
ಹೊಸದಿಲ್ಲಿ(ಡಿ.1): ಬೇನಾಮಿ ಆಸ್ತಿ ಹೊಂದಿರುವವರೇ ಎಚ್ಚರ. ಕೇಂದ್ರ ಸರ್ಕಾರವು ಅಕ್ರಮ ಆಸ್ತಿಗಳನ್ನು ಪತ್ತೆ ಮಾಡಲು ಆಸ್ತಿ ನೋಂದಣಿಗೆ ಆಧಾರ್ ಸಂಯೋಜಿಸುವುದು ಖಚಿತವಾಗಿದ್ದು, ಬೇನಾಮಿ ಆಸ್ತಿದಾರರಿಗೆ ಬಹುತೇಕ ಕೊನೆಯ ಎಚ್ಚರಿಕೆ ಸಂದೇಶ ರವಾನೆಯಾದಂತಿದೆ. ನೋಟು ರದ್ದು ಮೂಲಕ ಕಾಳಧನ, ಖೋಟಾನೋಟಿಗೆ ಕಡಿವಾಣ ಹಾಕಿದ್ದ ಕೇಂದ್ರ ಸರ್ಕಾರ ಈಗ ಆಧಾರ್ ಮೂಲಕ ಬೇನಾಮಿ ಆಸ್ತಿಗೆ ಪೆಟ್ಟು ನೀಡಲಿದೆ.
‘ಬೇನಾಮಿ ಆಸ್ತಿಗಳ ರೂಪದಲ್ಲಿ ಸಂಗ್ರಹವಾಗಿರುವ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಲು 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ‘ಆಧಾರ್’ ಅನ್ನು ಬ್ರಹ್ಮಾಸ್ತ್ರವಾಗಿ ಬಳಸಿಕೊಳ್ಳಲಾಗುತ್ತದೆ’ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಿಸಿದ್ದಾರೆ. ಆಧಾರ್‌ಅನ್ನು ಆಸ್ತಿ ನೋಂದಣಿಗೆ ಕಡ್ಡಾಯಗೊಳಿಸಲುಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಸುಳಿವನ್ನು ಕೇಂದ್ರ ಸಚಿವ ಹರ್ದೀಪ್ ಪುರಿ ಇತ್ತೀಚೆಗೆ ಹೇಳಿದ್ದರು.
ಇದರ ಬೆನ್ನಲ್ಲೇ ಮೋದಿ ಅವರು ಇದನ್ನು ಖಚಿತಪಡಿಸಿದ್ದಾರೆ. ಆಧಾರ್ ಕಡ್ಡಾಯವಾದಲ್ಲಿ ಅಕ್ರಮ ಸಂಪಾದನೆಯಿಂದ ಆಸ್ತಿ ಖರೀದಿಸಿ ನೋಂದಣಿ ಮಾಡಿದರೆ ಸುಲಭವಾಗಿ ಸಿಕ್ಕಿಬೀಳುತ್ತಾರೆ. ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆ ಆಯೋಜಿಸಿದ್ದ ನಾಯಕತ್ವ ಶೃಂಗದಲ್ಲಿ ಗುರುವಾರ ಮಾತನಾಡಿದ ಅವರು, ಆಧಾರ್ ಯೋಜನೆಯಿಂದಾದ ಲಾಭಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಬೇನಾಮಿ ಆಸ್ತಿಗಳ ವಿರುದ್ಧ ಆಧಾರ್ ಅನ್ನು ಬಳಸಿಕೊಳ್ಳಲಾಗುತ್ತದೆ. ಬೇನಾಮಿ ಆಸ್ತಿ ವಿರುದ್ಧದ ಹೋರಾಟದಲ್ಲಿ ಅದು ಬ್ರಹ್ಮಾಸ್ತ್ರವಾಗಲಿದೆ ಎಂದು ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.