆಘಾತ?
ಮೊದಲೇ ಹೇಳಿದಂತೆ ಭಾರತವನ್ನು ಸಮರಾಂಗಣದಲ್ಲಿ ನೇರಾನೇರವಾಗಿ ಎದುರಿಸುವುದು ಕಷ್ಟಸಾಧ್ಯವಾದ್ದರಿಂದ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸಿದರೆ ಸುಲಭವಾಗಿ ಏರಿಹೋಗಬಹುದು ಎಂಬುದು ಪಾಕಿಸ್ತಾನದ ಹವಣಿಕೆ. ಅರ್ಥವ್ಯವಸ್ಥೆ ದುರ್ಬಲಗೊಳಿಸಲು ಇರುವ ಉಪಾಯವೆಂದರೆ ನಕಲಿ ಕರೆನ್ಸಿ ನೋಟುಗಳನ್ನು ದೊಡ್ಡ ಪ್ರಮಾಣದಲ್ಲಿ ಮುದ್ರಿಸಿ ಭಾರತದ ಮಾರುಕಟ್ಟೆಗೆ ಬಿಡುವುದು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್'ಐ ಇಂಥ 500 ಮತ್ತು 1000 ಮುಖಬೆಲೆಯ ನಕಲಿ ರೂಪಾಯಿ ಕರೆನ್ಸಿಗಳನ್ನು ಪಾಕಿಸ್ತಾನದಲ್ಲಿ ಮುದ್ರಿಸಲಾಗುತ್ತಿರುವುದನ್ನು ಭಾರತದ ಗುಪ್ತಚರರು ಪತ್ತೆಹಚ್ಚಿದ್ದರು. ಒಂದು ಮಾಹಿತಿ ಪ್ರಕಾರ 2010ರಲ್ಲಿ ಭಾರತಕ್ಕೆ ಬಂದ ನಕಲಿ ಕರೆನ್ಸಿಗಳ ಒಟ್ಟು ಮೌಲ್ಯ 1,600 ಕೋಟಿ ಎಂಬ ಅಂದಾಜಿದೆ. ಇದು ಒಂದು ವರ್ಷದ ಕಥೆಯಷ್ಟೇ. ಕಳೆದ ಕೆಲ ವರ್ಷಗಳಿಂದೀಚೆ ಐಎಸ್'ಐ ಇಂಥ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ತಿಳಿದುಬಂದಿದೆ..
ಒಂದು ಸಾವಿರ ರೂಪಾಯಿ ನೋಟು ಮುದ್ರಿಸಲು ಆರ್'ಬಿಐಗೆ ತಗುಲುವ ವೆಚ್ಚ 29 ರೂಪಾಯಿ. ನಕಲಿ ನೋಟು ಮುದ್ರಿಸಲು ಸುಮಾರು 39 ರೂಪಾಯಿ ಖರ್ಚಾಗುತ್ತದೆ. ಆದರೆ, ಈ ನೋಟುಗಳನ್ನು ಭಾರತದ ಮಾರುಕಟ್ಟೆಯಲ್ಲಿ ವಿವಿಧ ಕಳ್ಳದಂಧೆಕೋರರ ಮೂಲಕ ಸಾಗಿಸಿ ಪ್ರತೀ ನೋಟಿಗೆ ಶೇ.30-40ರಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ. ಅಂದರೆ ಸಾವಿರ ಮುಖಬೆಲೆಯ ಒಂದು ನೋಟಿಗೆ ಐಎಸ್'ಐ ಸುಮಾರು 300-400 ರೂಪಾಯಿ ಗಳಿಸುತ್ತದೆ. ಇದರೊಂದಿಗೆ ಭಾರತದ ಅರ್ಥವ್ಯವಸ್ಥೆಯನ್ನು ಹಾಳು ಮಾಡುವುದರ ಜೊತೆಗೆ ಹಣದ ಲಾಭವನ್ನೂ ಮಾಡಿಕೊಳ್ಳುವುದು ಪಾಕ್ ಕುತಂತ್ರವಾಗಿತ್ತು.
ಈಗ ಪ್ರಧಾನಿ ಮೋದಿ 500 ಮತ್ತು 1000 ಮುಖಬೆಲೆಯ ನೋಟುಗಳನ್ನೇ ರದ್ದುಗೊಳಿಸುವ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಪಾಕಿಸ್ತಾನ ಈಗ ಬೇರೆ ಯಾವ ವಾಮ ಮಾರ್ಗದಲ್ಲಿ ಭಾರತದ ಮೇಲೆ ಏರಿ ಬರುತ್ತದೆ ಎಂದು ಕಾದುನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.