ಮೋದಿ ಧರಿಸಿದ ಆ ಶಲ್ಯ ಬೇಕೆಂದು ಟ್ವೀಟ್ ಮಾಡಿದ ಹುಡುಗಿ; ಪ್ರಧಾನಿ ಕೊಟ್ಟ ಪ್ರತಿಕ್ರಿಯೆ ಏನು?

By Suvarna Web DeskFirst Published Feb 27, 2017, 10:55 AM IST
Highlights

ಪ್ರಧಾನಿಯನ್ನು ಆಧುನಿಕ ಕರ್ಮಯೋಗಿ ಎಂದು ಕರೆದಿರುವ ಈಕೆ, ಒಂದು ದಿನದಲ್ಲಿ ಎಲ್ಲವೂ ಕನಸಿನಂತೆ ನಡೆದುಹೋಯಿತು ಎಂದು ತಮ್ಮ ಟ್ವೀಟ್'ನಲ್ಲಿ ಉದ್ಗರಿಸಿದ್ದಾರೆ.

ನವದೆಹಲಿ(ಫೆ. 27): ಮೂರು ದಿನಗಳ ಹಿಂದೆ ಮಹಾಶಿವರಾತ್ರಿಯಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ 112 ಅಡಿ ಎತ್ತರದ ಆದಿಯೋಗಿ ಶಿವನ ಬೃಹತ್ ಮೂರ್ತಿ ಅನಾವರಣಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅಂದು ಪ್ರಧಾನಿ ಮೋದಿಯವರಿಗೆ ಶಿವನ ಚಿತ್ರವಿರುವ ಅದ್ಭುತ ಶಲ್ಯವನ್ನು ಉಡುಗೊರೆಯಾಗಿ ನೀಡಿದರು. ಆ ಸುಂದರ ಶಲ್ಯ ಧರಿಸಿ ಮೋದಿ ಪೋಸ್ ಕೊಟ್ಟಿರುವ ಫೋಟೋವೊಂದು ಎಲ್ಲಾ ಕಡೆ ವೈರಲ್ ಆಯಿತು. ಈ ವೇಳೆ, ಶಿಲ್ಪಿ ತಿವಾರಿ ಎಂಬ ಮಹಿಳೆಯೊಬ್ಬರು ತನಗೆ ಮೋದಿಯವರ ಆ ಶಲ್ಯ ಬೇಕು ಎಂದು ಸುಮ್ಮನೆ ಟ್ವೀಟ್ ಮಾಡಿದರು. ಆದರೆ, ಸುಮ್ಮನೆ ಮಾಡಿದ ಟ್ವೀಟ್ ಆಕೆಯ ಜೀವನದ ಅವಿಸ್ಮರಣೀಯ ಕ್ಷಣಕ್ಕೆ ಎಡೆ ಮಾಡಿಕೊಡುತ್ತದೆಂದು ಆಕೆಗೇ ಗೊತ್ತಿರಲಿಲ್ಲ. ಆಕೆ ಟ್ವೀಟ್ ಮಾಡಿದ ಒಂದೇ ದಿನದೊಳಗೆ ಆಕೆ ಬಯಸಿದ ಶಲ್ಯ ಆಕೆಯ ಮನೆ ಬಾಗಿಲಿಗೆ ಬಂದಿತ್ತು. ಅದರ ಜೊತೆಗೆ, ಈಕೆ ಮಾಡಿದ ಟ್ವೀಟ್'ನ ಪ್ರಿಂಟೌಟ್ ತೆಗೆದು ಅದರಲ್ಲಿ ಮೋದಿಯವರು ಹಸ್ತಾಕ್ಷರ ಹಾಕಿದ ಕಾಗದವೂ ಬಂದಿತ್ತು.

Overwhelmed to receive blessings of Adiyogi from modern India's Karmayogi, PM @narendramodi, who is covering miles daily yet hears us all! 🙏 pic.twitter.com/QoT2pF6kK7

— shilpi tewari (@shilpitewari) February 25, 2017

ಇದನ್ನು ನಿರೀಕ್ಷಿಸದ ಶಿಲ್ಪಿ ತಿವಾರಿ ದೇಶದ ಪ್ರಧಾನಿ ಸೌಜನ್ಯಕ್ಕೆ ಬೆರಗಾಗಿದ್ದಾರೆ. ಪ್ರಧಾನಿಯನ್ನು ಆಧುನಿಕ ಕರ್ಮಯೋಗಿ ಎಂದು ಕರೆದಿರುವ ಈಕೆ, ಒಂದು ದಿನದಲ್ಲಿ ಎಲ್ಲವೂ ಕನಸಿನಂತೆ ನಡೆದುಹೋಯಿತು ಎಂದು ತಮ್ಮ ಟ್ವೀಟ್'ನಲ್ಲಿ ಉದ್ಗರಿಸಿದ್ದಾರೆ.

click me!