
ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10 ಮೀಸಲು ನೀಡುವ ಕೇಂದ್ರ ಸರ್ಕಾರದ ನಿರ್ಧಾರ ದಿಂದಾಗಿ ಸುಮಾರು 19 ಕೋಟಿ ಮಂದಿಗೆ ಅನುಕೂಲವಾಗ ಬಹುದು ಎಂದು ಆಂಗ್ಲ ದೈನಿಕವೊಂದು ಲೆಕ್ಕಾಚಾರ ಮಾಡಿದೆ. 2018ರಲ್ಲಿ ಭಾರತದ ಒಟ್ಟು ಜನಸಂಖ್ಯೆ 135 ಕೋಟಿ. 2015 - 16ನೇ ಸಾಲಿನ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ ಪ್ರಕಾರ, ಶೇ. 26ರಷ್ಟು ಮಂದಿ ಒಬಿಸಿ, ಎಸ್ಸಿ ಹಾಗೂ ಎಸ್ಟಿ ಯಾವ ವರ್ಗಕ್ಕೂ ಸೇರುವುದಿಲ್ಲ.
ಅವರೆಲ್ಲಾ ಮೀಸಲಾತಿ ಲಾಭ ಪಡೆಯದ ಮೇಲ್ವರ್ಗ ಎಂದು ಪರಿಗಣಿಸಿದರೆ, ಒಟ್ಟು ಜನಸಂಖ್ಯೆಯಲ್ಲಿ ಅದರ ಪಾಲು 35 ಕೋಟಿ. ಕೇಂದ್ರ ಸರ್ಕಾರ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮಾತ್ರವೇ ಮೀಸಲಾತಿ ನೀಡುತ್ತಿರುವುದರಿಂದ 35 ವರ್ಷ ಮೇಲ್ಪಟ್ಟವರಿಗೆ ಇದರ ಲಾಭ ಸಿಗುವುದಿಲ್ಲ. 2011 ರ ಜನಗಣತಿಯ ಪ್ರಕಾರ35 ವರ್ಷದೊಳಗಿನವರ ಸಂಖ್ಯೆ ದೇಶದಲ್ಲಿ ಶೇ.68 ರಷ್ಟಿದೆ. ಆ ಲೆಕ್ಕ ಹಿಡಿದರೆ, ಸಂಭವನೀಯ ಫಲಾನುಭವಿಗಳ ಸಂಖ್ಯೆ 23.9 ಕೋಟಿಗೆ ಇಳಿಯುತ್ತದೆ.
ಆದರೆ ವಾರ್ಷಿಕ 8 ಲಕ್ಷ ರು. ಆದಾಯ ಮಿತಿಯನ್ನು ನಿಗದಿಪಡಿಸಿರುವುದರಿಂದ ಅಷ್ಟೂ ಮಂದಿಗೆ ಮೀಸಲು ಸಿಗುವುದು ಅನುಮಾನ. ಜನರ ಆದಾಯ ಮಾಹಿತಿ ಸರ್ಕಾರದ ಬಳಿ ಇಲ್ಲದಿರುವುದರಿಂದ, ಎಷ್ಟು ಮಂದಿಗೆ ನಿಖರವಾಗಿ ಲಾಭ ದೊರೆಯುತ್ತದೆ ಎಂದು ಹೇಳಲಾಗದು. ಆದಾಗ್ಯೂ ತೆರಿಗೆ ರಿಟರ್ನ್ ಮುಂದಿಟ್ಟುಕೊಂಡು, ಪತ್ರಿಕೆ ಪ್ರಯತ್ನ ಮಾಡಿದೆ. 2017 - 18 ನೇ ಸಾಲಿನಲ್ಲಿ 4.99 ಕೋಟಿ ಆದಾಯ ತೆರಿಗೆ ರಿಟರ್ನ್‌ಗಳು ಸಲ್ಲಿಕೆಯಾಗಿವೆ. ಆ ಪೈಕಿ 3.55 ಕೋಟಿ ಜನರ ಆದಾಯ 5.5 ಲಕ್ಷದಷ್ಟಿದೆ. 90 ಲಕ್ಷ ಜನರು ತಮ್ಮ ಆದಾಯ 5.5 ಲಕ್ಷದಿಂದ 9.5 ಲಕ್ಷ ರು.ನಷ್ಟಿದೆ ಎಂದು ಹೇಳಿಕೊಂಡಿದ್ದಾರೆ.
ಇದರ ಸರಾಸರಿ ತೆಗೆದರೆ 7.4 ಲಕ್ಷ ರು. ವಾರ್ಷಿಕ ಆದಾಯ ಬರುತ್ತದೆ. 23.9 ಕೋಟಿ ಜನರಲ್ಲಿ ಶೇ. 80 ಜನರಿಗೆ 8 ಲಕ್ಷ ರು. ಒಳಗೆ ವಾರ್ಷಿಕ ಆದಾಯ ಇದೆ ಎಂದು ಭಾವಿಸಿದರೂ, ಅಂಥವರ ಸಂಖ್ಯೆ ೧೯ ಕೋಟಿ ಸುಮಾರಿನಲ್ಲಿ ಬರುತ್ತದೆ ಎಂದು ‘ಹಿಂದುಸ್ತಾನ್ ಟೈಮ್ಸ್’ ಲೆಕ್ಕ ಹಾಕಿದೆ.
ಮತ ಲೆಕ್ಕ: 2014 ರ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳನ್ನು ಪರಿಗಣಿಸುವುದಾದರೆ, ಆಗ ಅಧಿಕಾರಕ್ಕೆ ಬಂದಿದ್ದ ಎನ್‌ಡಿಎ ಪರ ಒಟ್ಟಾರೆ 17 ಕೋಟಿ ಮತ ಹಾಗೂ ಯುಪಿಎ ಪರ 10 ಕೋಟಿ ಮತ ಚಲಾವಣೆಯಾಗಿತ್ತು. ಇನ್ನು 2009ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಯುಪಿಎ ಪರ 12 ಕೋಟಿ ಮತ್ತು ಅಧಿಕಾರಕ್ಕೆ ಬರುವಲ್ಲಿ ವಿಫಲವಾಗಿದ್ದ ಎನ್‌ಡಿಎ 7.8 ಕೋಟಿ ಮತ ಪಡೆದಿತ್ತು. ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ಕೇಂದ್ರ ಸರ್ಕಾರ ಈಗ ಘೋಷಿಸಿರುವ ಯೋಜನೆಯ ನೇರ ಫಲಾನುಭವಿಗಳೇ 19 ಕೋಟಿ. ಈ ಪೈಕಿ ಅರ್ಧದಷ್ಟು ಮತಗಳು ಚಲಾವಣೆಯಾದರೂ, ಎನ್‌ಡಿಎಗೆ ಮತ್ತೊಂದು ಅಧಿಕಾರದ ಅವಕಾಶ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.