ಆಧುನಿಕ ಭಗೀರಥ ದೇವರಾಜ್ ರೆಡ್ಡಿ : ಅಸಾಮಾನ್ಯ ಕನ್ನಡಿಗ

By Suvarna Web DeskFirst Published Oct 27, 2016, 4:51 PM IST
Highlights

ಚಿತ್ರದುರ್ಗದ ದೊಡ್ಡಸಿದ್ದವ್ವನಹಳ್ಳಿಯವರಾದ ದೇವರಾಜ್ ರೆಡ್ಡಿ ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ತಮ್ಮ ಅಧ್ಯಯನವನ್ನೇ ಆಧಾರವಾಗಿಟ್ಟುಕೊಂಡು ರಾಜ್ಯದ ಹಳ್ಳಿ ಹಳ್ಳಿಗೆ ತಿರುಗಿ ಬೋರ್ವೆಲ್ಗಳಲ್ಲಿ ಜೀವ ತುಂಬಿದ್ದಾರೆ.

ಬತ್ತಿ ಹೋಗಿದ್ದ, ಒಂದು ತೊಟ್ಟು ನೀರನ್ನೂ ಕೊಡದ 20 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಮರು ಜೀವ ಕೊಟ್ಟವರು, 5 ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿ ಜಲಕ್ರಾಂತಿ ಮಾಡಿದ ಜಲಯೋಧ ಚಿತ್ರದುರ್ಗದ ದೇವರಾಜ್ ರೆಡ್ಡಿ.

ದೇವರಾಜ್ ರೆಡ್ಡಿ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಕೊಡಮಾಡುವ ಅಸಾಮಾನ್ಯ ಕನ್ನಡಿಗ-2016ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಬತ್ತಿ ಹೋಗಿದ್ದ ಬೋರ್ವೆಲ್ಗಳಲ್ಲಿ ಜಲ ಉಕ್ಕಿಸಿದ ಅಭಿನವ ಭಗೀರಥ ಇವರು.

ಚಿತ್ರದುರ್ಗದ ದೊಡ್ಡಸಿದ್ದವ್ವನಹಳ್ಳಿಯವರಾದ ದೇವರಾಜ್ ರೆಡ್ಡಿ ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ತಮ್ಮ ಅಧ್ಯಯನವನ್ನೇ ಆಧಾರವಾಗಿಟ್ಟುಕೊಂಡು ರಾಜ್ಯದ ಹಳ್ಳಿ ಹಳ್ಳಿಗೆ ತಿರುಗಿ ಬೋರ್ವೆಲ್ಗಳಲ್ಲಿ ಜೀವ ತುಂಬಿದ್ದಾರೆ.

ದೇವರಾಜ್ ರೆಡ್ಡಿಯವರು ತಮ್ಮದೇ ಆದ ವಿಶಿಷ್ಟ ತಂತ್ರಜ್ಞಾನದ ಮಾದರಿಯನ್ನು ಮಾಡಿಕೊಂಡಿದ್ದಾರೆ. ಅದರ ಪ್ರಕಾರ ಬತ್ತಿ ಹೋಗಿರುವ ಕೊಳವೆ ಬಾವಿ ಸುತ್ತ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು, ಮಳೆ ನೀರು ಮರುಪೂರಣವಾಗುವಂತೆ ಮಾಡಿಕೊಂಡರೆ, ಆ ಬೋರ್ವೆಲ್ಗೆ ಮರುಜೀವ ಬರುತ್ತದೆ.

ಕಳೆದ 30 ವರ್ಷಗಳಿಂದ ಬತ್ತಿ ಹೋಗಿದ್ದ ಬೋರ್ವೆಲ್ಗಳಿಗೆ ಜೀವ ತುಂಬುತ್ತಿರುವ ದೇವರಾಜ್ ರೆಡ್ಡಿಯವರ ಸೇವೆ ಅಗಾಧ. ರಾಜ್ಯದ ಸಾವಿರಾರು ಕೃಷಿಕರು, ಮಠಗಳು, ಸರ್ಕಾರಿ ಸಂಸ್ಥೆಗಳು, ಶಾಲಾ ಕಾಲೇಜುಗಳು ಹಾಗೂ ಕೈಗಾರಿಕೆಗಳು ಇವರ ಸೇವೆ ಪಡೆದುಕೊಂಡಿವೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದೇವರಾಜ್ ರೆಡ್ಡಿಯವರ ಕಾಯಂ ಸೇವೆ ಪಡೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ ಆಂಧ್ರಪ್ರದೇಶ ಸರ್ಕಾರ ಕೈಗೆತ್ತಿಕೊಂಡಿರುವ ದೇಶದ ಬೃಹತ್ ಕೊಳವೆ ಬಾವಿ ಮರುಪೂರಣ ಯೋಜನೆಗೆ ರೆಡ್ಡಿಯವರೇ ಸಲಹೆಗಾರರು.

ದೇವರಾಜ್ ರೆಡ್ಡಿಯವರ ತಂತ್ರಜ್ಞಾನದ ಲಾಭ ಪಡೆದಿರುವ ಅನೇಕ ರೈತರು ಇಂದು ತಮ್ಮ ಜಮೀನುಗಳಲ್ಲಿ ಇಂಗು ಗುಂಡಿಗಳನ್ನು ಮಾಡಿಕೊಂಡು, ಮತ್ತೆ ಕೆಲವರು ಬೋರ್ವೆಲ್ಗಳ ಮರುಪೂರಣ ತಂತ್ರಜ್ಞಾನ ಅಳವಡಿಸಿಕೊಂಡು ನೀರಿನ ಸ್ವಾವಲಂಬನೆ ಗಳಿಸಿದ್ದಾರೆ. ಅಲ್ಲದೇ, ಉತ್ತಮ ಇಳುವರಿ ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ದೇವರಾಜ್ ರೆಡ್ಡಿಯವರನ್ನು ಬರಪೀಡಿತ ಪ್ರದೇಶಗಳ ಜಲ ಜೋಗಿ ಎಂದು ಜನರು ಪ್ರೀತಿಯಿಂದ ಕರೆಯುತ್ತಾರೆ.

click me!